ADVERTISEMENT

ನೈತಿಕ ಮೌಲ್ಯಗಳೇ ಭಾರತದ ಅಂತಃಶಕ್ತಿ

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:30 IST
Last Updated 15 ಮೇ 2017, 5:30 IST
ಕಾರ್ಯಕ್ರಮದಲ್ಲಿ  ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ ಎಸ್.ಗುರುಮೂರ್ತಿ  ಮಾತನಾಡಿದರು. ಪಿ.ಎಸ್.ಆನಂದ್‌ರಾವ್, ಸುರೇಶ್‌ ರಾವ್, ಟಿ.ಎನ್.ರಾಘವೇಂದ್ರ,  ಕೆ.ಎಸ್.ಮಾಧವಮೂರ್ತಿ, ತಾರಕರಾಮ್, ಸ್ವಾಮಿ ಶಾಂತಾತ್ಮನಂದಜಿ ಮಹಾರಾಜ್, ಎಸ್.ಪ್ರಕಾಶ್, ಗೋಪಾಲಕೃಷ್ಣ ಹೆಗ್ಡೆ, ಟಿ.ವಿ.ರಾಜು, ಸ್ವಾಮಿ ವಿರೇಶಾನಂದ ಸರಸ್ವತಿ ಇದ್ದರು
ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ ಎಸ್.ಗುರುಮೂರ್ತಿ ಮಾತನಾಡಿದರು. ಪಿ.ಎಸ್.ಆನಂದ್‌ರಾವ್, ಸುರೇಶ್‌ ರಾವ್, ಟಿ.ಎನ್.ರಾಘವೇಂದ್ರ, ಕೆ.ಎಸ್.ಮಾಧವಮೂರ್ತಿ, ತಾರಕರಾಮ್, ಸ್ವಾಮಿ ಶಾಂತಾತ್ಮನಂದಜಿ ಮಹಾರಾಜ್, ಎಸ್.ಪ್ರಕಾಶ್, ಗೋಪಾಲಕೃಷ್ಣ ಹೆಗ್ಡೆ, ಟಿ.ವಿ.ರಾಜು, ಸ್ವಾಮಿ ವಿರೇಶಾನಂದ ಸರಸ್ವತಿ ಇದ್ದರು   

ತುಮಕೂರು: ‘ನೈತಿಕ ಮೌಲ್ಯಗಳು ಗಟ್ಟಿಯಾಗಿರುವವರೆಗೂ ಈ ದೇಶ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆ ಅರಿತು ಮೌಲ್ಯಗಳನ್ನು ಉಳಿಸಬೇಕಾಗಿದೆ’ ಎಂದು  ರಾಜಕೀಯ ಮತ್ತು ಅರ್ಥಿಕ ವಿಶ್ಲೇಷಕ ಎಸ್.ಗುರುಮೂರ್ತಿ ಹೇಳಿದರು.

ಭಾನುವಾರ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಶ್ರಮದ ರಜತ ಮಹೋತ್ಸವ ಪ್ರಯುಕ್ತ ಬೆಳ್ಳಿ ಹಬ್ಬ ರಜತ ಯಾನ ಕಾರ್ಯಕ್ರಮದಡಿ ಬ್ಯಾಂಕ್, ಜೀವವಿಮಾ ನಿಗಮದ ಅಧಿಕಾರಿಗಳು, ಲೆಕ್ಕ ಪರಿಶೋಧಕರಿಗೆ ಆಯೋಜಿಸಿದ್ದ ‘ರಜತ ಮಥಿತ– ರಜತ ಅರ್ಥ’  ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ವಿವಿಧತೆಯಲ್ಲಿ ಏಕತೆಯೇ ಈ ದೇಶದ ಅಂತಃಸತ್ವವಾಗಿದೆ. ಇಲ್ಲಿ ಅಭಿಪ್ರಾಯ ಭೇದ ಇರಬಹುದು; ಆದರೆ, ಆಕ್ರಮಣಕಾರಿ ಗುಣವಿಲ್ಲ. ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಬಾಂಧ್ಯವಕ್ಕೆ ಹೆಚ್ಚಿನ ಆದ್ಯತೆ ಇದೆ. ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಪರಸ್ಪರ ನಂಬಿಕೆ ಆಧಾರದ ಮೇಲೆ ಸಂಬಂಧಗಳು ಉಳಿದುಕೊಂಡು ಬರುತ್ತಿವೆ. ಇದಕ್ಕೆ ಮೂಲ ಕಾರಣ ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಮೌಲ್ಯಗಳು’ ಎಂದು ನುಡಿದರು.

ADVERTISEMENT

‘ಇತಿಹಾಸ ಕಾಲದಿಂದಲೂ ಭಾರತವು ಶ್ರೀಮಂತ ರಾಷ್ಟ್ರವೇ ಆಗಿತ್ತು. 11ರಿಂದ 14ನೇ ಶತಮಾನದವರೆಗೆ ಜಗತ್ತಿನಲ್ಲಿಯೇ ಭಾರತ ಶ್ರೀಮಂತ ರಾಷ್ಟ್ರವಾಗಿತ್ತು. 2ನೇ ಸ್ಥಾನ ಚೀನಾ ಹೊಂದಿತ್ತು. 15ನೇ ಶತಮಾನದಲ್ಲಿ ಚೀನಾ ಮೊದಲ ಸ್ಥಾನಕ್ಕೇರಿತು. ನಂತರದ ದಿನಗಳಲ್ಲಿ ಪಾಶ್ಚಿಮಾತ್ಯರ ಆಕ್ರಮಣದಿಂದ ನಮ್ಮ ದೇಶದ ಸಂಪತ್ತಿಗೆ ಧಕ್ಕೆಯಾಯಿತು’ ಎಂದು ವಿವರಿಸಿದರು.

‘ಪಾಶ್ಚಾತ್ಯ ಚಿಂತಕರು ನಮ್ಮ ದೇಶದ ಸಾಮಾಜಿಕ, ಶಿಕ್ಷಣ, ಸಾಂಸ್ಕೃತಿ, ಆರ್ಥಿಕ, ರಾಜಕೀಯ ಸ್ಥಿತಿಗತಿಯ ಬಗ್ಗೆ ತದ್ವಿರುದ್ಧವಾಗಿ ವ್ಯಾಖ್ಯಾನ ಮಾಡಿ ಕಳಂಕ ತರುವ ಪ್ರಯತ್ನ ಮಾಡಿದರು. ಅಂದು ಅವರು ಹೇಳಿದ ಮಾತುಗಳನ್ನೇ ಇಂದಿಗೂ ಈ  ನಮ್ಮಲ್ಲಿ  ಚರ್ಚೆ ಮಾಡುತ್ತಾರೆ. ಅದೇ ನಿಜ ಎಂದು ನಂಬುವವರೂ ಇದ್ದಾರೆ. ಆದರೆ, ವಾಸ್ತವ ಅರಿಯುವ ಪ್ರಯತ್ನ ಮಾಡಿಲ್ಲ’ ಎಂದು ವಿಶ್ಲೇಷಿಸಿದರು.

‘1991ರಲ್ಲಿ ಜಾಗತೀಕರಣ ಎಂಬ ಸುನಾಮಿ ಅಪ್ಪಳಿಸಿತು. ಆದರೆ, ಭಾರತ ಅದನ್ನು ಸಮರ್ಥವಾಗಿ ಎದುರಿಸಿತು. ಇದಕ್ಕೆ ಕಾರಣ ನಮ್ಮ ಹಳ್ಳಿ ಮತ್ತು ಪಟ್ಟಣ ವಾಸಿಗಳ ಆತ್ಮವಿಶ್ವಾಸದ ಬದುಕು, ವ್ಯವಹಾರಿಕ ಚತುರತೆಯೇ ಪ್ರಮುಖ ಕಾರಣವಾಗಿದೆ. ತಿರುಪುರದಂತಹ ಸಣ್ಣ ಪಟ್ಟಣದಲ್ಲಿನ ಜನರ ಉದ್ಯಮಶೀಲತೆಯ ಪ್ರವೃತ್ತಿ ಜಾಗತಿಕ ಮಟ್ಟದ ಉದ್ದಿಮೆದಾರರ ಗಮನ ಸೆಳೆಯಿತು’ ಎಂದು ವಿವರಿಸಿದರು.

‘ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆಯದೇ ಇರುವಂತಹವರೂ ಕುಶಲತೆಯಿಂದ ಉದ್ದಿಮೆದಾರರಾಗಿ ಬೆಳೆದಿದ್ದಾರೆ. ಬೆಂಜ್ ಕಾರುಗಳಲ್ಲಿ ಸಂಚರಿಸುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿ ಸಿಗುತ್ತವೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ದೆಹಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶಾಂತಾತ್ಮಾನಂದಜೀ ಮಹಾರಾಜ್ ಮಾತನಾಡಿ,‘ ದೇಶ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಇಟ್ಟಿದ್ದರೂ ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದೆ. ಇದೇ  ದೇಶದ ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದರು.

‘ಸ್ಟಾರ್ಟ್ ಅಪ್, ಡಿಜಿಟಲೀಕರಣ, ವಿದೇಶಿ ಉದ್ದಿಮೆದಾರರೊಂದಿಗೆ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಳ್ಳುವುದು ಸೇರಿ ಅನೇಕ ರೀತಿಯ ಹೆಜ್ಜೆಗಳನ್ನು ಸರ್ಕಾರ ಉದ್ಯಮ ಕ್ಷೇತ್ರದ ಅಭಿವೃದ್ಧಿಗೋಸ್ಕರ ಕೈಗೊಂಡಿದೆ. ಆದರೆ, ಬಡವರು, ಅಸಹಾಯಕ ವರ್ಗ ಸಂಕಷ್ಟ ಎದುರಿಸುತ್ತಲೇ ಇದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿರೇಶಾನಂದ ಸರಸ್ವತಿ ಪ್ರಾಸ್ತಾವಿಕ ಮಾತನಾಡಿದರು.

ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್‌ ಆಫ್ ಇಂಡಿಯಾ ಸಂಸ್ಥೆಯ ಸದಸ್ಯ ಗೋಪಾಲಕೃಷ್ಣ ಹೆಗ್ಡೆ, ಬೆಂಗಳೂರಿನ  ಎಸ್ಎಸ್‌ಎಂಆರ್‌ವಿ ಕಾಲೇಜಿನ ನಿರ್ದೇಶಕ ಡಾ.ಟಿ.ವಿ.ರಾಜು, ಲೆಕ್ಕಪರಿಶೋಧಕರಾದ ಕೆ.ಎಸ್.ಮಾಧವಮೂರ್ತಿ, ರಾಜ್ಯ ತೆರಿಗೆ ಸಲಹೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪ್ರಕಾಶ್, ಹಿರಿಯ ಲೆಕ್ಕಪರಿಶೋಧಕ ಎಂ.ವಿ.ರಾಮಚಂದ್ರ,  ಭಾರತೀಯ ಜೀವ ವಿಮಾ ನಿಗಮದ ಹಿರಿಯ ಶಾಖಾ ವ್ಯವಸ್ಥಾಪಕ ಟಿ.ಎಸ್.ತಾರಕರಾಮ್, ಜಿಲ್ಲಾ ತೆರಿಗೆ ಸಲಹೆಗಾರರ
ಸಂಘದ ಅಧ್ಯಕ್ಷ ಸುರೇಶ್‌ರಾವ್, ಲೆಕ್ಕಪರಿಶೋಧಕರಾದ ಪಿ.ಎಸ್.ಆನಂದರಾವ್, ಟಿ.ಎನ್.ರಾಘವೇಂದ್ರ ಇದ್ದರು.

ಶಿಕ್ಷಣ ನೀತಿ ಮನಸೋ ಇಚ್ಛೆ ಬದಲಾವಣೆ

‘ಸ್ವಾತಂತ್ರ್ಯದ ಬಳಿಕ 70 ವರ್ಷದಲ್ಲಿ ನಮ್ಮ ಶಿಕ್ಷಣ ನೀತಿಗಳು ಮನಸೋ ಇಚ್ಛೆ ಬದಲಾಗಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಸರ್ಕಾರ ಆಡಳಿತಕ್ಕೆ ಬಂದಾಗ ಬದಲಾಗುತ್ತಲೇ ಇರುತ್ತವೆ. ಹೀಗಾಗಿ, ಸಮರ್ಪಕ ಮತ್ತು ಗುಣಮಟ್ಟದ ಶಿಕ್ಷಣ ಲಭಿಸುತ್ತಿಲ್ಲ. ನಮ್ಮ ಪೂರ್ವಜರು ಪ್ರತಿಪಾದಿಸಿಕೊಂಡು ಬಂದ ಶಿಕ್ಷಣ ಪದ್ಧತಿಯ ಸಾರವನ್ನು ಇಂದಿನ ಶಿಕ್ಷಣ ನೀತಿಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಸ್ವಾಮಿ ಶಾಂತಾತ್ಮನಂದಜಿ ಮಹಾರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.