ADVERTISEMENT

ನೋಟು ರದ್ದತಿಯಿಂದ ಅವ್ಯವಸ್ಥೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:50 IST
Last Updated 9 ನವೆಂಬರ್ 2017, 9:50 IST
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮಾಡಿದರು
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮಾಡಿದರು   

ತುಮಕೂರು: ಕೇಂದ್ರ ಸರ್ಕಾರವು ಕಳೆದ ವರ್ಷ ಕೈಗೊಂಡ ದೊಡ್ಡ ಮುಖ ಬೆಲೆಯ ನೋಟು ರದ್ದತಿ ಕ್ರಮ ವಿರೋಧಿಸಿ ಪ್ರತಿಭಟನೆ ಹಾಗೂ ಪರವಾಗಿ ಸಂಭ್ರಮಾಚರಣೆ ಬುಧವಾರ ನಗರದಲ್ಲಿ ನಡೆದವು. ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಎಡಪಕ್ಷಗಳು, ಎಸ್‌ಡಿಪಿಐ ಕಾರ್ಯಕರ್ತರು ಅಶೋಕ ರಸ್ತೆಯ ಬಿ.ಎಸ್.ಎನ್.ಎಲ್ ಕಚೇರಿ ಹತ್ತಿರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಬಿ.ಜಿ.ಎಸ್. ವೃತ್ತದಲ್ಲಿ ಮುಖಂಡರೊಂದಿಗೆ ಸಂಭ್ರಮ ಆಚರಿಸಿದರು.
ಕಾಂಗ್ರೆಸ್ ಆಕ್ರೋಶ: ದೊಡ್ಡ ಮುಖ ಬೆಲೆಯ ನೋಟು ರದ್ದತಿಯಿಂದ ದೇಶದ ತುಂಬೆಲ್ಲ ಅವ್ಯವಸ್ಥೆ, ಅರಾಜಕತೆ ಉಂಟಾಗಿದೆ. ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ನೋಟು ರದ್ದತಿ ಕ್ರಮದಿಂದ ಕಪ್ಪು ಹಣದ ವ್ಯವಹಾರ, ನಕಲಿ ನೋಟು ಹಾವಳಿ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುತ್ತೇವೆ ಎಂದು ಜನರಿಗೆ ಹೇಳಿದ್ದರು. ಆದರೆ, ಅದ್ಯಾವುದನ್ನೂ ಮಾಡಿಲ್ಲ ಎಂದು ದೂರಿದರು. ಜನಸಾಮಾನ್ಯರು, ಕೂಲಿ ಕಾರ್ಮಿಕರು, ರೈತರು, ವ್ಯಾಪಾರಸ್ಥರು ಸೇರಿ ಎಲ್ಲ ಸ್ತರದ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆಪಾದಿಸಿದರು.

ADVERTISEMENT

ಈ ಪ್ರಕ್ರಿಯೆಯಲ್ಲಿ ದೇಶದಾದ್ಯಂತ ಅನೇಕ ಸಾವು ನೋವು ಸಂಭವಿಸಿದವು. ಇಂತಹ ಕುಟುಂಬಗಳಿಗೆ ಪರಿಹಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದು ಸೂಚಿಸಬೇಕು ಎಂದು ಒತ್ತಾಯ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಶಾಸಕ ರಫೀಕ್ ಅಹಮ್ಮದ್, ಮುಖಂಡ ಟಿ.ಬಿ.ಮಲ್ಲೇಶ್, ವಕ್ತಾರ ರಾಜೇಶ್ ದೊಡ್ಮನೆ, ಯೋಗೀಶ್ವರ್, ಮೋಕ್ಷ, ಅಫ್ತಾಬ್ ಅಹಮ್ಮದ್, ಆರ್.ನಾರಾಯಣ, ಟಿ.ಎಚ್.ಅನಿಲ್‌ಕುಮಾರ್, ಆಟೊ ರಾಜು, ಮೆಹಬೂಬ್ ಪಾಷಾ, ಜಿ.ಡಿ.ವಿಜಯಕುಮಾರ್, ಆಡಿಟರ್ ನಾಗರಾಜ್, ಮಹೇಶ್, ಎಚ್.ಎಸ್.ಹೇಮಂತಕುಮಾರ್, ಸುಜಾತಾ, ನರಸೀಯಪ್ಪ, ಯುವ ಕಾಂಗ್ರೆಸ್‌ನ ಶರತ್‌ಕುಮಾರ್, ಸುಮುಖ್, ಕೊಂಡವಾಡಿ ಚಂದ್ರಶೇಖರ್, ಮಂಗಳ, ನಾಗಮಣಿ, ಯಶೋಧಾ, ಮುಬೀನಾ, ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.