ADVERTISEMENT

ನ್ಯಾಯಾಂಗ ನಿಂದನೆ ಕೆಲಸ ಸರ್ಕಾರ ಮಾಡಿಲ್ಲ

ಒಕ್ಕಲಿಗರ ನೌಕರರ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:41 IST
Last Updated 26 ಸೆಪ್ಟೆಂಬರ್ 2016, 9:41 IST
ನ್ಯಾಯಾಂಗ ನಿಂದನೆ ಕೆಲಸ ಸರ್ಕಾರ ಮಾಡಿಲ್ಲ
ನ್ಯಾಯಾಂಗ ನಿಂದನೆ ಕೆಲಸ ಸರ್ಕಾರ ಮಾಡಿಲ್ಲ   

ತುಮಕೂರು: ‘ಕಾವೇರಿ ನದಿ ನೀರಿನ ಬಳಕೆ ವಿಚಾರದಲ್ಲಿ ನ್ಯಾಯಾಂಗ ನಿಂದನೆಯಾಗುವಂಥ ಯಾವ ಕೆಲಸವನ್ನೂ ರಾಜ್ಯ ಸರ್ಕಾರ ಮಾಡಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆ ಗವಿರಂಗ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟು ಸನ್ಮಾರ್ಗ ತೋರಿದರು. ಮಹಾತ್ಮ ಗಾಂಧೀಜಿ ಹೋರಾಟ ನಡೆಸಿ ಸ್ವಾತಂತ್ರ್ಯ ಕಲ್ಪಿಸಿದ್ದಾರೆ. ಆದರೆ, ಕಾವೇರಿ ನದಿ ನೀರಿನ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಮಂಡಲದಲ್ಲಿ ಎರಡು ದಿನದ ಹಿಂದೆ ತೆಗೆದುಕೊಂಡ ತೀರ್ಮಾನ ನ್ಯಾಯಾಂಗ ನಿಂದನೆಗೆ ಆಸ್ಪದವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ.

ಸ್ವಾಮಿ ನಾವು ಜನರಿಗೆ ಕುಡಿಯಲು ನೀರು ಕೊಟ್ಟಿದ್ದೇವೆಯೇ ಹೊರತು ಕೆಟ್ಟ ಕೆಲಸ ಮಾಡಿಲ್ಲ’ ಎಂದು ದೇವೇಗೌಡರು ವಿಧಾನಮಂಡಲದ ತೀರ್ಮಾನವನ್ನು ಸಮರ್ಥಿಸಿಕೊಂಡರು.

‘ಹೇಮಾವತಿ ಜಲಾಶಯ ನಿರ್ಮಾಣ ಮಾಡುವಾಗ 6.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಕೊಡಬೇಕು ಎಂಬ ತೀರ್ಮಾನ ಮಾಡಲಾಗಿತ್ತು. ಆದರೆ, ತಮಿಳುನಾಡು ಪದೇ ಪದೇ ಆಕ್ಷೇಪವೆತ್ತಿ ಇದಕ್ಕೆ ಅವಕಾಶ ಕೊಟ್ಟಿಲ್ಲ. ಈಗ ಇದ್ದ ನೀರೂ ಇಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯಾಗುತ್ತದೆ’ ಎಂದು ಎಚ್ಚರಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ರಾಜ್ಯಗಳ ನಡುವೆ ಸಂಘರ್ಷ ಸೃಷ್ಟಿಯಾದ ಪ್ರಧಾನಮಂತ್ರಿ ಮಧ್ಯ ಪ್ರವೇಶ ಮಾಡಬೇಕಾಗಿತ್ತು.

ಬುದ್ಧಿವಾದ ಹೇಳಬೇಕಿತ್ತು. ಆ ಕೆಲಸ ಮಾಡಿಲ್ಲ. ಸುಪ್ರೀಂ ಕೋರ್ಟ್ ವಾಸ್ತವಿಕ ಪರಿಸ್ಥಿತಿಗೆ ವಿರುದ್ಧವಾಗಿ ಆದೇಶ ಮಾಡುತ್ತಿದೆ. ಇಂಥ ಆದೇಶಗಳಿಂದ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಳ್ಳಲು ಆಸ್ಪದವಾಗುತ್ತದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ  ಪಟ್ಟನಾಯಕನಹಳ್ಳಿ  ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯ ಶೋಷಿತರ, ನೊಂದವರ ಬಗ್ಗೆ ಕಳಕಳಿ ಹೊಂದಿರುವ ಸಮುದಾಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯದಂತೆ ನಡೆದುಕೊಂಡು ಬಂದಿದೆ ಎಂದರು.

ಸಾಧಿಸುವ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಎಚ್.ಡಿ.ದೇವೇಗೌಡ ಅವರೇ ಉದಾಹರಣೆ. ಅವರ ರಾಜಕೀಯ ಜೀವನದಲ್ಲಿ ಆಡಳಿತ ನಡೆಸಿದ್ದಕ್ಕಿಂತ ವಿರೋಧ ಪಕ್ಷದ ಸ್ಥಾನದಲ್ಲಿಯೇ ಹೆಚ್ಚು ಕುಳಿತವರು. ಈ ದೇಶದ ಪ್ರಧಾನಿಯಾದರು. ದೇಶಕ್ಕೆ, ನಾಡಿಗೆ ಸಂಕಷ್ಟ ಎದುರಾದಾಗ ಅದು ನರೇಂದ್ರ ಮೋದಿಯೇ ಆಗಿರಲಿ. ಸಿದ್ದರಾಮಯ್ಯ ಅವರೇ ಆಗಿರಲಿ. ಸೂಕ್ತ ಮಾರ್ಗದರ್ಶನ ಮಾಡಿದ ಧೀಮಂತ ನಾಯಕರು ಎಂದು ಬಣ್ಣಿಸಿದರು.

ಕೆಂಗೇರಿ ವಿಶ್ವ ಒಕ್ಕಲಿಗ  ಮಹಾಸಂಸ್ಥಾನಮಠದ ಅಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ  ಬಿಇಎಂಎಲ್ ಕಾಂತರಾಜ್, ಮಾಜಿ ಸಚಿವ  ಬಿ.ಸತ್ಯನಾರಾಯಣ, ಮಾಜಿ ಶಾಸಕ ನಿಂಗಪ್ಪ,  ಪಾಲಿಕೆ ಮಾಜಿ ಅಧ್ಯಕ್ಷೆ ದೇವಿಕಾ, ಜೆಡಿಎಸ್ ನಗರ ಘಟಕ ಅಧ್ಯಕ್ಷ ನರಸೇಗೌಡ, ಜೆಡಿಎಸ್ ಹಿರಿಯ ಮುಖಂಡ ಕೆ.ಬಿ.ಬೋರೇಗೌಡ, ಕೇಂದ್ರ ಒಕ್ಕಲಿಗರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಆಡಿಟರ್ ನಾಗರಾಜ್, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮುಖಂಡರಾದ ಗಂಗಣ್ಣ, ಬ್ಯಾಟ ರಂಗೇಗೌಡ, ವೇದಿಕೆ ಅಧ್ಯಕ್ಷ ಟಿ.ರಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಬೆಳ್ಳಿ ಲೋಕೇಶ್  ನಿರೂಪಿಸಿದರು.

***
ರಾಜ್ಯದ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಲಹೆ

ತುಮಕೂರು: ‘ರಾಜ್ಯದ ಹಿತದೃಷ್ಟಿಯಿಂದ ಮಾತ್ರ ಕಾವೇರಿ ನದಿ ನೀರು ಬಿಕ್ಕಟ್ಟಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆಯೇ ಹೊರತು ಬೇರೆ ಉದ್ದೇಶದಿಂದಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಬಿಎಂಪಿ ಅಧಿಕಾರ ಹಿಡಿಯುವುದಕ್ಕಾಗಿಯೇ ದೇವೇಗೌಡರು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಬಿಜೆಪಿಯವರು ಅದ್ಹೇಗೆ ಹೇಳುತ್ತಾರೊ. ರಾಜಕಾರಣವೇ ಬೇರೆ. ರಾಜ್ಯದ ಹಿತ ಚಿಂತನೆಯೇ ಬೇರೆ ಎಂದು ಹೇಳಿದರು.

***
ಬದ್ಧತೆ ಇದ್ದರೆ ಸಾಧನೆ

‘ಪ್ರತಿಭೆ ಎಂಬುದು ಯಾರ ಸ್ವತ್ತೂ ಅಲ್ಲ. ಸಾಧನೆ ಮಾಡಬೇಕು ಎಂಬುವವರಿಗೆ ಈಗ ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಎಲ್ಲ ಕಡೆಯಿಂದಲೂ ಪ್ರೋತ್ಸಾಹ ದೊರಕುತ್ತದೆ. ಬದ್ಧತೆ ಇದ್ದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಸಮಾಜದ ವಿದ್ಯಾರ್ಥಿಗಳು, ಯುವಕರು ಗಮನಹರಿಸಬೇಕು ಎಂದು ಸಂಸದ ಎಸ್.ಪಿ.ಮುದ್ದ ಹನುಮೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT