ADVERTISEMENT

ಪಡಿತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:15 IST
Last Updated 21 ಅಕ್ಟೋಬರ್ 2014, 8:15 IST

ಪಾವಗಡ:  ಸಮರ್ಪಕ ಪಡಿತರ ಚೀಟಿ ವಿತರಣೆ, ತಾಲ್ಲೂಕಿನ ವಸತಿ ರಹಿತರ ಸಮ­ಸ್ಯೆ­ಗಳನ್ನು ಬಗೆಹರಿಸಲು ಒತ್ತಾ­ಯಿಸಿ ಜೆಡಿಎಸ್ ಮುಖಂಡರು, ಕಾರ್ಯ­ಕರ್ತರು ಸೋಮವಾರ ತಹ­ಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಪಡಿತರ ಚೀಟಿ ನೀಡಿಲ್ಲ. ಅರ್ಹರ ಪಡಿ­ತರ ಚೀಟಿಯನ್ನು ಎಸ್‌ಎಂಎಸ್ ಕಳು­ಹಿಸಿಲ್ಲ ಎಂಬ ಕಾರಣಕ್ಕೆ ಕಾರ್ಡ್‌­ಗಳನ್ನು ರದ್ದುಗೊಳಿಸಲಾಗಿದೆ ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಆಹಾರ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಯೋಜ­ನೆ ದೋಷ ಸರಿಪಡಿಸಬೇಕು ಒತ್ತಾ­ಯಿಸಿ­ದರು. ‘ಅಧಿಕಾರಿಗಳು ಪಡಿತರ ವಿತರಣಾ ಕೇಂದ್ರಗಳ ಏಜೆಂಟ್‌­ರೊಂದಿಗೆ ಶಾಮೀ­ಲಾ­ಗಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ ಆರೋಪಿಸಿದರು.

ಒಂದು ವಾರದೊಳಗಾಗಿ ಅರ್ಹರಿಗೆ ಪಡಿತರ ಚೀಟಿ ವಿತರಿಸಬೇಕು. ಗ್ರಾ.ಪಂ. ಮಟ್ಟದಲ್ಲಿ ಪಡಿತರ ಆಂದೋಲನ ನಡೆಸಿ ಸ್ಥಳೀಯವಾಗಿ ಪಡಿತರ ಚೀಟಿ ನೀಡುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ತಿಮ್ಮಾಭೋವಿ, ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಒಂದು ವಾರದೊಳಗಾಗಿ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೂರು ದಿನಗಳ ಕಾಲ ಅರಿವು ಕಾರ್ಯ­ಕ್ರಮ ನಡೆಸಲಾಗುವುದು. ಪಡಿತರ ಆಂದೋಲನದ ಮೂಲಕ ಸ್ಥಳೀಯವಾಗಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿ.ಪಂ. ಉಪಾಧ್ಯಕ್ಷ ಆರ್.ಸಿ.­ಆಂಜಿ­ನಪ್ಪ, ತಾ.ಪಂ. ಅಧ್ಯಕ್ಷ ಚಂದ್ರ­ಶೇಖರ್, ಪುರಸಭೆ ಅಧ್ಯಕ್ಷ ಸುಧಾಕರ­ರೆಡ್ಡಿ, ಮಾಜಿ ಅಧ್ಯಕ್ಷ ಶಂಕರರೆಡ್ಡಿ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ವೆಂಕಟ­ರಾಮರೆಡ್ಡಿ, ಸದಸ್ಯ ಮಹೇಶ್, ಮಣಿ, ವಸಂತ್, ಮುಖಂಡ ಗೋವಿಂ­ದಪ್ಪ, ಅಕ್ಕಲಪ್ಪ, ಬಲರಾಮ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.