ADVERTISEMENT

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:53 IST
Last Updated 13 ನವೆಂಬರ್ 2017, 9:53 IST

ಪಾವಗಡ: ಸರ್ಕಾರದ ಎಲ್ಲ ರೀತಿಯ ನೇಮಕಾತಿ ಮತ್ತು ಸೌಲಭ್ಯ ವಿತರಣೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಶಿಡ್ಲೆಕೋಣ ಸಂಸ್ಥಾನದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಆಗ್ರಹಿಸಿದರು. ಪಟ್ಟಣದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ನಾಯಕ ಜನಾಂಗದ ಸಮಾವೇಶ, ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ವಾಲ್ಮೀಕಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಡಿನ ಏಳ್ಗೆಗಾಗಿ ಶ್ರಮಿಸಿದ ಜನಾಂಗದವರಿಗೆ ಪ್ರಾತಿನಿಧ್ಯ ಕೊಡುವುದು ಸರ್ಕಾರದ ಕರ್ತವ್ಯ. ಮೀಸಲಾತಿಗಾಗಿ ಒತ್ತಾಯಿಸುವುದು ಸಮುದಾಯದವರ ಹಕ್ಕು ಎಂದರು.

ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಶತಮಾನಗಳ ಕಾಲ ಚಾಕರಿ ಮಾಡಿದ ಜನ ಸಮುದಾಯಕ್ಕೆ ಸಂವಿಧಾನಬದ್ಧ ಮೀಸಲಾತಿ, ಸವಲತ್ತುಗಳು ಸಿಗುತ್ತಿವೆ. ಸೌಲಭ್ಯಗಳನ್ನು ಕೇಳಿ ಪಡೆಯುವುದು ತಳ ಸಮುದಾಯಗಳ ಜನತೆಯ ಹಕ್ಕು. ತಾಲ್ಲೂಕಿನಲ್ಲಿ 125ಕ್ಕೂ ಹೆಚ್ಚು ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷ ₹ 6 ಕೋಟಿಯನ್ನು ಸಮುದಾಯದವರ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಮುಖಂಡರಾದ ವೆಂಕಟರವಣಪ್ಪ ಹೊದಿಗೆರೆ ರಮೇಶ್ ಮಾತನಾಡಿ, ಜನಾಂಗದವರು ಪಕ್ಷಾತೀತವಾಗಿ ಸಂಘಟಿತರಾಗಬೇಕು ಎಂದು ಹೇಳಿದರು ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್.ಆರ್.ಶಾಂತಲಾ ಮಾತನಾಡಿ, ಭಾಗ್ಯಗಳು ಉಳ್ಳವರ ಬಾಗಿಲನ್ನು ಎಡತಾಕುತ್ತಿವೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ರಸ್ತೆ ಸಾರಿಗೆ ಅಧಿಕಾರಿ ತಿಪ್ಪೇಸ್ವಾಮಿ, ಗಿರಿಜನ ನಾಯಕ ನೌಕರ ಸಂಘದ ಅಧ್ಯಕ್ಷ ಅನಿಲ್, ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ಮಾತನಾಡಿದರು. ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಅವರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.