ADVERTISEMENT

ಪರಿಸರಸ್ನೇಹಿ ಗಣೇಶ ಮೂರ್ತಿಯತ್ತ ಒಲವು

₹50ರಿಂದ 20 ಸಾವಿರದವರೆಗಿನ ಗಣಪತಿ ಮೂರ್ತಿಗಳು ಮಾರಾಟಕ್ಕಿವೆ * ತಿಂಗಳಿಗೂ ಮುಂಚೆ ಮುಂಗಡ ನೀಡಿ ಬುಕಿಂಗ್ ಆರಂಭ

ಪ್ರಸನ್ನಕುಮಾರ ಹಿರೇಮಠ
Published 31 ಆಗಸ್ಟ್ 2015, 10:06 IST
Last Updated 31 ಆಗಸ್ಟ್ 2015, 10:06 IST

ತುಮಕೂರು: ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳ ಸಾಲು ಪ್ರಾರಂಭಗೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ಸಡಗರ ಮುಗಿದ ಕೂಡಲೇ ಮತ್ತೊಂದು ಹಬ್ಬದ ಆಚರಣೆಗೆ ನಗರದ ಜನತೆ ಸಿದ್ಧರಾಗುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಷ್ಟೇ ಸಡಗರ, ಭಕ್ತಿಯಿಂದ ಆಚರಿಸುವ ಹಬ್ಬ ಗೌರಿ ಗಣೇಶ ಹಬ್ಬ. ನಗರದ ಪ್ರಮುಖ ಬಡಾವಣೆ, ವೃತ್ತ, ರಸ್ತೆಗಳಲ್ಲಿ ಸಂಘ ಸಂಸ್ಥೆಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತವೆ. ನಗರದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.

ನಾವು ಈ ವರ್ಷ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಹೇಗಿರಬೇಕು? ಹೀಗಿದ್ದರೆ ಚೆಂದ, ಇಷ್ಟೇ ಎತ್ತರ ಇರಬೇಕು? ಗಣೇಶ ಮೂರ್ತಿ ಝಗಮಗಿಸುವಂತಿರಬೇಕು ಹೀಗೆ ನೂರೆಂಟು ರೀತಿಯ ಕಲ್ಪನೆಗಳೊಂದಿಗೆ ಭಕ್ತರು, ಸಂಘ ಸಂಸ್ಥೆಗಳು ಗಣೇಶ ಮೂರ್ತಿಯ ಹುಡುಕಾಟ ನಡೆಸುತ್ತಾರೆ. ತಿಂಗಳಿಗೆ ಮುಂಚೆಯೇ ಗಣೇಶ ಮೂರ್ತಿಗಳನ್ನು ತಯಾರಿಸುವ ಕುಶಲ ಕಲಾವಿದರ ಬಳಿಗೆ ಹೋಗಿ ಬುಕ್ಕಿಂಗ್‌ ಮಾಡುತ್ತಾರೆ. ಜನರ ಆಪೇಕ್ಷೆಯಂತೆ ಕಲಾವಿದರು ಹಗಲು ರಾತ್ರಿ ಗಣೇಶ ಮೂರ್ತಿಗಳನ್ನು ತಯಾರಿಸಿ ಕೊಡುತ್ತಾರೆ. ಗಣೇಶ ವಿಗ್ರಹ ಇಷ್ಟವಾದರೆ ಆಯ್ತು. ಎಷ್ಟೇ ದುಬಾರಿಯಾದರೂ ಸರಿ, ಖರೀದಿಸಿ ಪ್ರತಿಷ್ಠಾಪನೆ ಮಾಡುತ್ತಾರೆ.

ಭರದ ತಯಾರಿ: ಈ ವರ್ಷವೂ ನಗರದ ವಿವಿಧೆಡೆ ಗಣೇಶ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ.  ಕೋಲ್ಕತ್ತದ ಕಲಾವಿದರು ತಯಾರಿಸುತ್ತಿರುವ ಮೂರ್ತಿಗಳಿಗೆ ವಿಶೇಷ ಬೇಡಿಕೆ ಇದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಿಂತ ಸಾರ್ವಜನಿಕ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದೆ.

ಪರಿಸರ ಸ್ನೇಹಿ ಗಣೇಶ: ನಗರದ ಬಿ.ಎಚ್‌.ರಸ್ತೆ ದೊಡ್ಡಮನೆ ಆಸ್ಪತ್ರೆ ಸಮೀಪ ಕೋಲ್ಕತ್ತ ಮೂಲದ ಕಲಾವಿದ ದೇಬಾಶಿಷ್‌ ಹಾಗೂ ಸಹ ಕಲಾವಿದರು ಟೆಂಟ್ ಹಾಕಿಕೊಂಡು, ಭತ್ತದ ಹುಲ್ಲು, ಸ್ಥಳೀಯ ಹಾಗೂ ಗುಜರಾತ್‌ನಿಂದ ತರಿಸಿದ ಮಣ್ಣಿನಿಂದ ಬೃಹತ್ ಗಣೇಶ ಮೂರ್ತಿಗಳ ತಯಾರಿಯಲ್ಲಿ ತೊಡಗಿದ್ದಾರೆ.

ಇವರ ಬಳಿ ₹ 50ರಿಂದ ಹಿಡಿದು ₹ 20 ಸಾವಿರ ಬೆಲೆವರೆಗಿನ ಗಣಪತಿ ಮೂರ್ತಿಗಳಿವೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಬಳಕೆ ಮಾಡಿಲ್ಲ. ಸಂಪೂರ್ಣ ಪರಿಸರ ಸ್ನೇಹಿಯಾಗಿವೆ. ಬಹುತೇಕರು ಇಂಥ ಮೂರ್ತಿಗಳನ್ನೇ  ಇಷ್ಟಪಡುತ್ತಾರೆ ಎಂದು ಕಲಾವಿದ ದೇಬಾಶಿಷ್‌ ತಿಳಿಸಿದರು.

ನಾನಾ ಬಗೆಯ ಮೂರ್ತಿಗಳು: ಶಂಖ, ಕಮಲ, ಇಲಿಯ ಮೇಲೆ ಕುಳಿತ ಗಣೇಶ, ಶಿವ ಸ್ವರೂಪಿ, ಕಾಳಿಂಗ ಸರ್ಪದ ಹೆಡೆ ಕೆಳಗೆ ಕುಳಿತ ಗಣೇಶ ಹೀಗೆ ನಾನಾ ಬಗೆಯ ಮೂರ್ತಿಗಳು ಇಲ್ಲಿ ಮೈತಳೆಯುತ್ತಿವೆ. ಈ ಕಲಾವಿದರ ಟೆಂಟ್‌ ಪಕ್ಕದಲ್ಲಿಯೇ ಸ್ಥಳೀಯರಾದ ರಘು, ನವೀನ್ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಪೇಟಾ ಗಣೇಶ, ವಿದ್ಯಾಗಣೇಶ, ದರ್ಬಾರ್ ಗಣೇಶ, ರಾಜಾ ಗಣಪತಿ ಹೀಗೆ ತರಹೇವಾರಿ ರೂಪದಲ್ಲಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಜ್ಜುಗೊಂಡಿವೆ. ಆಕರ್ಷಕ ಬಣ್ಣ ಈ ಮೂರ್ತಿಗಳ ವಿಶೇಷ. ಕನಿಷ್ಠ 2 ಅಡಿಯಿಂದ 8 ಅಡಿ ಎತ್ತರದವರೆಗೂ ಗಣೇಶ ಮೂರ್ತಿಗಳು ಮಾರಾಟಕ್ಕಿವೆ ಎಂದು ನವೀನ್  ತಿಳಿಸಿದರು.

ಮೂರ್ತಿಗಳಿಗೆ ಅಂತಿಮ ಸ್ಪರ್ಶ: ಚಿಕ್ಕಪೇಟೆಯಲ್ಲೂ ಕಲಾವಿದ ಗೋವಿಂದರಾಜು ಅವರು ತಮ್ಮ ಮನೆಯಲ್ಲಿ ಪುಟಾಣಿ ಗಣೇಶ ಮೂರ್ತಿಗಳು ಮಾಡಿ ಮಾರುತ್ತಾರೆ.  ಮುಷ್ಟಿ ಗಾತ್ರದ ಗಣೇಶನಿಂದ ಹಿಡಿದು ಎತ್ತರದ ಮೂರ್ತಿಗಳು ಇಲ್ಲಿ ಮಾರಾಟಕ್ಕೆ ಲಭ್ಯವಾಗಿವೆ.

ಮನೆಯವರೆಲ್ಲರೂ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಾರೆ. ಮೂರು ತಿಂಗಳಿಂದ ಶ್ರಮಪಟ್ಟು ನೂರಾರು ಗಣೇಶ ಮೂರ್ತಿಗಳನ್ನು ಮಾಡಿಟ್ಟಿದ್ದಾರೆ.
‘ನಮ್ಮಲ್ಲಿ ₹ 50 ರಿಂದ 800 ವರೆಗೂ ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತದೆ. ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತೇವೆ. ವಾಟರ್ ಪೇಯಿಂಟ್‌ ಮತ್ತು ಗೋಲ್ಡ್ ಕಲರ್ ಪೇಯಿಂಟ್‌ ಬಳಕೆ ಮಾಡಲಾಗುತ್ತದೆ’ ಎಂದು ಗೋವಿಂದರಾಜು  ಹೇಳಿದರು.

ಬಣ್ಣದ ದರ ಹೆಚ್ಚು
ಗಣೇಶ ಮೂರ್ತಿ ತಯಾರಿಕೆಗೆ ತಗುಲುವ ಖರ್ಚು ವರ್ಷದಿಂದ ವರ್ಷ ಹೆಚ್ಚಾಗುತ್ತಿದೆ. ಬಣ್ಣದ ದರ, ಮಣ್ಣು ಸಾಗಣಿ ವೆಚ್ಚ ಜಾಸ್ತಿ ಆಗಿದೆ.  ಕಳೆದ ವರ್ಷ ಗೋಲ್ಡ್‌ ಕಲರ್‌ ಪೇಯಿಂಟ್ ಬೆಲೆ ಕೆ.ಜಿ. ಗೆ ₹12 ಇದ್ದದ್ದು ಈಗ ದುಪ್ಪಟ್ಟಾಗಿದೆ. ವಿಗ್ರಹ ತಯಾರಿಕೆಗೆ ಅಗತ್ಯವಾದ ಎಲ್ಲ ಸಾಮಾಗ್ರಿಗಳ ಬೆಲೆ ಹೆಚ್ಚಳವಾದರೂ ಗ್ರಾಹಕರನ್ನು ನಂಬಿ ಗಣೇಶ ಮೂರ್ತಿ ತಯಾರಿಸಿದ್ದೇವೆ. ಉತ್ತಮ ವ್ಯಾಪಾರ ನಡೆಯುವ ವಿಶ್ವಾಸವಿದೆ ಎಂದು ಕಲಾವಿದ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಾವಿದರಿಗೆ ಸ್ವಲ್ಪ ಕಷ್ಟವಾದರೂ ಚಿಂತೆಯಿಲ್ಲ. ಪರಿಸರಕ್ಕೆ ಹಾನಿಯಾಗಬಾರದು. ಮಣ್ಣಿನಲ್ಲಿಯೇ ಮೂರ್ತಿ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಆಶಯ ನಮ್ಮದು.
ದೇಬಾಶಿಷ್‌,
ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT