ADVERTISEMENT

‘ಪಾವಗಡಕ್ಕೆ ಮೀಸಲಾತಿ ಹೇಳಿಕೆ ದಲಿತರ ಸ್ವಾಭಿಮಾನಕ್ಕೆ ಧಕ್ಕೆ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:16 IST
Last Updated 20 ಮಾರ್ಚ್ 2018, 11:16 IST

ಗುಬ್ಬಿ: ‘ಪಾವಗಡ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಘೋಷಣೆ ಮಾಡಿದ್ದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ’ ಎಂದು ಗೊಲ್ಲ ಮತ್ತು ಯಾದವ ಸಮಾಜದ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ನೀಡಿರುವ ಹೇಳಿಕೆ ಖಂಡನೀಯ ಎಂದು ಇಲ್ಲಿಯ ಸಾಹು ಮಹಾರಾಜ್ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಎಸ್. ಮಂಜೇಶ್ ತಿಳಿಸಿದರು.

ಸಾಹು ಮಹಾರಾಜ್ ಸಾಂಸ್ಕೃತಿಕ ವೇದಿಕೆಯಿಂದ ಸೋಮವಾರ ಮೀಸ ಲಾತಿ ವಿಚಾರವಾಗಿ ನಡೆದ ಸಭೆಯಲ್ಲಿ ಮಾತನಾಡಿ, ‘ಈ ಹೇಳಿಕೆ ಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ಮೀಸಲು ಕ್ಷೇತ್ರ ಹೇಗೆ ಘೋಷಣೆ ಮಾಡಿದರು ಎಂಬ ವಿಚಾರದ ಬಗ್ಗೆ ಮುಖಂಡರಿಗೆ ಅರಿವಿಲ್ಲ. ವಾಸ್ತವ ತಿಳಿಯದೆ ಹೇಳಿಕೆ ನೀಡಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಇದು ದಲಿತರಿಗೆ ಮಾಡಿರುವ ಅವಮಾನ’ ಎಂದು ಆರೋಪಿಸಿದರು.

‘ಪಾವಗಡದಲ್ಲಿ ಅವರು ಹೇಳಿದಂತೆ ದಲಿತರಿಗೆ ಮೀಸಲಾತಿ ಕ್ಷೇತ್ರ ಘೋಷಿಸಿಲ್ಲ. ಇಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಬಹುಸಂಖ್ಯಾತರು 75 ಸಾವಿರಕ್ಕೂ ಅಧಿಕ ಪರಿಶಿಷ್ಟರೇ ಇದ್ದಾರೆ. ಯಾವುದೇ ಸಮುದಾಯಕ್ಕೆ ವಂಚನೆ ಮಾಡದೇ ಚುನಾವಣಾ ಆಯೋಗ ಕ್ಷೇತ್ರ ಘೋಷಿಸಿದೆ. ಇಂತಹ ಹೇಳಿಕೆಯಿಂದ ಬಿಜೆಪಿಗೂ ಹಾನಿಯಾಗಲಿದೆ ಎಂದರು.

ADVERTISEMENT

ಸಾಹು ಮಹಾರಾಜ್ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷ ದಲಿತ್ ಮಂಜು ಮಾತನಾಡಿ, ಇಂತಹ ಹೇಳಿಕೆಗಳಿಂದ ಸ್ವಾಭಿಮಾನಿ ದಲಿತರಿಗೆ ತೇಜೋವಧೆ ಮಾಡಿದಂತಾಗುತ್ತದೆ ಎಂದರು.

ವೇದಿಕೆಯ ಪದಾಧಿಕಾರಿಗಳಾದ ವೆಂಕಟೇಶ್ ನಾಯಕ, ಗೋವಿಂದಸ್ವಾಮಿ ಬೋವಿ, ತಿಮ್ಮಯ್ಯ ವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.