ADVERTISEMENT

ಬಿಜೆಪಿಯದ್ದಲ್ಲ ಕೆಜೆಪಿ ಪರಿವರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:35 IST
Last Updated 6 ನವೆಂಬರ್ 2017, 9:35 IST

ತುಮಕೂರು: ‘ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ ಕೆಜೆಪಿ ಪರಿವರ್ತನಾ ಯಾತ್ರೆ’ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಲ್ಲಿರುವ ಮುಖಂಡರು, ಕಾರ್ಯಕರ್ತರನ್ನು ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಕಡೆಗಣಿಸಲಾಗಿದೆ. ಕೆಜೆಪಿಯಿಂದ ಬಂದವರಿಗೆ ಯಡಿಯೂರಪ್ಪ ಮಣೆ ಹಾಕಿದ್ದಾರೆ. ಪಕ್ಷಕ್ಕಾಗಿ ಹಲವು ದಶಕಗಳ ಕಾಲ ದುಡಿದ ನನ್ನನ್ನೂ ಸೇರಿದಂತೆ  ಜಿಲ್ಲೆಯ ಅನೇಕ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

‘ಮಾಜಿ ಸಂಸದ ಜಿ.ಎಸ್.ಬಸವರಾಜ್ ಹಾಗೂ ಅವರ ಮಗ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್ ಈ ಇಬ್ಬರೂ ಕಾಂಗ್ರೆಸ್, ಕೆಜೆಪಿಯಿಂದ ಬಿಜೆಪಿಗೆ ಬಂದವರು. ಇವರಿಬ್ಬರ ಕೈಗೆ  ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿ ಕೊಟ್ಟಿರುವುದಕ್ಕೆ ಮೊದಲಿನಿಂದಲೂ ನಮ್ಮ ವಿರೋಧವಿದೆ. ಅನೇಕ ಬಾರಿ ಪಕ್ಷದ ವರಿಷ್ಠರಿಗೆ, ರಾಜ್ಯ ಘಟಕ ಅಧ್ಯಕ್ಷರ ಗಮನಕ್ಕೆ ತಂದರೂ ನಮ್ಮ ಮನವಿ ಕಡೆಗಣಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಪರಿವರ್ತನಾ ಯಾತ್ರೆ ಕುರಿತ ಬಹಿರಂಗ ಸಭೆಗೆ ನಾನು ಹೋಗಿರಲಿಲ್ಲ. ನನ್ನ ಬೆಂಬಲಿಗರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬಂದಿರಲಿಲ್ಲ. ನಮ್ಮ ನೋವನ್ನು ಬಿ.ಎಸ್. ಯಡಿಯೂರಪ್ಪ ಅರ್ಥ ಮಾಡಿಕೊಳ್ಳದೆ ಇರುವುದೇ ಸಭೆಗೆ ಹೋಗದಿರುವುದಕ್ಕೆ ಕಾರಣ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಮೂರು ದಿನಗಳಿಂದ ಪರಿವರ್ತನಾ ಯಾತ್ರೆ ನಡೆದರೂ ಯಡಿಯೂರಪ್ಪ ಅವರು ನನನ್ನು ಮಾತನಾಡಿಸಿರಲಿಲ್ಲ. ತುಮಕೂರು ನಗರದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವಿದ್ದರೆ 9 ಗಂಟೆಗೆ ದೂರವಾಣಿ ಕರೆ ಮಾಡಿ ಸಭೆಗೆ ಬರಲು ಹೇಳಿದರು. ಈ ರೀತಿ ಉಪೇಕ್ಷೆ ಮಾಡಿದಾಗಲೂ ಸಭೆಗೆ ಹೋಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ನಗರದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಹಣ ಕೊಟ್ಟು ಜನರನ್ನು ಕರೆಸಲಾಗಿತ್ತು ಎಂಬುದನ್ನು ಸಭೆಯಲ್ಲಿ ಭಾಗವಹಿಸಿದ್ದ ಕೆಲ ನಂಬಿಕಸ್ಥ ಆಪ್ತರು ನನ್ನೆದುರು ಹೇಳಿಕೊಂಡಿದ್ದಾರೆ’ ಎಂದು ಹೇಳಿದರು.

‘2018ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದಲೇ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತೇನೆ. ನನಗೆ ಕಾರ್ಯಕರ್ತರು ಮುಖ್ಯವೇ ಹೊರತು ಪಕ್ಷವಲ್ಲ. ಕಾರ್ಯಕರ್ತರಿದ್ದರೆ ಪಕ್ಷ, ಶಾಸಕ, ಸಚಿವರಾಗಲು ಸಾಧ್ಯ’ ಎಂದರು.

’ಯಾರಿಗೆ ಟಿಕೆಟ್ ಕೊಡಬೇಕು ಎಂಬ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಕೈಗೊಳ್ಳುತ್ತಾರೆ. ರಾಜ್ಯ ಘಟಕದಲ್ಲಿ ಆಗುವುದಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ, ಅವರೇ ಪರಿವರ್ತನಾ ಯಾತ್ರೆ ಹೋದ ಕಡೆಯಲೆಲ್ಲ ಇವರೇ ಮುಂದಿನ ಅಭ್ಯರ್ಥಿ ಎಂದು ಕೆಲವರ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

’ನಮ್ಮಂಥವರು ಏನಾದರೂ ಪ್ರಶ್ನಿಸಿದರೆ ನೋಟಿಸ್ ಕೊಡುತ್ತಾರೆ. ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುವ ಅವರೇ ಆ ಶಿಸ್ತು ಉಲ್ಲಂಘಿಸುತ್ತಿದ್ದಾರೆ’ ಎಂದು ಎಂದು ಟೀಕಿಸಿದರು.
ಪಕ್ಷದ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಶಾಂತರಾಜ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.