ADVERTISEMENT

ಬಿಸಿಲಾದರೆ ದೂಳು, ಮಳೆಯಾದರೆ ಕೆಸರು

ಗುಬ್ಬಿ ಅಭಿವೃದ್ಧಿಗೆ ಗಮನ ಕೊಡೋರು ಯಾರು...?

ಪ್ರಜಾವಾಣಿ ವಿಶೇಷ
Published 31 ಜುಲೈ 2014, 10:33 IST
Last Updated 31 ಜುಲೈ 2014, 10:33 IST
ಬಿಸಿಲಾದರೆ ದೂಳು, ಮಳೆಯಾದರೆ ಕೆಸರು
ಬಿಸಿಲಾದರೆ ದೂಳು, ಮಳೆಯಾದರೆ ಕೆಸರು   

ಗುಬ್ಬಿ: ಪಟ್ಟಣದಲ್ಲಿ ಈಚೆಗೆ ಸುರಿದ ಮಳೆಗೆ ರಸ್ತೆಗಳು ಹದಗೆಟ್ಟು ಸಂಚಾರ ದುಸ್ತರವಾಗಿದೆ. ಜನಸಂಖ್ಯೆ ೧೮ ಸಾವಿರ ದಾಟಿದರೂ, ಮೂಲ ಸೌಕರ್ಯದತ್ತ ಕಲ್ಪಿಸಲು ಮಾತ್ರ ಪಟ್ಟಣ ಪಂಚಾಯಿತಿ ಗಮನ ಹರಿಸುತ್ತಿಲ್ಲ ಎಂಬ ದೂರು ವ್ಯಾಪಕ­ವಾಗಿ ಕೇಳಿ ಬರುತ್ತಿದೆ.

ಪಟ್ಟಣದಲ್ಲಿ ಡಾಂಬರೀಕರಣ ನಡೆದು ೧೫ ವರ್ಷ ಕಳೆದಿದೆ. ಬಹುತೇಕ ಎಲ್ಲ ರಸ್ತೆಗಳಲ್ಲಿ ಡಾಂಬರು ಸವೆದು, ಜಲ್ಲಿಕಲ್ಲು ಮೇಲೆದ್ದಿದೆ. ವಾಹನಗಳ ಚಕ್ರಕ್ಕೆ ಸಿಕ್ಕುವ ಕಲ್ಲುಗಳು ಸಿಡಿದು ಅನೇಕ ಪಾದಚಾರಿಗಳು ಗಾಯಗೊಂಡಿ­ದ್ದಾರೆ. ಗುಂಡಿಗಳನ್ನು ತಪ್ಪಿಸಿ ವಾಹನ ಓಡಿಸಲು ಯತ್ನಿಸುವ ದ್ವಿಚಕ್ರ ಸವಾರರು ರಸ್ತೆ ನಿಯಮ ಮೀರುವುದು ಸಾಮಾನ್ಯ ಸಂಗತಿ ಎನಿಸಿದೆ.

ಬೇರೆಡೆಯಿಂದ ಬರುವ ವಿದ್ಯಾರ್ಥಿ­ಗಳು ಮತ್ತು ಸಾರ್ವಜನಿಕರು ಬಿಸಿಲಾ­ದರೆ ದೂಳಿನಿಂದ, ಮಳೆಯಾದರೆ ಕೆಸರು ಮೆತ್ತಿಸಿಕೊಂಡು, ಲಾಂಗ್–ಹೈ ಜಂಪ್ ಮಾಡಿಯೇ ರಸ್ತೆಗಳಲ್ಲಿ ಸಂಚರಿಸಬೇಕಾಗಿದೆ.

ರಾಯವಾರ ರಸ್ತೆ, ಮಹಾಲಕ್ಷ್ಮೀ ನಗರ, ವಿನಾಯಕ ನಗರ, ಮಾರುತಿ­ನಗರ, ವಿದ್ಯಾನಗರ, ಬೆಲ್ಲದ ಪೇಟೆಯ ರಸ್ತೆಗಳು ಮಾತ್ರ ಈ ಸ್ಥಿತಿಗೆ ಅಪವಾದ. 

ಕೃಷಿ ಮಾರುಕಟ್ಟೆ ಪ್ರಾಂಗಣ, ಪದವಿ ಕಾಲೇಜು, ಪೊಲೀಸ್ ಕ್ವಾರ್ಟರ್ಸ್‌ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಸಮೀಪದ ರಸ್ತೆ ಪಕ್ಕ ಬೇಲಿ ಬೆಳೆದು ಪೊದೆಯಂತಾಗಿದೆ.

ಎಪಿಎಂಸಿ ಯಾರ್ಡ್‌, ಸಂತೆ ಮೈದಾನ ಸಮೀಪದ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಾಂಸದ ಮಳಿಗೆ ಗಲೀಜು ನೇರವಾಗಿ ಚರಂಡಿ ಸೇರು­ತ್ತಿದೆ. ಮಾಂಸ ಕೊಳೆತ ವಾಸನೆ­ಯಲ್ಲಿ ವಾಕರಿಸಿಕೊಂಡೇ ಸೋಮ­ವಾರದ ಸಂತೆಯಲ್ಲಿ ವ್ಯಾಪಾರ ನಡೆ­ಯುತ್ತದೆ.

‘ಸಂತೆ ನಡೆಯುವಾಗ ಸರ್ಕಾರ­ದವರು ಸುಂಕ ವಸೂಲಿ ಮಾಡುತ್ತಾರೆ. ಆದರೆ ಸಂತೆ ನಡೆಯುವ ಸ್ಥಳವನ್ನು ಮಾತ್ರ ಕಿಂಚಿತ್ತೂ ಅಭಿವೃದ್ಧಿ­ಪಡಿಸುತ್ತಿಲ್ಲ’ ಎಂದು ಈರುಳ್ಳಿ ವ್ಯಾಪಾರಿ ಮಂಜುನಾಥ್ ಬೇಸರ ವ್ಯಕ್ತಪಡಿಸು­ತ್ತಾರೆ.

ಜಿಲ್ಲೆಯ ಇತರೆಲ್ಲ ನಗರಗಳಂತೆ ಗುಬ್ಬಿ ಪಟ್ಟಣ ಪಂಚಾಯಿತಿಯೂ ತ್ಯಾಜ್ಯ ವಿಲೇವಾರಿಗೆ ಗಮನ ಹರಿಸಿಲ್ಲ. ಹೀಗಾಗಿ ಸೊಳ್ಳೆ, ಹೆಗ್ಗಣಗಳ ಸಂತತಿ ವ್ಯಾಪಕವಾಗಿ ಬೆಳೆದಿದೆ. ಕಾಯಿಪೇಟೆ, ಮಗ್ಗದ ಬೀದಿ, ಅಕ್ಕಸಾಲಿಗರಬೀದಿ, ಬೆಲ್ಲದ ಪೇಟೆ ರಸ್ತೆಯ ಇಕ್ಕೆಲಗಳಲ್ಲಿ ಕಸ ಎತ್ತಿ ಎಷ್ಟು ದಿನವಾಗಿದೆ ಎಂಬುದೇ ಜನರಿಗೆ ಮರೆತು ಹೋಗಿದೆ.

‘ಪಟ್ಟಣ ಪಂಚಾಯಿತಿ ಸದಸ್ಯರು ವಾಸಿಸುವ ಮನೆಯ ಸುತ್ತ ಮುತ್ತ ಸ್ವಚ್ಛತೆ ಮಾಡುತ್ತಿದ್ದಾರೆ. ಬೇರೆ ಬೀದಿ­ಗಳಿಗೆ ಪೊರಕೆಯನ್ನೂ ಇಡುತ್ತಿಲ್ಲ’ ಎಂದು ಪಟ್ಟಣ ವಾಸಿಗಳು ದೂರು­ತ್ತಾರೆ.

ಕಸಕ್ಕೆ ಬೆಂಕಿ ಹಾಕುವುದನ್ನೇ ಪಟ್ಟಣ ಪಂಚಾಯಿತಿ ವಿಲೇವಾರಿ ಮಾಡುವ ಕ್ರಮ ಎಂದುಕೊಂಡಿದೆ. ರಾಯವಾರ ಹತ್ತಿರ ತ್ಯಾಜ್ಯ ವಿಲೇವಾರಿ ಘಟಕದ ತ್ಯಾಜ್ಯಕ್ಕೆ ಬೆಂಕಿ ಇಡಲಾಗಿದೆ. ವಿಷದ ಹೊಗೆ ಪರಿಸರಕ್ಕೆ ಸೇರುತ್ತಿದ್ದು ಸ್ಥಳೀಯರ ಆರೋಗ್ಯಕ್ಕೆ ಗಂಭೀರ ಸಮಸ್ಯೆ ತಂದೊಡ್ಡಿದೆ ಎಂದು ರಾಯವಾರ ಪ್ರದೇ­ಶದ ನಿವಾಸಿಗಳು ಆತಂಕ ವ್ಯಕ್ತ­ಪಡಿಸುತ್ತಾರೆ.

‘ಮಹಾಲಕ್ಷ್ಮೀನಗರ, ರೈಲ್ವೇ ಸ್ಟೇಷನ್ ರಸ್ತೆ, ಮಾರುತಿ ನಗರ, ವಿನಾಯಕ ನಗರ ಬಡಾವಣೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ಚರಂಡಿ ಸೇರುತ್ತಿದೆ. ಪಟ್ಟಣದ ಪೈಪ್‌­ಲೈನ್ ಮತ್ತು ವಾಲ್ವ್‌ಗಳ ರಿಪೇರಿಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸುತ್ತಾರೆ ಮಾರುತಿ ನಗರ ವಾಸಿ ಚಂದ್ರಣ್ಣ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯ­ವಿಲ್ಲ. ತಾಲ್ಲೂಕು ಕಚೇರಿಯ ಗೋಡೆ, ಇನ್‌ಸ್ಪೆಕ್ಟರ್ ಕಚೇರಿ ಪಕ್ಕದ ಬೇಲಿ, ಕೃಷಿ ಇಲಾಖೆ ದಾಸ್ತಾನು ಮಳಿಗೆ ಗೋಡೆ, ಒಕ್ಕಲಿಗರ ಹಾಸ್ಟೆಲ್ ಪಾಳುಗೋಡೆ, ಎಪಿಎಂಸಿ ಆವರಣ, ಎಸ್‌ಬಿಎಂ ಹಿಂಭಾಗ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾ­ಣದ ಪಾಳುಭೂಮಿ ಮಲ, ಮೂತ್ರ ವಿಸರ್ಜನೆಗೆ ಬಳಕೆಯಾಗು­ತ್ತಿದೆ.

ಪಟ್ಟಣ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚುತ್ತಿದೆ. ಆದರೆ ಅಭಿ­ವೃದ್ಧಿಯ ಕನಸು ಮಾತ್ರ ಈಡೇರುತ್ತಿಲ್ಲ ಎಂದು ಸಾರ್ವಜನಿಕರು ಪಟ್ಟಣ ಪಂಚಾ­ಯಿತಿ ಆಡಳಿತ ವೈಖರಿಗೆ ಬಹಿರಂಗ­ವಾಗಿಯೇ ಅಸಮಾಧಾನ
ವ್ಯಕ್ತಪಡಿಸು­ತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.