ADVERTISEMENT

ಬೆಳೆವಿಮೆಗೆ ಇಂದು ಕೊನೆ ದಿನ: ಪಹಣಿ ವಿತರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 10:27 IST
Last Updated 31 ಜುಲೈ 2014, 10:27 IST

ಶಿರಾ: ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಪಹಣಿ ವಿತರಣೆ ಕಾರ್ಯ ಸ್ಥಗಿತಗೊಂಡಿದ್ದು, ಕಸಬಾ ಹೋಬಳಿಗೆ ಸೇರಿದ ಗ್ರಾಮಗಳ ರೈತರು ಪರದಾಡುವಂತಾಗಿದೆ.

ಕೃಷಿ ಇಲಾಖೆಗೆ ಬೆಳೆ ವಿಮೆ ಪಾವತಿಸಲು ಜುಲೈ ೩೧ ಕೊನೆಯ ದಿನವಾಗಿದ್ದು, ಪಹಣಿ ಪಡೆಯಲು ರೈತರು ತಾಲ್ಲೂಕು ಕಚೇರಿಗೆ ಎಡತಾಕುತ್ತಿದ್ದು, ಬರಿಗೈಲಿ ವಾಪಸ್‌ ಹೋಗುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತಮಗೇನು ಸಂಬಂಧವೇ ಇಲ್ಲ ಎಂಬಂತಿದ್ದಾರೆ.

ಮೂರು ದಿನಗಳಿಂದ ಕಸಬಾ ಹೋಬಳಿ ಪಹಣಿ ವಿತರಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಯಾವ ಕಾರಣಕ್ಕಾಗಿ ಪಹಣಿ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂಬುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಪಹಣಿಗಾಗಿ ಅಲೆದು ರೈತರು ಸುಸ್ತಾಗಿದ್ದಾರೆ.

ಬೆಳೆ ವಿಮೆ ಪಾವತಿಸಲು ಗುರುವಾರ ಕೊನೆ ದಿನವಾಗಿದೆ. ವಿಮೆಯ ಕಂತು ಕಟ್ಟಲು ಪಹಣಿ ಇರಲೇಬೇಕು. ಪಹಣಿ ತೆಗೆದುಕೊಳ್ಳಲು ಬಂದರೆ ಇಲ್ಲಿ ನೀಡುತ್ತಿಲ್ಲ. ಹೀಗಾಗಿ ಬೆಳೆ ವಿಮೆ ಪಾವತಿಸುವುದು ಹೇಗೆ ಎಂಬ ಭೀತಿ ಎದುರಾಗಿದೆ. ತಹಶೀಲ್ದಾರ್‌ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿಯನ್ನು ಕೇಳಿದರೆ ಅವರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಬೆಳೆ ವಿಮೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಬಹುತೇಕರು ಬೆಳೆ ವಿಮೆ ಪಾವತಿಸಿಲ್ಲ. ಜುಲೈ ೩೧ ಕೊನೆಯ ದಿನ ಎಂದು ತಿಳಿದು ಹಲವರು ಪಹಣಿ ಪಡೆಯಲು ಬಂದು ವಾಪಸ್‌ ಹೋಗಿದ್ದಾರೆ.
ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಪಹಣಿ ವಿತರಣೆ ಸ್ಥಗಿತಗೊಳಿಸಿದ್ದಾರೆ ಎಂದು ರೈತರು ಆರೋಪಿಸಿದರು.

ಪಹಣಿ ಸ್ಥಗಿತಗೊಳಿಸಿರುವ ಕುರಿತು ತಹಶೀಲ್ದಾರ್‌ ಪದ್ಮನಾಭಶಾಸ್ತ್ರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆ ರೀತಿಯ ಯಾವುದೇ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕಚೇರಿಗೆ ಬನ್ನಿ ಮಾತನಾಡೋಣ ಎಂದು ದೂರವಾಣಿ ಸಂಪರ್ಕ ಸ್ಥಗಿತಗೊಳಿಸಿದರು.

ಸಂಜೆ ೪.೩೦ರವರೆಗೆ ಅವಕಾಶ: ಬೆಳೆ ವಿಮೆ ಪಾವತಿಸಲು ಜೂನ್‌ ೩೦ ಕಡೆಯನ ದಿನವಾಗಿತ್ತು. ಆದರೆ ರೈತರ ಒತ್ತಾಯದ ಮೇರೆಗೆ ಜುಲೈ ೩೧ರ ವರೆಗೆ ಅವಧಿ ವಿಸ್ತರಿಸಾಗಿತ್ತು. ಪಹಣಿ ಪಡೆಯಲು ಸಾಧ್ಯವಾಗದಿದ್ದರೆ ತಮ್ಮ ವ್ಯಾಪ್ತಿಯ ಪಂಚಾಯಿತಿ ಗ್ರಾಮ ಲೆಕ್ಕಿಗರಿಂದ ದೃಢೀಕರಣ ಪತ್ರ ಪಡೆದು ವಿಮೆ ಪಾವತಿಸಬಹುದಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಹೋಬಳಿ ವ್ಯಾಪ್ತಿಯ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಂಜೆ ೪.೩೦ರ ವರೆಗೆ ಬೆಳೆ ವಿಮೆ ಪಾವತಿಸಲು ರೈತರಿಗೆ ಕಾಲಾವಕಾಶವಿದೆ ಎಂದು ಅವರು ಹೇಳಿದರು.

ರೈತರ ಹಣಕ್ಕೆ ಸಾಟಿಯಾಗದ 11 ರೂಪಾಯಿ
ಶಿರಾ: ಕೇವಲ 11ರೂಪಾಯಿ ವ್ಯತ್ಯಾಸದಿಂದ ರೈತರಿಗೆ ತಲುಪಬೇಕಾದ ಒಂದು ಕೋಟಿಗೂ ಹೆಚ್ಚು ಹಣ ತಹಸೀಲ್ದಾರರ ಬ್ಯಾಂಕ್ ಖಾತೆಯಲ್ಲೇ ಹಲವು ದಿನದಿಂದ ಉಳಿದಿದೆ.

ರೈತರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇನ್ಪುಟ್ ಸಬ್ಸಿಡಿಯ ಹಣ ವರ್ಗಾಯಿಸಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ತಹಶೀಲ್ದಾರ್ ಖಾತೆಗೆ ₨ 1,38,97,782 ಜಮೆ ಮಾಡಲಾಗಿತ್ತು.

ಇದರಲ್ಲಿ ಬುಕ್ಕಾಪಟ್ಟಣ ಹೋಬಳಿಯ 2032 ರೈತರಿಗೆ ₨ 92,7990, ಕಸಬಾ ಹೋಬಳಿಯ 2039 ರೈತರಿಗೆ ₨ 37,18, 940, ಹುಲಿಕುಂಟೆ ಹೋಬಳಿಯ 1370 ರೈತರಿಗೆ ₨ 25,37,996, ಗೌಡಗೆರೆ ಹೋಬಳಿಯ 2103 ರೈತರಿಗೆ ₨ 38,30,162 ಹಾಗೂ ಕಳ್ಳಂಬೆಳ್ಳ ಹೋಬಳಿಯ 1826 ರೈತರಿಗೆ 28,74,695 ಹಣ ವರ್ಗಾಯಿಸುವಂತೆ ಶಾಖಾ ವ್ಯವಸ್ಥಾಪಕರಿಗೆ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಜುಲೈ 17ರಂದು ಲಿಖಿತ ಪತ್ರ ಬರೆದಿದ್ದಾರೆ.

ಆದರೆ ಬ್ಯಾಂಕ್ ಅಧಿಕಾರಿಗಳು ಈವರೆಗೂ ರೈತರಿಗೆ ಹಣ ವರ್ಗಾಯಿಸಿಲ್ಲ. ಕಾರಣ ಕೇಳಿದರೆ ಲೆಕ್ಕದಲ್ಲಿ ೧೧ ರೂಪಾಯಿ ವ್ಯತ್ಯಾಸ ಬರುತ್ತಿದೆ ಎನ್ನುತ್ತಿದ್ದಾರೆ.

ಕಂದಾಯ ಇಲಾಖೆ ಪಟ್ಟಿ ಕೊಟ್ಟಿರುವ ತಾಲ್ಲೂಕಿನ ಒಟ್ಟು 9370 ರೈತರಿಗೆ ₨ 1,38,89,883 ವಿಂಗಡಿಸಿ ಹಣ ವರ್ಗಾಯಿಸಿದರೆ 11 ರೂಪಾಯಿ ಉಳಿಯುತ್ತದೆ. ಸಾಟಿಯಾದ ಹಣವನ್ನು ಏನು ಮಾಡಬೇಕೆಂದು ತಿಳಿಯದೆ ರೈತರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಖೆ ವ್ಯವಸ್ಥಾಪಕ ಎಸ್.ಭಾಸ್ಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘₨ ೧೧ ರೂಪಾಯಿ ರೂಪಾಯಿ ವ್ಯತ್ಯಾಸ ಸರಿಪಡಿಸುವಂತೆ ಕಂದಾಯ ಇಲಾಖೆಯ ಸಂಬಂಧಿಸಿದ ಕೇಸ್ ವರ್ಕರ್ ಮತ್ತು ತಹಶೀಲ್ದಾರ್‌ಗೆ ದೂರವಾಣಿ ಮೂಲಕ ತಿಳಿಸಲಾಗಿದೆ. ಅವರು ಬರುತ್ತಿಲ್ಲ. ಸಾಟಿಯಾದ ೧೧ ರೂಪಾಯಿಯನ್ನು ತಹಶೀಲ್ದಾರ್ ಖಾತೆಯಲ್ಲಿಯೇ ಉಳಿಸಿ ಗುರುವಾರ ರೈತರಿಗೆ ಹಣ ವರ್ಗಾಯಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT