ADVERTISEMENT

ಭತ್ತದ ಬೆಳೆಗೆ ನೀರುಹರಿಸಲು ಆಗ್ರಹ

ಮಾರ್ಕೋನಹಳ್ಳಿ ಅಚ್ಚುಕಟ್ಟು ಪ್ರದೇಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:48 IST
Last Updated 24 ಮೇ 2016, 5:48 IST

ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಮಾರ್ಕೊನಹಳ್ಳಿ ಕ್ರಾಸ್ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಕಾರ್ಯಕರ್ತರು ಹೇಮಲಾವತಿ ನಾಲಾ ವಿಭಾಗದ ಕಚೇರಿ ಮುಂದೆ ಸಭೆ ನಡೆಸಿದರು.
ಆನಂದ್ ಪಟೇಲ್ ಮಾತನಾಡಿ, ಮಾರ್ಕೊನಹಳ್ಳಿ ಜಲಾಶಯ ಅಚ್ಚುಕಟ್ಟು 5,942 ಹೆಕ್ಟೇರ್ ಪ್ರದೇಶವಿದೆ. ಭತ್ತ ಬೆಳೆಯಲು 120 ರಿಂದ 145 ದಿನಗಳು ಬೇಕಾಗುತ್ತದೆ ಎಂದು ಅಧಿಕಾರಿಗಳ ವರದಿ ಹೇಳುತ್ತದೆ. ಆದರೆ, ಭತ್ತ ಬೆಳೆಯಲು ಇರುವ ಅಚ್ಚುಕಟ್ಟು ಪ್ರದೇಶದ ವರದಿ ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಷ ಭತ್ತದ ಬೆಳೆಗೆ ನೀರು ಅವಶ್ಯವಿದ್ದು, ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಲಾಶಯದಲ್ಲಿ ನೀರು ಹೆಚ್ಚಾಗಿ ಶಿಂಷಾ ನದಿಗೆ ಹರಿಯುತ್ತಿದೆ. ಮಾರ್ಕೊನಹಳ್ಳಿ –ಮಂಗಳಾ ಸಂಪರ್ಕ ಕಾಲುವೆ ಕಾಮಗಾರಿಯನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಪಾಲಕ ಎಂಜಿನಿಯರ್ ವರದರಾಜು ಅವರಿಗೆ ಮನವಿ ಸಲ್ಲಿಸಿದರು. ಕೂಡಲೇ ಪರಿಸ್ಥಿತಿ ಅವಲೋಕಿಸಿ ಭತ್ತದ ಬೆಳೆಗೆ ನೀರು ಹರಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. 

ಸಭೆಯಲ್ಲಿ ಪದಾಧಿಕಾರಿಗಳಾದ ರಮೇಶ್, ನಾರಾಯಣಪ್ಪ, ಮಧುಸೂದನ್, ಅನಿಲ್, ಸೀತಾರಾಮು, ಶ್ರೀನಿವಾಸ್, ನವೀನ್, ವೆಂಕಟೇಶ, ಅನಿಲ್ ಕುಮಾರ್, ತಿರುಮಲಯ್ಯ, ರಾಜು ಇತರರು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.