ADVERTISEMENT

ಭದ್ರಾ ಯೋಜನೆ: ತಾಲ್ಲೂಕಿನ 19 ಕೆರೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 28 ಮೇ 2017, 5:59 IST
Last Updated 28 ಮೇ 2017, 5:59 IST
ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ವಾಸ್ತುಶಿಲ್ಪಿ ಸಮೀರ್‌ ಅವರು ಪೊಲೀಸ್‌ ತರಬೇತಿ ಕೇಂದ್ರದ ನಕ್ಷೆ ಕುರಿತು ವಿವರಣೆ ನೀಡಿದರು. ಪೊಲೀಸ್‌ ಮಹಾ ನಿರ್ದೇಶಕ ರೂಪ್‌ಕುಮಾರ್‌ ದತ್ತಾ, ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಇದ್ದಾರೆ
ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ವಾಸ್ತುಶಿಲ್ಪಿ ಸಮೀರ್‌ ಅವರು ಪೊಲೀಸ್‌ ತರಬೇತಿ ಕೇಂದ್ರದ ನಕ್ಷೆ ಕುರಿತು ವಿವರಣೆ ನೀಡಿದರು. ಪೊಲೀಸ್‌ ಮಹಾ ನಿರ್ದೇಶಕ ರೂಪ್‌ಕುಮಾರ್‌ ದತ್ತಾ, ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಇದ್ದಾರೆ   

ಕೊರಟಗೆರೆ: ‘ಭದ್ರಾ ಮೇಲ್ದಂಡೆ ಯೋಜನೆಯಿಂದಾಗಿ ತಾಲ್ಲೂಕಿನ 19 ಕೆರೆಗಳಿಗೆ ನೀರು ಬರಲಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ತುಂಬಗಾನಹಳ್ಳಿಯಲ್ಲಿ ₹ 500 ಕೋಟಿ ವೆಚ್ಚದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಕೆಎಸ್ಆರ್‌ಪಿ 12ನೇ ಪಡೆಯ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಗಾಗಿ ₹ 62 ಸಾವಿರ ಕೋಟಿ ಮೀಸಲಿಡಲಾಗಿದೆ. ₹ 13,500 ಕೋಟಿ ಎತ್ತಿನಹೊಳೆ ಯೋಜನೆಗೆ ಖರ್ಚು ಮಾಡಿ ಈ ಭಾಗಕ್ಕೆ ನೀರು ತರುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದರು. ‘ತುಂಬಗಾನಹಳ್ಳಿಯಲ್ಲಿ ಪ್ರಾರಂಭವಾಗುತ್ತಿರುವ ಕೆಎಸ್ಆರ್‌ಪಿ 12 ಪಡೆಯ ತರಬೇತಿ ಕೇಂದ್ರದಲ್ಲಿ 1 ಸಾವಿರ ಜನ ತರಬೇತಿ ಪಡೆಯಲಿದ್ದಾರೆ. ಇದೇ ಭಾಗದಲ್ಲಿ ಈಗಾಗಲೇ ₹ 16 ಕೋಟಿ ವೆಚ್ಚದಲ್ಲಿ ಏಕಲವ್ಯ ವಸತಿ ಶಾಲೆ ಪ್ರಾರಂಭಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಯಾಗಲಿದೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮು ಗಲಭೆಗಳು ಕಡಿಮೆಯಾಗಿವೆ. ವಿರೋಧ ಪಕ್ಷದವರು ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಮಸೀದಿ, ಚರ್ಚ್‌ಗಳ ಮೇಲೆ ದಾಳಿಗಳಾದವು  ಎಂಬುದರ ಬಗ್ಗೆ ನಮ್ಮಲ್ಲಿ ಅಂಕಿ ಅಂಶ ಇದೆ’ ಎಂದು ತಿಳಿಸಿದರು.
ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ, ‘ಬಿಜೆಪಿಯವರು ಜೈಲಿಗೆ ಹೋಗಿ ಬಂದು ಈಗ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಅವರಿಂದ ನಾವು ನೀತಿ ಪಾಠ ಕಲಿಯಬೇಕಾಗಿಲ್ಲ. ಮೊದಲು ಅವರೇನೆಂಬುದನ್ನು ಅರ್ಥ ಮಾಡಿಕೊಂಡು ಇತರರ ಬಗ್ಗೆ ಮಾತನಾಡಲಿ’ ಎಂದರು.

ADVERTISEMENT

ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಶಾಸಕ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿದರು. ಶಾಸಕ ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಾಂತಾರಾಮ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಹಿರಿಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಸೀಮಂತ್‌ಕುಮಾರ್, ಸುನಿಲ್‌ಕುಮಾರ್ ಚರಣ್‌ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾರಾಯಣಮೂರ್ತಿ, ಪ್ರೇಮಾ, ಜಿ.ಆರ್.ಶಿವರಾಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ವೆಂಕಟಾಲಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಎಸ್‌ಪಿ ಲೋಕೇಶ್‌ಕುಮಾರ್, ಡಿವೈಎಸ್‌ಪಿ ಕಲ್ಲೇಶಪ್ಪ, ಸಿಪಿಐ ಮುನಿರಾಜು, ಪಿಎಸ್ಐಗಳಾದ ಮಂಜುನಾಥ್, ಸಂತೋಷ್‌ ಕುಮಾರ್ ಇದ್ದರು.

ಹೈಕಮಾಂಡ್‌ಗೆ ಬಿಟ್ಟ ವಿಚಾರ
‘ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಮುಂದುವರೆಯಿರಿ ಎಂದರೆ ಮುಂದುವರಿಯುವೆ. ಬೇಡವೆಂದರೆ ಬಿಟ್ಟುಕೊಡುವೆ’ ಎಂದು ಪರಮೇಶ್ವರ್‌ ಹೇಳಿದರು.‘ಯಾವ ಕಾರಣಕ್ಕೂ ರಾಜ್ಯದಲ್ಲಿ ಜಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ’ ಎಂದರು.

‘ಬಿಜೆಪಿಗೆ ಬದ್ದತೆ ಇಲ್ಲ. ವಯಸ್ಸಾದವರಿಗೆ ಅಧಿಕಾರ ನೀಡುವುದಿಲ್ಲ ಎಂದವರು ಈಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಹೇಗಿದ್ದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದಕ್ಕೆ ಅವರೇ ಉತ್ತರ ಹೇಳಬೇಕು’ ಎಂದು ಅವರು ಹೇಳಿದರು.

* *

ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಿಗೆ ಬೆದರಿಕೆ ಸಂದೇಶ ಕಳುಹಿಸಿರುವವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಡಾ.ಜಿ.ಪರಮೇಶ್ವರ್, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.