ADVERTISEMENT

ಭಾರತೀಯರು ಶ್ರೇಷ್ಠ ಗಣಿತಜ್ಞರು

ಸಿರಿ ಉತ್ಸವದಲ್ಲಿ ಡಾ.ಸಿ.ಸುಬ್ಬಕೃಷ್ಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:12 IST
Last Updated 17 ಜುಲೈ 2017, 6:12 IST

ತುಮಕೂರು: ಕಲಿಕೆಯು ವೆಚ್ಚವಲ್ಲ, ಹೊರತಾಗಿ ಇದು ಹೂಡಿಕೆಯಾಗಿದೆ ಎಂದು ಭಾರತೀಯ ಉಪಕರಣ ನಿರ್ವಹಣಾ ಸಂಸ್ಥೆಯ ನಿವೃತ್ತ ಅಧ್ಯಕ್ಷ ಡಾ.ಸಿ.ಸುಬ್ಬಕೃಷ್ಣ ಅಭಿಪ್ರಾಯಪಟ್ಟರು.

ನಗರದ ಶೃಂಗೇರಿ ಶಂಕರಮಠದಲ್ಲಿ ಸಿರಿನಾಡು ಮಹಾಸಭಾ ಆಶ್ರಯದಲ್ಲಿ ಭಾನುವಾರ ನಡೆದ ಸಿರಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೊನ್ನೆಯನ್ನು ಕೊಡುಗೆಯಾಗಿ ನೀಡಿದ್ದು ಭಾರತೀಯರು. ಆರ್ಯಭಟ, ವರಾಹಮಿಹೀರ, ಭಾಸ್ಕರ, ಬ್ರಹ್ಮಗುಪ್ತರಂತಹ ಶ್ರೇಷ್ಠ ಗಣಿತಜ್ಞರು ವಿಶ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭೂಮಿ ದುಂಡಗಿದೆ ಎನ್ನುವ ಕಲ್ಪನೆ ನೀಡಿದ್ದು ಭಾರತೀಯರೇ ಆಗಿದ್ದು, ವರಾಹವತಾರದಲ್ಲಿ ಭೂಮಿಯ ಸ್ವರೂಪದ ಬಗ್ಗೆ ಉಲ್ಲೇಖವಿದೆ ಎಂದರು.

ADVERTISEMENT

ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಆರ್.ನಾಗರಾಜಾರಾವ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಬ್ರಾಹ್ಮಣರು ಸಂಘಟಿತರಾಗಬೇಕು. ನಗರದಲ್ಲಿ 15 ರಿಂದ 20ಸಾವಿರ ಬ್ರಾಹ್ಮಣರಿದ್ದಾರೆ. ಇವರೆಲ್ಲ ಒಂದಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕು’ ಎಂದರು.

ನಗರದಲ್ಲಿ ಬ್ರಾಹ್ಮಣ ಮಹಾಸಭಾದ ಕಚೇರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ  ಗಾಯತ್ರಿಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ. ತುಮಕೂರಿನಲ್ಲಿಯೂ ಗಾಯತ್ರಿಭವನ ನಿರ್ಮಾಣವಾಗಬೇಕಿದೆ ಎಂದರು.

ಸಿರಿನಾಡು ಮಹಾಸಭಾ ಜಿಲ್ಲಾ ಶಾಖೆ ಅಧ್ಯಕ್ಷ ಎಂ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್‌.ಎನ್‌.ಸುಬ್ರಹ್ಮಣ್ಯ, ಎಸ್‌, ಸುದರ್ಶನಂ, ಎಚ್‌.ಸಿ.ಪ್ರಸನ್ನಕುಮಾರ್‌, ಆರ್‌.ಎನ್‌.ಸತ್ಯನಾರಾಯಣ, ಜಿ.ಎಸ್‌.ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.