ADVERTISEMENT

ಭೀಕರ ಬರ: 2500 ರೈತರು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:33 IST
Last Updated 11 ಏಪ್ರಿಲ್ 2017, 10:33 IST

ಕೊರಟಗೆರೆ: ‘ಭೀಕರ ಬರದ ಕಾರಣ ರಾಜ್ಯದಲ್ಲಿ ಈಗಾಗಲೇ 2,500ಕ್ಕೂ ಹೆಚ್ಚು ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ’ ಎಂದು   ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.

ಬರ ನಿರ್ವಹಣೆಗಾಗಿ ನೀಡಬೇಕಾದ ₹ 5 ಸಾವಿರ ಕೋಟಿ ನೀಡದೇ ಕೇಂದ್ರ ಸರ್ಕಾರ  ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.‘ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೈತರ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಸಾಲ ಮನ್ನಾಕ್ಕೆ  ಮೀನಮೇಷ ಎಣಿಸುತ್ತಿದೆ’ ಎಂದು ಹೇಳಿದರು.

‘ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ (ಡಿಸಿಸಿ ಬ್ಯಾಂಕ್‌) ಸಾಲ ಪಡೆದ ರೈತರು ಸಾವಿಗೀಡಾದರೆ ಅಂಥವರ ಸಾಲ ಮನ್ನಾ ಮಾಡುವ ಕೆಲಸವನ್ನು ಡಿಸಿಸಿ ಬ್ಯಾಂಕ್‌ ಮಾಡುತ್ತಿದೆ.  ಇದೊಂದು ಶಾಘ್ಲನೀಯ ಕೆಲಸ. ಇದಕ್ಕೆ ಕಾರಣವಾಗಿರುವ ಬ್ಯಾಂಕ್ ಅಧ್ಯಕ್ಷ, ಶಾಸಕ ಕೆ.ಎನ್.ರಾಜಣ್ಣ ಅವರನ್ನು ಅಭಿನಂದಿಸುತ್ತೇನೆ’ ಎಂದರು.

ADVERTISEMENT

‘ ರಾಜಣ್ಣ ಅವರಿಗೆ  ಸಹಕಾರಿ ಕ್ಷೇತ್ರದ ಮೇಲಿನ ಕಾಳಜಿ ಅಪಾರ. ಹೀಗಾಗಿ 20 ವರ್ಷಗಳಿಂದಲೂ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಅಧಿಕಾರ ಸಿಕ್ಕಾಗ ಈ ರೀತಿಯ ಜನ ಸಾಮಾನ್ಯರ ಕೆಲಸಗಳನ್ನು ಮಾಡಬೇಕು’ ಎಂದರು.

‘ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದರೆ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳು ನೀರಾವರಿಗೆ ಒಳಪಡಲಿವೆ’ ಎಂದು ಹೇಳಿದರು.
ಶಾಸಕ ಕೆ.ಎನ್.ರಾಜಣ್ಣ  ಮಾತನಾಡಿ, ‘ಜಿಲ್ಲೆಯ ಪ್ರತಿಯೊಬ್ಬ ರೈತರಿಗೂ ಬ್ಯಾಂಕಿನಿಂದ ಕನಿಷ್ಠ ₹ 25 ಸಾವಿರ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ₹ 200 ಕೋಟಿ ಸಾಲ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಏ.13ರಂದು ತುಮಕೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಮೃತ ರೈತರ ವಾರಸುದಾರರಿಗೆ ಸಾಲ ತೀರುವಳಿ ಪತ್ರ ನೀಡಲಾಗುವುದು. ಸಾಲ ಪಡೆಯದ ರೈತರು ನೂತನ ಶಾಖೆಯಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಸೌಲಭ್ಯ ಪಡೆಯಬೇಕು’ ಎಂದರು.

ಶಾಸಕ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿ, ಹೊಳವನಹಳ್ಳಿ ವಿಎಸ್ಎಸ್ಎನ್ ಕಟ್ಟಡ ಕಾಂಪೌಂಡ್ ನಿರ್ಮಾಣಕ್ಕೆ ₹ 3 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.
ಮೃತಪಟ್ಟ ರೈತರ ಕುಟುಂಬದ ಸದಸ್ಯರಿಗೆ ಸಾಲ ತೀರುವಳಿ ಪತ್ರ ನೀಡಲಾಯಿತು. ಸ್ವಸಹಾಯ ಸಂಘ ಹಾಗೂ ರೈತರಿಗೆ ಸಾಲ ಮುಂಜೂರಾತಿ ಪತ್ರ ವಿತರಿಸಲಾಯಿತು.
ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಜಿ.ವೆಂಕಟಾಚಲಯ್ಯ, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಹನುಮಾನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಆರ್.ಶಿವರಾಮಯ್ಯ, ನಾರಾಯಣಮೂರ್ತಿ, ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ, ವಿಜಯ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಪರಾಮಯ್ಯ, ವಿಎಸ್ಎಸ್ಎನ್ ಅಧ್ಯಕ್ಷ ಸೈಯದ್ ರಿಯಾಸತ್ ಅಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರೇಶ್‌, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಟಿಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಯ್ಯ, ಮುಖಂಡರಾದ ಎ.ಡಿ.ಬಲರಾಮಯ್ಯ, ಜೆ.ಎನ್.ನರಸಿಂಹರಾಜು, ವಿಜಯಶಂಕರ್, ಜಿ.ಎಸ್.ರವಿಕುಮಾರ್, ಜಯರಾಂ, ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.