ADVERTISEMENT

ಮಕ್ಕಳಿಗೆ ಆಶಾಕಿರಣವಾದ ‘ಮಡಿಲು’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:52 IST
Last Updated 12 ಏಪ್ರಿಲ್ 2017, 4:52 IST
ಪಿಯುಸಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದ ಗಂಗಮ್ಮ ಅವರನ್ನು ಪ್ರೊ.ಕಿರಣ್‌ಕುಮಾರ್‌ ಸನ್ಮಾನಿಸಿದರು
ಪಿಯುಸಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದ ಗಂಗಮ್ಮ ಅವರನ್ನು ಪ್ರೊ.ಕಿರಣ್‌ಕುಮಾರ್‌ ಸನ್ಮಾನಿಸಿದರು   

ತುಮಕೂರು: ನಗರದ ನಜರಾಬಾದ್‌ ಗೂಡ್ಸ್‌ ಶೆಡ್‌ ಹಾಗೂ ಶಾಂತಿ ನಗರದ ಕೊಳೆಗೇರಿಗಳಿಗೆ ಮಡಿಲು ಸಂಸ್ಥೆಯ ಪದಾಧಿಕಾರಿಗಳು ಈಚೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಕಲೆತರು.

ಹಂದಿ ಜೋಗರ ಸಮುದಾಯದ15 ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯಲಾಯಿತು. ಮಕ್ಕಳ ಓದಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಸಂಸ್ಥೆಯ ಲಕ್ಷ್ಮಿ ಭರವಸೆ ನೀಡಿದರು.

ತುಮಕೂರು ವಿ.ವಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಕಿರಣ್‌ ಮಾತನಾಡಿ, ‘ಸಂಘ ಸಂಸ್ಥೆಗಳು ಸೇವಾ ಕೆಲಸವನ್ನು ಕೊಳೆಗೇರಿಗಳಿಂದಲೇ ಆರಂಭ  ಮಾಡಬೇಕು. ಈ ವರ್ಗದವರಿಗೆ ನೆರವಿನ ಅವಶ್ಯಕತೆ ಇದೆ. ಕಾನೂನುಗಳ ಅರಿವು ಇಲ್ಲದಿರುವುದರಿಂದ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿಯನ್ನು ಸೇವಾ ಸಂಸ್ಥೆಗಳು ಹೊರಬೇಕು’ ಎಂದು ಸಲಹೆ  ನೀಡಿದರು.

‘ಕೊಳೆಗೇರಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸುತ್ತಿದ್ದಾರೆ. ಇಂಥ ಮಕ್ಕಳನ್ನು ಗುರುತಿಸಿ ಶೈಕ್ಷಣಿಕ ದತ್ತು ತೆಗೆದುಕೊಂಡಿರುವ ಕೆಲಸ ಶಾಘ್ಲನೀಯ’ ಎಂದು ಮೆಚ್ಚುಗೆ ಸೂಚಿಸಿದರು.

ಮಹಿಳಾ ಅಲೆಮಾರಿ ಬುಡಕಟ್ಟು ಮಹಾ ಸಭಾದ ಅಧ್ಯಕ್ಷೆ ರಾಮಕ್ಕ ಮಾತನಾಡಿ, ‘ಈ ಮಕ್ಕಳು  ರಸ್ತೆಗಳಲ್ಲಿ ಭಿಕ್ಷೆ ಬೇಡಿ ಓದುತ್ತಿದ್ದರು. ಕಷ್ಟಪಟ್ಟು ಇಲ್ಲಿವರೆಗೂ ಓದಿದ್ದಾರೆ. ಇವರಿಗೆ ಸಂಸ್ಥೆ ಒಂದು ಆಶಾ ಕಿರಣವಾಗಿದೆ’ ಎಂದು ಸಂಭ್ರಮಪಟ್ಟರು. ಸಂಸ್ಥೆಯ ಅರಸು, ಅರ್ಜುನ್‌, ಆನಂದ್‌, ಅಬ್ರಹಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.