ADVERTISEMENT

ಮಕ್ಕಳ ನಟನೆ ಕಂಡು ತಬ್ಬಿಬ್ಬಾದ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:42 IST
Last Updated 15 ಮಾರ್ಚ್ 2017, 7:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಧುಗಿರಿ: ಮಕ್ಕಳ ವರ್ತನೆ ಕಂಡು ಕ್ಷಣಕಾಲ ತನಿಖಾ ತಂಡವೇ ತಬ್ಬಿಬ್ಬಾಯಿತು. ನಟಿಸಲಾಗದ ಇಬ್ಬರು ಹೆಣ್ಣು ಮಕ್ಕಳು ಅಲ್ಲಿಂದ ಓಟ ಕಿತ್ತರು. –ಇದು ಪಟ್ಟಣದ  ಜ್ಞಾನ ಭಾರತಿ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ಪಾಠ ಶಾಲೆಯಲ್ಲಿ ಬುಧವಾರ ಕಂಡು ಬಂದ ದೃಶ್ಯ.

ಈ ಶಾಲೆಯಲ್ಲಿ ಮಕ್ಕಳ ಸುಳ್ಳು ಲೆಕ್ಕ ತೋರಿಸಿ ಅನುದಾನ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾರಾಮ್ ಹಾಗೂ ತಂಡ ತನಿಖೆಗಾಗಿ ಶಾಲೆಗೆ ಭೇಟಿ ನೀಡಿದಾಗ ಅವರಿಗೂ ಅಚ್ಚರಿ ಕಾದಿತ್ತು.

ಮಕ್ಕಳ ಲೆಕ್ಕ ತೋರಿಸುವ ಸಲುವಾಗಿ ಸಮೀಪದ ಸರ್ಕಾರಿ ಬಾಲಕಿಯರ ಶಾಲೆಯಿಂದ ಏಳು ಮಕ್ಕಳನ್ನು ಕರೆ ತಂದು ಕೂರಿಸಲಾಗಿತ್ತು. ಅಧಿಕಾರಿಗಳನ್ನು ಕಾಣುತ್ತಲೇ ಅಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ಓಡಿ ಪರಾರಿಯಾದರು.

ADVERTISEMENT

ಪರಾರಿಯಾದ ಮಕ್ಕಳನ್ನು ತಂಡ ಹುಡುಕಿಕೊಂಡು ಶಾಲೆಯಿಂದ ಶಾಲೆಗೆ ಅಲೆಯಿತು. ಕೊನೆಗೆ ಜ್ಞಾನ ಭಾರತಿ ಶಾಲೆ ಪಕ್ಕವೇ ಇರುವ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಮಕ್ಕಳು ಕುಳಿತಿರುವುದನ್ನು ನೋಡಿದ ತಂಡಕ್ಕೆ ಅಕ್ರಮಗಳ ವಾಸನೆ ತಿಳಿದುಬಂತು.

ಜ್ಞಾನ ಭಾರತಿ ಶಾಲೆಗೆ ತನಿಖೆಗಾಗಿ ತಂಡ ಬರಲಿದೆ ಎಂದು ಗೊತ್ತಾದ ಮೇಲೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೀರಪ್ಪ  ಅವರೇ ತಮ್ಮ ಶಾಲೆಯ ಏಳು  ಮಕ್ಕಳನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದರು.

‘ಇದು ಇದೇ ಮೊದಲಲ್ಲ. ಆ ಶಾಲೆಗೆ ಅಧಿಕಾರಿಗಳು ತಪಾಸಣೆಗೆ ಬಂದಾಗಲೆಲ್ಲ ಇಲ್ಲಿಂದ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದೆನು’ ಎಂದು ದೇವೀರಪ್ಪ ಸಿಇಒ ಶಾಂತಾರಾಮ್ ಅವರ ಮುಂದೆ ತಪ್ಪೊಪ್ಪಿಕೊಂಡರು.

ಇದರಿಂದ ಕೋಪಗೊಂಡ ಶಾಂತಾರಾಮ್‌ ಸ್ಥಳದಲ್ಲೆ ದೇವೀರಪ್ಪಅವರನ್ನು ಅಮಾನತು ಮಾಡಿದರು.

ಶಾಲೆಯ ಶಿಕ್ಷಕಿ ಗೀತಾ ಅವರನ್ನು ಜ್ಞಾನ ಭಾರತಿ ಶಾಲೆಗೆ ಕರೆದುಕೊಂಡು ಹೋಗಿ ಸರ್ಕಾರಿ ಶಾಲೆಯ ಮಕ್ಕಳನ್ನು ಪತ್ತೆ ಹಚ್ಚುವಂತೆ ಹೇಳಿದಾಗ ಅಲ್ಲಿದ್ದ ಐದು ಮಕ್ಕಳನ್ನು ಅವರು ಗುರುತಿಸಿದರು. ನಂತರ ಈ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗಲಾಯಿತು.

ಶಾಲೆಯ ಅವಧಿಯಲ್ಲಿ ಮಕ್ಕಳನ್ನು ಬೇರೆ ಕಡೆಗೆ ಕಡೆದುಕೊಂಡು ಹೋಗಲಾಗಿದೆ ಎಂದು ಮಧುಗಿರಿ ಬಿಇಒ ಅವರು ಜ್ಞಾನ ಭಾರತಿ ಶಾಲೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

**

84 ಮಕ್ಕಳ ಹಾಜರಾತಿ

ಜ್ಞಾನ ಭಾರತಿ ಶಾಲೆಯವರು ಶಾಲೆಯಲ್ಲಿ 84 ಮಕ್ಕಳ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದರು ಎಂಬ ದೂರು ಆಧರಿಸಿ ತನಿಖೆ ಮುಂದುವರೆದಿದೆ.
ಪ್ರತಿ ಮಗುವಿಗೆ ವರ್ಷಕ್ಕೆ ₹ 5 ಸಾವಿರ ಹಾಗೂ  ಪ್ರತಿ ತಿಂಗಳ ಊಟ, ವಸತಿ ಖರ್ಚನ್ನು ಅಂಗವಿಕಲರ ಕಲ್ಯಾಣ ಇಲಾಖೆ ನೀಡುತ್ತದೆ.

ಈ ಹಣಕ್ಕಾಗಿ ಮಕ್ಕಳ ಹಾಜರಾತಿ ಲೆಕ್ಕ ತಪ್ಪು ತೋರಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದರು ಎಂದು ಹೇಳಲಾಗಿದೆ.  ₹ 44 ಲಕ್ಷ ವಂಚನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

**

ಕೂಲಿಗೆ ಮಕ್ಕಳು

ಶಾಲೆಗೆ ತಪಾಸಣೆಗಾಗಿ ಅಧಿಕಾರಿಗಳು ಬಂದಾಗಲೆಲ್ಲ ಬೇರೆ ಬೇರೆ ಊರುಗಳಿಂದ ಮಕ್ಕಳಿಗೆ ಕೂಲಿ ಕೊಟ್ಟು ಕರೆ ತರಲಾಗುತ್ತಿತ್ತು. ಮೂಕರಂತೆ ಅವರಿಂದ ನಟನೆ ಮಾಡಿಸಲಾಗುತ್ತಿತ್ತು ಎಂದು ತನಿಖಾ ತಂಡಕ್ಕೆ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಈ ಶಾಲೆಯ ಬಗ್ಗೆ  ಸರ್ಕಾರಕ್ಕೆ ಹಲವು ದೂರುಗಳು ಹೋಗಿದ್ದವು. ಇದನ್ನು ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ತನಿಖೆ ನಡೆಸಿ ವರದಿ ನೀಡುವಂತೆ ಜಿ.ಪಂ. ಸಿಇಒ ಅವರಿಗೆ ಸೂಚಿಸಿದ್ದಾರೆ.

**

ಒಂದು ಮಗು, 10 ಹಾಜರಾತಿ!
ಬಯೋ ಮೆಟ್ರಿಕ್ ಗೆ ಒಂದೇ ಮಗುವಿನ ಹತ್ತು ಬೆರಳುಗಳ ಮುದ್ರೆ ಬಳಸಿ ಹತ್ತು ಮಕ್ಕಳ ಹಾಜರಾತಿ ತೋರಿಸುತ್ತಿದ್ದರು ಎಂಬ ದೂರನ್ನು ತನಿಖಾ ತಂಡ ಗಂಭೀರವಾಗಿ ಪರಿಗಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.