ADVERTISEMENT

ಮಾದರಿಯಾಯ್ತು ತೋವಿನಕೆರೆ ಗೋಶಾಲೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:17 IST
Last Updated 7 ಏಪ್ರಿಲ್ 2017, 10:17 IST
ಗೋಶಾಲೆಯಲ್ಲಿ ನಾಟಿ ಹಸುಗಳು
ಗೋಶಾಲೆಯಲ್ಲಿ ನಾಟಿ ಹಸುಗಳು   

ತೋವಿನಕೆರೆ: ಸರ್ಕಾರ ಬರ ಪರಿಹಾರ ಯೋಜನೆಯಡಿ ರೈತರ ರಾಸುಗಳಿಗೆ ಆರಂಭಿಸಿರುವ ಗೋಶಾಲೆಗಳಲ್ಲಿ ಮೂಲಸೌಲಭ್ಯಗಳಿಲ್ಲ, ಸೂಕ್ತವಾಗಿ ಮೇವು ವಿತರಿಸುತ್ತಿಲ್ಲ ಎನ್ನುವ ಹಲವು ಆರೋಪಗಳು ಎಲ್ಲೆಡೆ ಸಾಮಾನ್ಯವಾಗಿ ಕೇಳುತ್ತಿವೆ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ನಡೆಯುತ್ತಿದೆ ತೋವಿನಕೆರೆ ಗೋಶಾಲೆ. ಶಾಲೆ ಆರಂಭವಾಗಿ ಮಂಗಳವಾರಕ್ಕೆ 103 ದಿನಗಳು ಪೂರ್ಣಗೊಂಡಿದ್ದು ಇಲ್ಲಿಯವರೆಗೂ ಸಮಸ್ಯೆಗಳು ಸುಳಿದಿಲ್ಲ. ಒಂದು ವೇಳೆ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬಂದರೂ ಅಧಿಕಾರಿಗಳು ಮತ್ತು ರೈತರು ಪರಸ್ಪರ ಸಮನ್ವಯದಿಂದ ಸಮಸ್ಯೆಗಳು ದೊಡ್ಡದಾಗುತ್ತಿಲ್ಲ.

ಗೋಶಾಲೆಯಲ್ಲಿ ಒಟ್ಟು 1600 ರಾಸುಗಳಿವೆ. ರಾತ್ರಿ 600 ರಾಸುಗಳು ಇಲ್ಲಿಯೇ ಇರುತ್ತವೆ. ಪ್ರತಿ ರಾಸಿಗೆ ದಿನಕ್ಕೆ 5 ಕೆ.ಜಿ ಮೇವು ನೀಡಲಾಗುತ್ತದೆ. ರಾತ್ರಿ ತಂಗುವ ರಾಸುವಿಗೆ ತಲಾ ಎರಡು ಕೆ.ಜಿ ಹೆಚ್ಚು ಮೇವು ನೀಡಲಾಗುತ್ತಿದೆ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಜಿಲ್ಲಾ ಸಹಕಾರ ಬ್ಯಾಂಕ್ ಮಾಡಿದ್ದು ಈ ವ್ಯವಸ್ಥೆಯನ್ನು ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘ ನಿರ್ವಹಿಸುತ್ತಿದೆ. ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠ ರಾತ್ರಿ ಊಟದ ವ್ಯವಸ್ಥೆ ಮಾಡಿದೆ.

ಕಣ್ಣಿಗೆ ಕಟ್ಟುವ ದೃಶ್ಯಗಳು: ಕರುವಿಗೆ ಜನನ ನೀಡಿರುವ ಹಸುಗಳು, ಅವುಗಳಿಗೆ ಔಷಧ ಪೂರೈಕೆ, ಗರ್ಭ ಧರಿಸಿರುವ ಹಸುಗಳ ಪರಿಶೀಲನೆ, ಕೃತಕ ಗರ್ಭಧಾರಣೆ, ಮೇವಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ಪಶುಪಾಲಕರು, ಹೂವು ಕಟ್ಟುತ್ತಿರುವ, ಹುಣಸೆ ಹಣ್ಣು ಸ್ವಚ್ಛ ಮಾಡುತ್ತಿರುವ ಮಹಿಳೆಯರು, ಜೋಳದ ಮೇವು ಕಟಾವು ಮಾಡುತ್ತಿರುವ ಪಶು ಪಾಲಕರು, ಹಾಲು ಕರೆದು ಮಾರಾಟಗಾರರಿಗೆ ನೀಡುವ ಮಹಿಳೆಯರು, ರೈತ ಮಕ್ಕಳ ಓದು...ಹೀಗೆ ನಾನಾ ಬಗೆಯ ದೃಶ್ಯಗಳು ಗೋಶಾಲೆಯಲ್ಲಿ ಕಾಣುತ್ತವೆ. ಈ ಚಿತ್ರಗಳೆಲ್ಲ ಗೋಶಾಲೆ ಉತ್ತಮವಾಗಿ ನಡೆಯುತ್ತಿರುವುದನ್ನು ಸೂಚಿಸುತ್ತವೆ.

ADVERTISEMENT

(ತೋವಿನಕೆರೆ ಗೋಶಾಲೆಯಲ್ಲಿ ರಾಸುಗಳು)

ಮೇವು ಪಡೆಯುವಾಗ, ಊಟ ಮಾಡುವಾಗ ಹೀಗೆ ಯಾವ ಸಮಯದಲ್ಲಿಯೂ ಇಲ್ಲಿ ಮನಸ್ತಾಪ ನಡೆದಿಲ್ಲ. ಕಂದಾಯ, ಪಶು ಇಲಾಖೆ, ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಗೋಶಾಲೆ ಸುಸೂತ್ರವಾಗಿ ನಡೆಯುತ್ತಿದೆ.

ಅಧಿಕಾರಿಗಳು-ಪಶುಪಾಲಕರು ಪರಸ್ಪರ ಮಾತುಕತೆ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಲಾರಿಗಳಲ್ಲಿ ಬರುವ ಮೇವನ್ನು ಪಶುಪಾಲಕರ ಪರೀಕ್ಷಿಸಿ ಒಪ್ಪಿದ ನಂತರ ಪಶು ವ್ಯೆದ್ಯರು ಪರೀಕ್ಷಿಸುವರು. ರೈತರ ಒಪ್ಪಿಗೆ ಇಲ್ಲದೆ ಮೇವನ್ನು ಲಾರಿಯಿಂದ ಇಳಿಸಿಲ್ಲ.

ಗೋಶಾಲೆಗೆ ರಾಸುಗಳ ಜೊತೆ ಬರುವ ಮಹಿಳೆಯರು ಕಾಕಡ, ಮಲ್ಲಿಗೆ ಹೂವಿನ ಮಾಲೆ ಕಟ್ಟಿ ಮಾರಾಟ ಮಾಡುವರು. ಕೆಲವು  ಮಹಿಳೆಯರು ಹುಣಸೆ ಹಣ್ಣು ತಂದು ಸ್ವಚ್ಛ ಮಾಡಿಕೊಳ್ಳುವರು. ದೂರದ ಹಳ್ಳಿಗಳಿಂದ ಬಂದಿರುವ ಪಶು ಪಾಲಕರು ಬೆಳಿಗ್ಗೆ ಮತ್ತು ಸಂಜೆ ಹಾಲು ಕರೆದು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವರು. ಅವರಿಂದ ಮುಂಗಡವಾಗಿ ಬೂಸ, ಫೀಡ್‌ಅನ್ನು ಸಾಲದ ರೂಪದಲ್ಲಿ ಪಡೆಯುವರು.

*

ಗೋಶಾಲೆ ಕೆಲಸ ಪುಣ್ಯದ್ದು ಎಂದು ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ನಾವು ಧ್ಯೆರ್ಯ ತುಂಬುತ್ತೇವೆ. ಎಲ್ಲ ರೈತರನ್ನು ಸಮಾನವಾಗಿ ಕಾಣುತ್ತೇವೆ.
-ವಿ.ಎಸ್. ಶ್ರೀಧರ, ಉಪ ತಹಶೀಲ್ದಾರ್

*

ಪಶು ಇಲಾಖೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ. ಕಾಯಿಲೆ ತಡೆಯಲು ಮುಂಜಾಗ್ರತೆ ವಹಿಸುತ್ತಿದ್ದೇವೆ.   ಪಶುಪಾಲಕರ ಸಹಕಾರ ಚೆನ್ನಾಗಿದೆ.
ಡಾ.ಎನ್.ಎಸ್.ಮಂಜುನಾಥ, ಪಶು ವ್ಯೆದ್ಯಾಧಿಕಾರಿ

*

ನಿಬಂಧನೆಗಳನ್ನು ಪರಸ್ಪರ ಹೊಂದಾಣಿಕೆ ಮೂಲಕ ತೀರ್ಮಾನಿಸಿದ್ದೇವೆ.  ನಮ್ಮ ಗಮನಕ್ಕೆ ಬರುವ ಮುನ್ನವೇ ಸಮಸ್ಯೆಗಳನ್ನು ರೈತರೇ ಬಗ್ಗೆ ಹರಿಸಿರುತ್ತಾರೆ. 
-ಎ.ಜಿ.ರಾಜು,
ಕಂದಾಯ ತನಿಖಾಧಿಕಾರಿ

*

ಸೌಲಭ್ಯಗಳನ್ನು ಕಲ್ಪಿಸುವಂತೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೂಚಿಸಿದ್ದಾರೆ. ರಾಸುಗಳಿಗೆ ಕುಡಿಯುವ ನೀರು, ದೀಪದ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. 
-ಮಂಜುಳಾ,
ಪಿಡಿಒ

*

15  ವರ್ಷಗಳಿಂದ ಹಾಲು ಮಾರಿ ಜೀವನ ಮಾಡುತ್ತಿದ್ದೇವೆ. ಗೋಶಾಲೆ ಪ್ರಾರಂಭ ಮಾಡಿ ಹ್ಯೆನುಗಾರಿಕೆ ಮುಂದುವರಿಸಲು ಸರ್ಕಾರ ದಾರಿ ಮಾಡಿಕೊಟ್ಟಿದ್ದೆ. 
-ನೀಲಮ್ಮ,
ರೈತ ಮಹಿಳೆ

*

ಸಮಯಕ್ಕೆ ಸರಿಯಾಗಿ ಗೋಶಾಲೆ ಪ್ರಾರಂಭವಾಯಿತು. ಸ್ವಲ್ಪ ನಿಧಾನ ಮಾಡಿದ್ದರೂ ಅರ್ಧಕ್ಕಿಂತ ಹೆಚ್ಚು ರಾಸುಗಳು ಖಾಲಿಯಾಗುತ್ತಿದ್ದವು. ತಾರತಮ್ಯ ಇಲ್ಲದೆ ಎಲ್ಲರಿಗೂ ಸೌಲಭ್ಯಗಳು ದೊರೆಯುತ್ತಿವೆ.
-ಚಾಮುಂಡಿ ದೊಡ್ಡಯ್ಯ, ರೈತ

***

-ಪಾಂಡುರಂಗಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.