ADVERTISEMENT

ಮುಂಗಾರು ಮಳೆ ವಿಫಲ, ಸಿರಿಧಾನ್ಯ ಬಿತ್ತಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 9:16 IST
Last Updated 20 ಆಗಸ್ಟ್ 2017, 9:16 IST

ಶಿರಾ: ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಈಗ ಮಳೆ ಬಂದರೆ ಹುರಳಿ, ರಾಗಿ, ಅಲಸಂಧೆ ಹಾಗೂ ಸಿರಿ ಧಾನ್ಯಗಳನ್ನು ಮಾತ್ರ ಬಿತ್ತನೆ ಮಾಡುವಂತೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜು ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ 63980 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆಯಲ್ಲದೆ ಕೇವಲ 18,968 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾಗಿದ್ದ ಶೇಂಗಾ 14 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದು, ಅದು ಸಹ ಮಳೆಯಿಲ್ಲದೆ ಒಣಗುತ್ತಿದೆ. ಈಗ ಮಳೆ ಬಂದರೆ ಶೇಂಗಾ ಬಿತ್ತನೆಯ ಅವಧಿ ಮುಗಿದಿರುವುದರಿಂದ ಹುರುಳಿ, ರಾಗಿ, ಅಲಸಂದೆ, ಹಿಂಗಾರು ಜೋಳ ಹಾಗೂ ಸಿರಿ ಧಾನ್ಯಗಳನ್ನು ಬಿತ್ತನೆ ಮಾಡುವುದು ಸೂಕ್ತ ಎಂದರು.

ಅಂಬುಲೆನ್ಸ್ ನೀಡಿ: ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಿಂದ ಅಂಬುಲೆನ್ಸ್‌ಗಾಗಿ 108ಕ್ಕೆ ಕರೆ ಮಾಡಿದರೆ ನಮಗೆ ಪಕ್ಕದ ಹಿರಿಯೂರು ಅಥವಾ ಹಿರಿಯೂರು ತಾಲ್ಲೂಕಿನ ಧರ್ಮಪುರದ ಆಸ್ಪತ್ರೆಯ ಸಂಪರ್ಕ ನೀಡುತ್ತಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಅಂಬ್ಯುಲೆನ್ಸ್ ನೀಡುವಂತೆ ಸದಸ್ಯ ಪುಟ್ಟರಾಜು ಆಗ್ರಹಿಸಿದರು.

ADVERTISEMENT

ಸದಸ್ಯ ಶ್ರೀನಿವಾಸ್ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾನವಾಗಿ ಅಂಬ್ಯುಲೆನ್ಸ್ ನೀಡಲಾಗಿತ್ತು. ಆದರೆ ಕರಣು ಟ್ರಸ್ಟ್ ನವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಇಲ್ಲಿಯೇ ಉಳಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯವರಿಗೆ ಹೇಳಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿಯ ವೇಳೆ ವೈದ್ಯರು ಇಲ್ಲದೆ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿರುವುದರಿಂದ ಹೆಚ್ಚಿನ ವೈದ್ಯರನ್ನು ರಾತ್ರಿ ಪಾಳಿಗೆ ನೇಮಕ ಮಾಡುವಂತೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥಗೌಡ ಸಲಹೆ ನೀಡಿದರು.

ಆಸ್ಪತ್ರೆಯಲ್ಲಿ 4 ಮಂದಿ ವೈದ್ಯರ ಹುದ್ದೆ ಖಾಲಿ ಇರುವುದರಿಂದ ಹೆಚ್ಚಿನ ವೈದ್ಯರನ್ನು ರಾತ್ರಿ ಪಾಳಿಗೆ ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ತಾಲ್ಲೂಕಿನ ಹುಲಿಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಖಾಸಗಿ ಔಷಧಿ ಅಂಗಡಿಗಳಿಂದ ಔಷಧಿ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ ಅಸ್ಪತ್ರೆಯಲ್ಲಿ ಔಷಧಿ ಇಲ್ಲವೇ ಎಂದು ಸದಸ್ಯೆ ವಸುಧಾ ತಿಪ್ಪೇಗೌಡ ಪ್ರಶ್ನಿಸಿದರು.

ಶಾಲಾ ಕೊಠಡಿಗಳು: ತಾಲ್ಲೂಕಿನಲ್ಲಿ 787 ಶಾಲಾ ಕೊಠಡಿಗಳು ಸುಸ್ಥಿತಿಯಲ್ಲಿದ್ದು, 671 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇದರಲ್ಲಿ 212 ಕೊಠಡಿಗಳನ್ನು ತುರ್ತು ದುರಸ್ಥಿ ಮಾಡಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಹೇಳಿದರು.

ಶಿರಾ ತಾಲ್ಲೂಕು ರಾಜ್ಯದ ಗಡಿ ಭಾಗವಾಗಿದೆ, ರಾಜ್ಯದ ಗಡಿಭಾಗದ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಈ ಅನುದಾನವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಲಾಭ ಪಡೆಯಲು ನಾವು ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಡಿ ಭಾಗದಲ್ಲಿರುವ ಶಾಲೆಗಳನ್ನು ಗುರುತಿಸಿ ವಿಶೇಷ ಅನುದಾನದಲ್ಲಿ ಅವುಗಳ ಅಭಿವೃದ್ಧಿಗೆ ಮುಂದಾಗುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಸಲಹೆ ನೀಡಿದರು.

ಹುಲಿಕುಂಟೆ ಹೋಬಳಿಗೆ ನೀರು: ಭದ್ರ ಮೇಲ್ಡಂಡೆ ಯೋಜನೆಯಲ್ಲಿ ಮದಲೂರು ಕೆರೆಗೆ ನೀರು ಹರಿಸಿ ಅದರಿಂದ ಹುಲಿಕುಂಟೆ ಹೋಬಳಿಯ 41 ಕೆರೆಗಳಿಗೆ ನೀರು ಹರಿಸುವಂತೆ ನಿರ್ಣಯ ತೆಗೆದುಕೊಳ್ಳುವಂತೆ ನಿವೃತ್ತ ಎಂಜಿನಿಯರ್ ಜಯರಾಮಯ್ಯ ಸಭೆಯಲ್ಲಿ ಸಲಹೆ ನೀಡಿದರು.‌

ತಾಲ್ಲೂಕಿನ ಎಂಜಿನಿಯರ್‌ಗಳು ನಿವೃತ್ತ ಎಂಜಿನಿಯರ್ ಜಯರಾಮಯ್ಯ ಅವರ ಜತೆ ಸೇರಿ ಈ ಬಗ್ಗೆ ಚರ್ಚೆ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸಿ ಕೊಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮಹ ಮದ್ ಮುಬೀನ್ ಸೂಚಿಸಿದರು.

ತಾಲ್ಲೂಕಿನಲ್ಲಿ ಬರದ ತೀವ್ರತೆ ಹೆಚ್ಚುತ್ತಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬೆಳೆ ಒಣಗುತ್ತಿರುವಂತಹ ಗಂಭೀರ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆ ನಡೆಸದೆ ಬೇಡವಾದ ವಿಷಯಗಳ ಬಗ್ಗೆ ಸಭೆಯಲ್ಲಿ ಹೆಚ್ಚು ಚರ್ಚೆ ಮಾಡಿದ್ದು, ವಿಪರ್ಯಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.