ADVERTISEMENT

ಮುಚ್ಚಲಿವೆ 210 ಮದ್ಯದಂಗಡಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 10:25 IST
Last Updated 24 ಜೂನ್ 2017, 10:25 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮದ್ಯಪಾನ  ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಅಧಿಕಾರಿಗಳ ಸಭೆ ನಡೆಸಿದರು. ಕೆ.ಜಿ.ಶಾಂತಾರಾಮ್, ವಿ.ಪಾತರಾಜು, ಸಿ.ಅನಿತಾ ಇದ್ದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಅಧಿಕಾರಿಗಳ ಸಭೆ ನಡೆಸಿದರು. ಕೆ.ಜಿ.ಶಾಂತಾರಾಮ್, ವಿ.ಪಾತರಾಜು, ಸಿ.ಅನಿತಾ ಇದ್ದರು   

ತುಮಕೂರು: ‘ತುಮಕೂರು ಜಿಲ್ಲೆಯ ಹೆದ್ದಾರಿಗಳಲ್ಲಿರುವ 210 ಮದ್ಯದಂಗಡಿಗಳನ್ನು ಸುಪ್ರೀಂ ಕೋರ್ಟ್ ಸೂಚನೆಯಂತೆ ಶೀಘ್ರದಲ್ಲೇ ಮುಚ್ಚಲು ಆದೇಶಿಸಲಾಗುತ್ತಿದೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಜೆ.ಗಿರಿ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಅವರು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಗಿರಿ ಮಾತನಾಡಿದರು.
‘ಜಿಲ್ಲೆಯಲ್ಲಿ ಒಟ್ಟು 340 ಮದ್ಯದ ಅಂಗಡಿಗಳು ಹೆದ್ದಾರಿ ಅಕ್ಕಪಕ್ಕದಲ್ಲಿವೆ. ಇವುಗಳಲ್ಲಿ 210 ಅಂಗಡಿಗಳು ಹೆದ್ದಾರಿಯಿಂದ 200 ಮೀಟರ್ ಒಳಗೆ ಇವೆ. ಈ ಅಂಗಡಿಗಳ ಪರವಾನಗಿಯನ್ನು ನವೀಕರಿಸದೆ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗುವುದು’ ಎಂದು ತಿಳಿಸಿದರು.

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಮಾತನಾಡಿ, ‘ತಾಂಡಾಗಳಲ್ಲಿ ನಡೆಯುತ್ತಿರುವ ಕಳ್ಳಬಟ್ಟಿ ದಂಧೆಯನ್ನು ಪತ್ತೆ ಹೆಚ್ಚಬೇಕು. ತಾಂಡಾಗಳ ಜನರಿಗೆ  ಮದ್ಯಪಾನ ಮತ್ತು ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ತಿಳಿಸಿದರು.

ADVERTISEMENT

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಆಗಾಗ ಭೇಟಿ ನೀಡಿ ಅಕ್ರಮ ಮದ್ಯ ತಯಾರಿಕೆ, ಮಾರಾಟ ಮತ್ತು ಮಾದಕ ವಸ್ತುಗಳ ಸರಬರಾಜು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ಆರೋಗ್ಯ ಇಲಾಖೆ , ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳೂ ಮಾದಕ ವಸ್ತುಗಳ ದುಷ್ಪರಿಣಾಮ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ಪಾಠ ಮಾಡುವಾಗ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಬೇಕು.

ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ, ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಬೇಕು’ ಎಂದು ಸೂಚಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಜತೆಗೂಡಿ ಜನಜಾಗೃತಿ ಕಾರ್ಯಕ್ರಮ ಮಾಡಬೇಕು. ಮಾದಕ ವಸ್ತುಗಳ ದುಷ್ಪರಿಣಾಮ ಅನುಭವಿಸಿದ ಕುಟುಂಬಗಳ ಮಹಿಳೆಯರ ಸಂಕಷ್ಟದ ಬಗ್ಗೆ ಇತರರಿಗೆ ವಿವರಿಸಿ ಇಂತಹ ಸಮಸ್ಯೆಗೆ ಸಿಲುಕದಂತೆ ಕುಟುಂಬ ರಕ್ಷಣೆ ಮಾಡಿಕೊಳ್ಳಲು ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

ಡಿವೈಎಸ್ಪಿ ನಾಗರಾಜ್ ಮಾತನಾಡಿ, ‘ತುಮಕೂರು ಜಿಲ್ಲೆಯಲ್ಲಿ ಅನಧಿಕೃತವಾಗಿ ಡಾಬಾಗಳಲ್ಲಿ, ಪೆಟ್ಟಿಗೆ ಅಂಗಡಿಗಳಲ್ಲಿ ಇನ್ನಿತರೆ ಜಾಗಗಳಲ್ಲಿ ಮದ್ಯ ಮತ್ತು ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರುಗಳಿವೆ. ನಿರಂತರ ಕಾರ್ಯಾಚರಣೆ ನಡೆಸಿ ನಿಯಂತ್ರಿಸಲಾಗುತ್ತಿದೆ’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಮಾತನಾಡಿ, ‘ತುಮಕೂರು ನಗರ ಪ್ರದೇಶದ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಮಾದಕ ವಸ್ತು ಪೂರೈಕೆ ಚಟುವಟಿಕೆ ಇದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್,  ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಇದ್ದರು.

ಪೋಷಕರ ದುಶ್ಚಟ; ಮಕ್ಕಳ ಶಿಕ್ಷಣಕ್ಕೆ ಅಡ್ಡಿ
‘ಇನ್ನೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಸೇವಿಸಿ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಇಂತಹ ಕುಟುಂಬದಿಂದ ಬರುವ ಶಾಲೆಗೆ ಬರುವ ಮಕ್ಕಳು ತಮ್ಮ ಸಮಸ್ಯೆಗಳನ್ನು ಶಿಕ್ಷಕರ ಮುಂದೆ ಹೇಳಿಕೊಂಡಿದ್ದಾರೆ.

ಪೋಷಕರು ಮದ್ಯವ್ಯಸನಿಗಳಾಗಿದ್ದು ಓದಲು ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡ ಉದಾಹರಣೆಗಳಿವೆ’ ಎಂದು ಮಧುಗಿರಿ ಡಿಡಿಪಿಐ ರಾಜೇಂದ್ರ ಹೇಳಿದರು. ‘ಇಂತಹ ಪೋಷಕರಿಗೆ ಶಿಕ್ಷಕರು ತಿಳಿವಳಿಕೆ ನೀಡಿ ದುಶ್ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ’ ಎಂದು ತಿಳಿಸಿದರು.

ಆದಾಯವೂ ಕಡಿಮೆ, ಮದ್ಯಪಾನ ಮಾಡುವವರೂ ಕಡಿಮೆ
‘ಮದ್ಯಪಾನ ಮಾರಾಟ ನಿಲ್ಲಿಸುವ ಅಧಿಕಾರ ನಮಗಿಲ್ಲ. ಅದರಿಂದ ಆಗುವ ದುಷ್ಪರಿಣಾಮಗಳ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯ ಮಾತ್ರ ಮಾಡುತ್ತದೆ. ಸಮಾಜದಲ್ಲಿ ಪರಿವರ್ತನೆ ಆಗಿದೆ. ಈಚೆಗೆ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆ ಆಗಿದ್ದು, ಅಬಕಾರಿ ಆದಾಯವೂ ಕಡಿಮೆಯಾಗಿದೆ’ ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಅಬಕಾರಿ ಇಲಾಖೆಯಿಂದ ಸಿಎಲ್‌2 ಪರವಾನಗಿ ಪಡೆದವರು ಬೆಳಿಗ್ಗೆ 6ರಿಂದ ರಾತ್ರಿ 10.30, 11.30ರವರೆಗೂ ತೆಗೆಯಬಹುದು. ಆದರೆ, ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಹೇಳಿದರು.

‘ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲ ಜಿಲ್ಲೆಗಳಲ್ಲೂ ಜನಜಾಗೃತಿ ಕೆಲಸ ನಡೆಯುತ್ತಿದೆ. ಕಾರವಾರದಲ್ಲಿಯೇ ಹೆಚ್ಚು ಅಕ್ರಮ ಮದ್ಯ ತಯಾರಿಕೆ, ಸರಬರಾಜು ನಡೆಯುತ್ತಿದೆ ಎಂಬ ದೂರುಗಳಿದ್ದವು. ಪರಿಶೀಲನೆ ನಡೆಸಿದಾಗ ಅಂತಹದ್ದೇನೂ ಕಂಡು ಬಂದಿಲ್ಲ’ ಎಂದು ತಿಳಿಸಿದರು.

ಜುಲೈ 3ರಂದು ಮಾದಕ ವಸ್ತು ವಿರೋಧಿ ಸಪ್ತಾಹ ಸಮಾರೋಪ
ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ವಿ.ಪಾತರಾಜು ಮಾತನಾಡಿ, ‘ಜುಲೈ 3ರಂದು ತುಮಕೂರು ಜಿಲ್ಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಆಚರಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖೆಯವರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಕ್ಷಣಿಕವಾದ ಅಮಲಿಗೆ ಯುವಕರು ಬಲಿಯಾಗುತ್ತಿದ್ದಾರೆ. ಇದರಿಂದ ಯುವಕರು ತಮ್ಮ ಬಾಳನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಮದ್ಯಪಾನ ಸಂಯಮ ಮಂಡಳಿಯು ರಾಜ್ಯಾದಾದ್ಯಂತ ಬೀದಿ ನಾಟಕ, ಚಲನಚಿತ್ರ ಪ್ರದರ್ಶನ ಇನ್ನಿತರೆ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದೆ’ ಎಂದು ತಿಳಿಸಿದರು.

ಅಂಕಿ -ಅಂಶ
340 ಹೆದ್ದಾರಿ ಪಕ್ಕದಲ್ಲಿರುವ ಮದ್ಯದ ಅಂಗಡಿಗಳು

210 ಶೀಘ್ರ ಮುಚ್ಚಲಿರುವ ಅಂಗಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.