ADVERTISEMENT

ರಾಷ್ಟ್ರ ಭಾಷೆ ಇಲ್ಲದಿರುವುದು ದುರಂತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:27 IST
Last Updated 17 ನವೆಂಬರ್ 2017, 6:27 IST

ತುಮಕೂರು: ‘ಪ್ರಾದೇಶಿಕ ಪ್ರಾತಿನಿಧ್ಯ ಉಳಿಸಿಕೊಂಡಿರುವ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಅಧಿಕೃತವಾಗಿ 22 ರಾಷ್ಟ್ರೀಯ ಭಾಷೆಗಳಿದ್ದರೂ ಯಾವುದೂ ರಾಷ್ಟ್ರಭಾಷೆಯ ಮಾನ್ಯತೆಗೆ ಒಳಗಾಗಿದೇ ಇರುವುದು ದುರಂತ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ನಗರದ ಸಿದ್ಧಾರ್ಥ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ 62ನೇ ಕರ್ನಾಟಕ ರಾಜ್ಯೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರಲ್ಲಿ ಭಾಷೆಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಕೆಲವು ಭಾಷೆಗಳು ಮೇಲು- ಕೀಳು ಎನ್ನುವ ತಪ್ಪು ತಿಳಿವಳಿಕೆ ಮೂಡಿಸಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದರೆ ಕೀಳರಿಮೆ ಎನ್ನುವಂತೆ ಆಗಿದೆ.ಕಾನ್ವೆಂಟ್ ಶಾಲೆಗಳಲ್ಲಿ ಬೆಳೆದ ಮಕ್ಕಳಿಗೆ ನೆಲದ ಭಾಷೆಯ ಬಗ್ಗೆ ತಿರಸ್ಕಾರ ಧೋರಣೆ ಬೆಳೆದಿದೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ ಮಾತನಾಡಿ, ‘ಕನ್ನಡದ ಬಗ್ಗೆ ಅಪಾರ ಅಭಿಮಾನ, ಗೌರವ, ಪ್ರೀತಿ ಇರಬೇಕು. ಆದರೆ ದುರಭಿಮಾನ ಬೇಡ. ನಮ್ಮತನವನ್ನು ನಾವು ಉಳಿಸಿ, ಬೆಳೆಸಬೇಕು’ ಎಂದರು.

ADVERTISEMENT

‘ಕನ್ನಡದ ಅಸ್ತಿತ್ವ, ಬೆಳವಣಿಗೆಗೆ ಸಾಕಷ್ಟು ಕವಿಗಳ, ಸಾಹಿತಿಗಳು ದುಡಿದಿದ್ದಾರೆ. ‌8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಇತರ ಬೇರೆ ಭಾಷೆಗೆ ಇಷ್ಟೊಂದು ಪ್ರಶಸ್ತಿಗಳು ಬಂದಿಲ್ಲ. ಇದನ್ನು ನೋಡಿದರೆ ಕನ್ನಡದ ಶ್ರೀಮಂತಿಕೆ ಮತ್ತು ಗಟ್ಟಿತನ ಅರ್ಥವಾಗುತ್ತದೆ’ ಎಂದು ನುಡಿದರು.

ಕುಲಸಚಿವ ಡಾ.ಎಂ.ಝಡ್.ಕುರಿಯನ್, ಡಾ.ಬಿ.ರಾಜೇಶ್ ಕಾಮತ್,  ಪ್ರೊ.ಕೆ.ಬಿ.ಶಿವಕುಮಾರ್, ರಾಜ್ಯೋತ್ಸವ ಕಾರ್ಯಕ್ರಮ ಆಯೋಜಕ ಡಾ.ಡಿ.ರಮೇಶ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ನಿರ್ಮಿಸಿರುವ ಕಿರುಚಿತ್ರದ ಟ್ರೇಲರ್ ಬಿಡಗಡೆಗೊಳಿ

* * 

ತಮಿಳುನಾಡಿನಲ್ಲಿ ತಮಿಳು ಬಿಟ್ಟರೆ ಬೇರೆ ಭಾಷೆ ಬಳಕೆಯಾಗುತ್ತಿಲ್ಲ. ಹಿಂದಿ ದೇಶೆದಲ್ಲೆಡೆ ವ್ಯಾಪಿಸಿದರೂ ತಮಿಳುನಾಡಿನಲ್ಲಿ ಅದು ಸಾಧ್ಯವಾಗುತ್ತಿಲ್ಲ. ನಮ್ಮ  ನಾಡಿನಲ್ಲಿ ಈ ಮನೋಭಾವ ಬೆಳೆಯಬೇಕು.
ಎಸ್.ಜಿ. ಸಿದ್ದರಾಮಯ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.