ADVERTISEMENT

ರೈತರ ಶ್ರಮ ಸಂಸ್ಕೃತಿ ಗೌರವಿಸಿ

ರಾಶಿ ಪೂಜೆ ಮಾಡುವ ಮೂಲಕ ರಾಜ್ಯ ಮಟ್ಟದ ಸುಗ್ಗಿಹುಗ್ಗಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 9:29 IST
Last Updated 17 ಜನವರಿ 2017, 9:29 IST
ರೈತರ ಶ್ರಮ ಸಂಸ್ಕೃತಿ ಗೌರವಿಸಿ
ರೈತರ ಶ್ರಮ ಸಂಸ್ಕೃತಿ ಗೌರವಿಸಿ   

ತಿಪಟೂರು: ಅನ್ನ ನೀಡುವ ರೈತರು ಅನುಭವಿಸುವ ಕಷ್ಟಗಳನ್ನು ಅರಿತು ಸಾಧ್ಯವಾದ ಸಂದರ್ಭಗಳಲ್ಲಿ ನಗರವಾಸಿಗಳು ಅವರಿಗೆ ನೆರವಾಗಬೇಕು ಎಂದು ಸಂಸದ ಎಸ್.ಪಿ. ಮುದ್ದುಹನುಮೇಗೌಡ ತಿಳಿಸಿದರು.

ನಗರದ ಕೆ.ಆರ್. ಬಡಾವಣೆ ಬಯಲು ರಂಗ ಮಂದಿರದಲ್ಲಿ ಭಾನುವಾರ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಸುಗ್ಗಿಹುಗ್ಗಿ ಕಾರ್ಯಕ್ರಮವನ್ನು ರಾಶಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸಂಕ್ರಾಂತಿ ಸಂಭ್ರಮ ತರುವ ರೈತರು ಸುಗ್ಗಿಗೆ ಮುನ್ನ ಅನುಭವಿಸುವ ಕಷ್ಟಗಳು ನೂರಾರು. ಇವರ ನೋವನ್ನು ಅರಿತರೆ ನಾವು ತಿನ್ನುವ ಪ್ರತಿ ಅಗುಳಿನ ಅರ್ಥ ಸಿಗುತ್ತದೆ. ಅವರ ನೋವಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಯುತ್ತದೆ.

ರೈತರು ತಮ್ಮ ಬದುಕಿನ ಸಂಕಷ್ಟ ಮರೆಯಲು ಕಲೆಯ ಮೊರೆ ಹೋಗಿರುವುದೇ ಜಾನಪದ ಕಲೆಗಳು ಹುಟ್ಟು ಮತ್ತು ಉಳವಿಗೆ ಕಾರಣ. ಕೃಷಿ ಮತ್ತು ಸುಗ್ಗಿಗೂ ಜಾನಪದ ಕಲೆಗಳಿಗೂ ಪುರಾತನ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ ಸುಗ್ಗಿಹುಗ್ಗಿ ಎಂಬ ವಿನೂತನ ಕಾರ್ಯಕ್ರಮ ಮೂರನೇ ಬಾರಿಗೆ ತಿಪಟೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ಕಾರ್ಯಕ್ರಮದ ಹಿಂದೆ ಜನಪದ ಕಲೆಗಳನ್ನು ಪ್ರೋತ್ಸಾಹಿಸುವ ಜತೆಗೆ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಉದ್ದೇಶ ಅಡಗಿದೆ ಎಂದು ತಿಳಿಸಿದರು.
ಬರದ ನಡುವೆ ರೈತರು ಸಹಜ ನೋವಿನಲ್ಲಿದ್ದಾರೆ. ಕೊಬ್ಬರಿ ಧಾರಣೆ ಕುಸಿದು ಆಘಾತ ಮೂಡಿಸಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ರೈತರ ನೆರವಿಗೆ ಬಾರದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿದೆ. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಸಂಸತ್ತಿನಲ್ಲಿ ಏಕಾಂಗಿಯಾದರೂ ಹೋರಾಡುವುದು ನಿಶ್ಚಿತ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಈ ಕಲೋತ್ಸವ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕಲೆಯ ಶ್ರೀಮಂತಿಕೆ ಹೆಚ್ಚಬೇಕು ಎಂದರು.

ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಸುಗ್ಗಿಹುಗ್ಗಿ ಕಾರ್ಯಕ್ರಮವನ್ನು ಸರ್ಕಾರದ ಮೇಲೆ ಒತ್ತಡ ತಂದು ಮೊದಲ ಬಾರಿಗೆ ಗ್ರಾಮೀಣ ಭಾಗಕ್ಕೆ ತರಲಾಗಿದೆ. ಎಲ್ಲ ಕೃಷಿ ಸಂಸ್ಕೃತಿಗಳನ್ನು ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸಂಕ್ರಾಂತಿ ಸಡಗರ ಮನೆಗೆ ಸೀಮಿತವಾಗದೆ ಸಾರ್ವಜನಿಕಗೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ವಿಶಿಷ್ಟವಾದ ಈ ಕಾರ್ಯಕ್ರಮ ತಿಪಟೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಮರೆಯಾಗುತ್ತಿರುವ ಕೃಷಿ ಆಚಾರ, ವಿಚಾರಗಳನ್ನು ಹಾಗೂ ಗ್ರಾಮೀಣ ಸೊಗಡು ಸಿರಿಯನ್ನು ಯುವ ಪೀಳಿಗೆಗೆ ಮುಟ್ಟಿಸುವುದು ಕೂಡ ಕಾರ್ಯಕ್ರಮದ ಉದ್ದೇಶ. ಪಾರಂಪರಿಕ ಕೃಷಿ ಪದ್ಧತಿಗಳ ಕಡೆಗೂ ನಾವು ಹೊರಳಿ ನೋಡಬೇಕಿದೆ. ಕೃಷಿ ಜತೆಗೆ ಬೆಸೆದುಕೊಂಡಿರುವ ಕಲಾಸಿರಿಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಉಪಾಧ್ಯಕ್ಷ ಶಂಕರ್, ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ಬಿ. ಶಶಿಧರ್, ಉಪ ವಿಭಾಗಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಗಂಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.