ADVERTISEMENT

ವಿವಾದವೆಲ್ಲ ಅಂತ್ಯವಾಗಿದೆ: ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:16 IST
Last Updated 15 ಸೆಪ್ಟೆಂಬರ್ 2017, 9:16 IST
ಸಚಿವ ಎಂ.ಬಿ.ಪಾಟೀಲ ಅವರು ಸಿದ್ದಗಂಗಾ ಶ್ರೀಗಳಿಗೆ ಹಾರ ಹಾಕಿ ಗೌರವ ಸಲ್ಲಿಸಿದರು
ಸಚಿವ ಎಂ.ಬಿ.ಪಾಟೀಲ ಅವರು ಸಿದ್ದಗಂಗಾ ಶ್ರೀಗಳಿಗೆ ಹಾರ ಹಾಕಿ ಗೌರವ ಸಲ್ಲಿಸಿದರು   

ತುಮಕೂರು: ‘ವಿವಾದವೆಲ್ಲ ಅಂತ್ಯವಾಗಿದೆ. ನಮ್ಮ ಪಾಲಿನ ದೇವರಾದ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೆ. ಪಡೆದಿದ್ದೇನೆ’ ಎಂದು ಗುರುವಾರ ರಾತ್ರಿ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಯಾವ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ. ಬದಲಿಗೆ ‘ವಿವಾದವೆಲ್ಲ ಅಂತ್ಯವಾಗಿದೆ’ ಎಂದಷ್ಟೇ ಹೇಳಿ ತಮ್ಮ ಖಾಸಗಿ ಕಾರಿನಲ್ಲಿ ಹೊರಟರು. ಸಚಿವರ ಜತೆ ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ ಬಿದರಿ ಇದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದಗಂಗಾ ಮಠದ ಅಧ್ಯಕ್ಷರೂ, ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ‘ಕಳೆದ ಎರಡು ಮೂರು ದಿನಗಳಿಂದ ನಡೆದ ಚಟುವಟಿಕೆಗಳಿಂದ ಸಚಿವ ಪಾಟೀಲ ಮಾನಸಿಕವಾಗಿ ನೊಂದಿದ್ದರು. ಹಿರಿಯ ಶ್ರೀಗಳ ದರ್ಶನ ಪಡೆದು ಈಗ ಸಂತೋಷವಾಗಿ ಮರಳಿದ್ದಾರೆ’ ಎಂದರು.

ADVERTISEMENT

ಸಚಿವರು ಸ್ವಾಮೀಜಿ ಅವರ ಕ್ಷಮೆ ಕೇಳಿದರೇ ಎಂಬ ಪ್ರಶ್ನೆಗೆ ‘ಕ್ಷಮೆ ಎನ್ನುವುದೇನು ಇಲ್ಲ. ಸ್ವಾಮೀಜಿ ದರ್ಶನ ಪಡೆದುಕೊಂಡು ಹೋಗುವುದೇ ಅವರಿಗೆ ಮಾನಸಿಕವಾಗಿ ನೆಮ್ಮದಿ ಅಲ್ಲವೇ’ ಎಂದರು.

‘ಎಲ್ಲ ವಿವಾದಗಳು ಬಗೆಹರಿದಿವೆ. ಸಚಿವರೇನು ಅಂತಹ ಗುರುದ್ರೋಹ ಮಾಡಿಲ್ಲ. ಅವರಿಗೆ ಯಾವಾಗಲೂ ಸ್ವಾಮೀಜಿ ಅವರ ಮೇಲೆ ಭಕ್ತಿ ಇದ್ದೇ ಇದೆ’ ಎಂದರು.
’ಸಮಾಜದಲ್ಲಿ ಶಾಂತಿ ನೆಲೆಸಬೇಕು ಎನ್ನುವುದೇ ಎಲ್ಲರ ಉದ್ದೇಶ. ಹೀಗಾಗಿ ಎಲ್ಲರೂ ಕುಳಿತು ಚರ್ಚಿಸಿ ಸಮುದಾಯದ ಬಗ್ಗೆ ಶಾಂತಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.