ADVERTISEMENT

ಶಾಸಕರದ್ದು ಗಿಮಿಕ್ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 7:04 IST
Last Updated 20 ಸೆಪ್ಟೆಂಬರ್ 2017, 7:04 IST

ತುಮಕೂರು: ‘ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಹಾಗೂ ಹೆಬ್ಬಾಕ ಕೆರೆಗಳಿಗೆ ಹೇಮಾವತಿ ನೀರನ್ನು ನಿಗದಿಗೊಳಿಸಿರುವ ಪ್ರಮಾಣದಲ್ಲಿ ಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಶಾಸಕ ರಫೀಕ್ ಅಹಮ್ಮದ್ ಅವರು ಹೇಳಿರುವುದು ರಾಜಕೀಯ ಗಿಮಿಕ್’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಟೀಕಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸತತ ಹೋರಾಟ ನಡೆಸಿದ ಫಲವಾಗಿ ಸರ್ಕಾರ ನೀರು ಹರಿಸಲು ಮುಂದಾಯಿತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನಗರದ ಶಾಸಕರ ನಡುವೆ ಹೊಂದಾಣಿಕೆಯೇ ಇಲ್ಲ. ಈಗ ನೀರು ನಿಲ್ಲುವ ಹಂತಕ್ಕೆ ಬಂದಿದೆ. ಶಾಸಕರು ಎಚ್ಚೆತ್ತಿದ್ದಾರೆ’ ಎಂದು ಕುಟುಕಿದರು.

‘ಶಾಸಕರು, ರಾಜ್ಯ ಸರ್ಕಾರ ಇಲ್ಲವೆ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಇಚ್ಛಾಶಕ್ತಿಯ ಕೊರತೆಯಿಂದ ನಿಗದಿಗೊಳಿಸಿರುವ ನೀರನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈಗ ಪ್ರತಿಭಟನೆ ನಡೆಸುತ್ತೇವೆ ಎಂದು ಡೋಂಗಿ ರಾಜಕಾರಣ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.

ADVERTISEMENT

‘ಕುಡಿಯುವ ನೀರಿನ ಕೆರೆಗಳಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಅಮಾನಿಕೆರೆ, ಮೈದಾಳ, ದೇವರಾಯಪಟ್ಟಣ, ಕ್ಯಾತ್ಸಂದ್ರ, ಮರಳೂರು ಕೆರೆಗಳಿಗೂ ನೀರು ಹರಿಸಬೇಕು. ಎಲ್ಲ ಕೆರೆಗಳು ಭರ್ತಿಯಾದರೆ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ’ ಎಂದರು.

ಬೂತ್ ಮಟ್ಟದಲ್ಲಿ ಸಶಕ್ತೀಕರಣ: ‘ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಬೂತ್‌ಮಟ್ಟ ಗೆದ್ದರೆ ರಾಜ್ಯವನ್ನು ಗೆದ್ದಂತೆ. ಆಯಾ ಕ್ಷೇತ್ರಗಳಲ್ಲಿ ಯಾರು ಹೋರಾಟ ನಡೆಸುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ನಾಯಕರಿಗೆ ತಿಳಿದಿದೆ. ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವ ವಿಚಾರ ಮುಂದಿನದ್ದು. ಈಗ ಪಕ್ಷ ಸಂಘಟನೆಗೆ ಆದ್ಯತೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಗ್ಯಾಸ್ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳಿಗೂ ಅವಕಾಶವಿಲ್ಲ. ಒಂದು ವೇಳೆ ಸೌಲಭ್ಯ ಕೊಡಿಸುವುದಾಗಿ ಹಣ ಪಡೆದರೆ ಅಂತಹವರನ್ನು ನಾಗರಿಕರು ಪೊಲೀಸರಿಗೆ ಒಪ್ಪಿಸಬೇಕು’ ಎಂದು ತಿಳಿಸಿದರು. ನಗರ ಘಟಕದ ಅಧ್ಯಕ್ಷ ರಮೇಶ್, ಮುಖಂಡರಾದ ರವೀಶ್, ವಿಷ್ಣುವರ್ಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.