ADVERTISEMENT

ಸಭೆಯ ಮಾಹಿತಿ ಇಲ್ಲ; ಸದಸ್ಯರ ಗದ್ದಲ

ತುರುವೇಕೆರೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 5:24 IST
Last Updated 25 ಮಾರ್ಚ್ 2017, 5:24 IST

ತುರುವೇಕೆರೆ:  ಸಾಮಾನ್ಯ ಸಭೆ ನಡೆಯುವ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಶುಕ್ರವಾರ ಇಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಸಮಯ ಗದ್ದಲ ಉಂಟಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಭೈರಪ್ಪ ಮಾತನಾಡಿ, ‘ತೋಟಗಾರಿಕಾ ಇಲಾಖೆಯಲ್ಲಿ ಬರ ಪರಿಹಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಇದುವರೆವಿಗೂ ಒಂದು ರೂಪಾಯಿ ಕೂಡ ಪರಿಹಾರ ಸಿಕ್ಕಿಲ್ಲ’ ಎಂದರು.

‘ಹೋಬಳಿ ಮಟ್ಟದ ಅಧಿಕಾರಿಗಳು ಬರದ ತೀವ್ರತೆ ಬಗ್ಗೆ ಸಮೀಕ್ಷೆ ನಡಸಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಬರ ಪರಿಹಾರದ ಮೊತ್ತ ಶೀಘ್ರದಲ್ಲೇ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರೇಖಾ ತಿಳಿಸಿದರು.

ಸದಸ್ಯ ನಂಜೇಗೌಡ ಮಾತನಾಡಿ, ‘ಪಟ್ಟಣದ ಕೆಲ ಹೋಟೆಲ್‌ಗಳಲ್ಲಿ ಕುಡಿಯಲು ಶುದ್ಧ ನೀರು ಕೊಡುತ್ತಿಲ್ಲ. ಇಲ್ಲಿ 3ರಿಂದ 4 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಹೋಟೆಲ್‌ ಮಾಲೀಕರು ತೊಟ್ಟಿ ಮತ್ತು ಸಂಪ್‌ಗಳ ನೀರನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೂಡಲೇ ಹೋಟೆಲ್‌ ಮಾಲೀಕರಿಗೂ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸಬೇಕು’ ಎಂದರು. ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. 
ದಂಡಿನಶಿವರ ಹೋಬಳಿ ಕೇಂದ್ರದ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸದಸ್ಯ ಡಿ.ಸಿ.ಕುಮಾರ್ ಗಮನ ಸೆಳೆದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ವಾಮಿ, ‘ತಾಲ್ಲೂಕಿನಲ್ಲಿ ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳಿವೆ. ಇಲ್ಲಿಯವರೆಗೂ ಯಾರ ವಿರುದ್ಧ ಸೂಕ್ತ ಕ್ರಮ ಜರುಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ಜಿ.ಡಿ.ಗಂಗಾಧರ್, ‘ನಕಲಿ ವೈದ್ಯರ ಬಗ್ಗೆ ಮುಲಾಜಿಲ್ಲದೆ ಎಫ್ಐಆರ್ ದಾಖಲಿಸಲಾಗುವುದು’ ಎಂದು ಭರವಸೆ ನೀಡಿದರು.
ಅಧ್ಯಕ್ಷೆ ನಾಗರತ್ನಾ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಕೆಂಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ತೀರ್ಥಕುಮಾರಿ ರವಿಕುಮಾರ್, ಸುವರ್ಣ ಶ್ರೀನಿವಾಸ್, ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಬೆಸ್ಕಾಂ ಎಇಇ ಮಾರುತಿ, ಜಿಲ್ಲಾ ಪಂಚಾಯಿತಿ ಎಇಇ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರುಕ್ಮಿಣಮ್ಮ, ಅರಣ್ಯ ಇಲಾಖೆಯ ನಿಸಾರ್ ಅಹ್ಮದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT