ADVERTISEMENT

ಸಾಲ ಮನ್ನಾ: ಸರ್ಕಾರಗಳು ಮನಸ್ಸು ಮಾಡಲಿ

ಸಾಲ ತೀರುವಳಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:02 IST
Last Updated 14 ಏಪ್ರಿಲ್ 2017, 5:02 IST
ರೈತ ಕುಟುಂಬಗಳ ವಾರಸುದಾರರಾದ ತುಮಕೂರು ತಾಲ್ಲೂಕು ಅಪ್ಪಯ್ಯನಪಾಳ್ಯದ ರಂಗಮ್ಮ, ಕುಣಿಗಲ್ ತಾಲ್ಲೂಕಿನ ಹಕ್ಕಿಮರಿಪಾಳ್ಯದ ಉತ್ತರಾಜಮ್ಮ, ಗುಬ್ಬಿ ತಾಲ್ಲೂಕು ಸಂಕಾಪುರದ ನಂಜಮ್ಮ,ತುರುವೇಕೆರೆ ತಾಲ್ಲೂಕು ಆನೇಕೆರೆಯ ಶಂಕರಮ್ಮ, ತಿಪಟೂರು ತಾಲ್ಲೂಕಿನ ರಾಮಡಿಹಳ್ಳಿ ಎಲ್‌.ಎಸ್.ಕವಿತಾ,ಚಿಕ್ಕನಾಯಕನಹಳ್ಳಿ ಹೊಸಹಳ್ಳಿಯ ಕೆಂಚಮ್ಮ, ಕೊರಟಗೆರೆ ತಾಲ್ಲೂಕು ಗಿಡದಾಗಲಹಳ್ಳಿಯ ಅಮ್ಮಾಜಕ್ಕ, ಮಧುಗಿರಿ ತಾಲ್ಲೂಕು ತಿಪ್ಪಾಪುರ ತಾಂಡಾದ ಶಿಲ್ಪಾ, ಶಿರಾ ತಾಲ್ಲೂಕು ವೀರಬೊಮ್ಮನಹಳ್ಳಿಯ ಪುಟ್ಟರಂಗಮ್ಮ, ಪಾವಗಡ ತಾಲ್ಲೂಕು ಕೆಂಚಗಾನಹಳ್ಳಿಯ ಯಶೋದಮ್ಮ ಅವರಿಗೆ ಸಾಲ ತೀರುವಳಿ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಕೆ.ಎನ್.ರಾಜಣ್ಣ, ಚಂದ್ರಶೇಖರ್ ಕೊಂಡವಾಡಿ, ಎಸ್.ಪಿ.ಮುದ್ದಹನುಮೇಗೌಡ, ತುಮಕೂರು ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ ಇದ್ದರು
ರೈತ ಕುಟುಂಬಗಳ ವಾರಸುದಾರರಾದ ತುಮಕೂರು ತಾಲ್ಲೂಕು ಅಪ್ಪಯ್ಯನಪಾಳ್ಯದ ರಂಗಮ್ಮ, ಕುಣಿಗಲ್ ತಾಲ್ಲೂಕಿನ ಹಕ್ಕಿಮರಿಪಾಳ್ಯದ ಉತ್ತರಾಜಮ್ಮ, ಗುಬ್ಬಿ ತಾಲ್ಲೂಕು ಸಂಕಾಪುರದ ನಂಜಮ್ಮ,ತುರುವೇಕೆರೆ ತಾಲ್ಲೂಕು ಆನೇಕೆರೆಯ ಶಂಕರಮ್ಮ, ತಿಪಟೂರು ತಾಲ್ಲೂಕಿನ ರಾಮಡಿಹಳ್ಳಿ ಎಲ್‌.ಎಸ್.ಕವಿತಾ,ಚಿಕ್ಕನಾಯಕನಹಳ್ಳಿ ಹೊಸಹಳ್ಳಿಯ ಕೆಂಚಮ್ಮ, ಕೊರಟಗೆರೆ ತಾಲ್ಲೂಕು ಗಿಡದಾಗಲಹಳ್ಳಿಯ ಅಮ್ಮಾಜಕ್ಕ, ಮಧುಗಿರಿ ತಾಲ್ಲೂಕು ತಿಪ್ಪಾಪುರ ತಾಂಡಾದ ಶಿಲ್ಪಾ, ಶಿರಾ ತಾಲ್ಲೂಕು ವೀರಬೊಮ್ಮನಹಳ್ಳಿಯ ಪುಟ್ಟರಂಗಮ್ಮ, ಪಾವಗಡ ತಾಲ್ಲೂಕು ಕೆಂಚಗಾನಹಳ್ಳಿಯ ಯಶೋದಮ್ಮ ಅವರಿಗೆ ಸಾಲ ತೀರುವಳಿ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಕೆ.ಎನ್.ರಾಜಣ್ಣ, ಚಂದ್ರಶೇಖರ್ ಕೊಂಡವಾಡಿ, ಎಸ್.ಪಿ.ಮುದ್ದಹನುಮೇಗೌಡ, ತುಮಕೂರು ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ ಇದ್ದರು   

ತುಮಕೂರು: ‘ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸ್ಸು ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಗುರುವಾರ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ವತಿಯಿಂದ ಗುರುವಾರ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಲ ತೀರುವಳಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

2016ರ ಏಪ್ರಿಲ್‌ನಿಂದ 2017ರ ಮಾರ್ಚ್ 31ರ ಅವಧಿಯಲ್ಲಿ ಸಾಲ ಪಡೆದು ಮೃತಪಟ್ಟ  ರೈತರ ಕುಟುಂಬಗಳ ವಾರಸುದಾರರ ಪೈಕಿ ಹತ್ತು ಮಂದಿಗೆ  ಸಾಂಕೇತಿಕವಾಗಿ ತೀರುವಳಿ ಪ್ರಮಾಣ ಪತ್ರ ವಿತರಣೆ ಮಾಡಿದರು.

‘ಮೃತಪಟ್ಟ ರೈತರ ಒಂದು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿದೆ. ಬ್ಯಾಂಕಿನಲ್ಲಿ ರೈತರು ಸಾಲ ಪಡೆಯುವುದು ಕೃಷಿ ಚಟುವಟಿಕೆಗಾಗಿಯೇ ಹೊರತು ಕುಟುಂಬ ನಿರ್ವಹಣೆಗಾಗಿ ಅಲ್ಲ. ಮಳೆ ಅಭಾವದಿಂದ ರೈತ ಸಂಕಷ್ಟಕ್ಕೀಡಾಗುತ್ತಾನೆ. ಆತನ ಕುಟುಂಬದ ಮೇಲೆ ಸಾಲದ ಹೊರೆ ಬೀಳುತ್ತದೆ. ಈ ಹೊರೆಯನ್ನು ಬ್ಯಾಂಕುಗಳೂ ಹೊತ್ತುಕೊಳ್ಳಬೇಕು ಎಂದು ತೀರ್ಮಾನಿಸಿ ಸಾಲ ಮನ್ನಾ ಮಾಡುವ ನಿರ್ಧಾರ ಮಾಡಿದೆವು’ ಎಂದು ವಿವರಿಸಿದರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಶಾಸಕ ರಾಜಣ್ಣ, ‘ಸಾಲ ಪಡೆದು ಮೃತಪಟ್ಟ ಒಟ್ಟು 2128 ರೈತರ ₹6.5 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸಂಬಂಧಪಟ್ಟ ರೈತರ ವಾರಸುದಾರರ ಮೇಲಿನ ಸಾಲದ ಹೊರೆ ತಗ್ಗಿದೆ. ಇನ್ನಾದರೂ ಅವೆಲ್ಲರೂ  ನೆಮ್ಮದಿಯ ಜೀವನ ನಡೆಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಈ ವರ್ಷ ಮಳೆ ಬಿದ್ದ ತಕ್ಷಣ ಪಹಣಿ ಹೊಂದಿರುವ ರೈತರಿಗೆ ತಲಾ ₹ 25 ಸಾವಿರ ಸಾಲ ನೀಡಲಾಗುವುದು. ತಪ್ಪದೇ ಸಾಲ ಪಡೆದು ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಅದೇ ರೀತಿ ರೈತರು ದೊಡ್ಡ ಬ್ಯಾಂಕಿನಲ್ಲಿ ಠೇವಣಿ ಇಡುವ ಬದಲು ನಮ್ಮ ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಇದರಿಂದ ರೈತರಿಗೇ ಅನುಕೂಲ ಆಗುತ್ತದೆ. ಡಿಸಿಸಿ ಬ್ಯಾಂಕಿನಲ್ಲಿರುವ ಹಣ ಸರ್ಕಾರದ್ದು ಅಲ್ಲ. ಅದೆಲ್ಲವೂ ಸಹಕಾರಿಗಳದ್ದೇ ಆಗಿದೆ. ಸಹಕಾರಿಗಳ ಹಣ ಸಹಕಾರಿಗಳಿಗೆ ಸಹಾಯ ಆಗುತ್ತದೆ’ ಎಂದು ತಿಳಿಸಿದರು.

‘ರೈತರ ಸಾಲ ಮನ್ನಾ ಮಾಡಲು ಈಗಾಗಲೇ ಮುಖ್ಯಮಂತ್ರಿಯವರಿಗೆ ಒತ್ತಡ ಹಾಕಿದ್ದೇವೆ. ಮುಂದಿನ ವರ್ಷ ಬಜೆಟ್‌ನಲ್ಲಿ ಕನಿಷ್ಠ ₹ 25 ಸಾವಿರ ಸಾಲ ಮನ್ನಾ ಮಾಡುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಅಧಿಕಾರ ಇದ್ದರೆ ಸಾಲದು. ಹೃದಯ ಶ್ರೀಮಂತಿಕೆಯೂ ಬೇಕು. ರಾಜಣ್ಣನವರಿಗೆ ಅಂತಹ ಹೃದಯ ಶ್ರೀಮಂತಿಕೆ ಇದೆ. ಹೀಗಾಗಿ, ರೈತ ಪರಕಾಳಜಿ ವಹಿಸಿ ಸಾಲ ಮನ್ನಾ ಮಾಡಿದ್ದಾರೆ’ ಎಂದು ಹೇಳಿದರು.

‘ಡಿಸಿಸಿ ಬ್ಯಾಂಕಿನ ಈ ಕಾರ್ಯ ದೇಶಕ್ಕೆ ಮಾದರಿಯಾದುದು. ಈ ಬ್ಯಾಂಕ್ ರೈತರ ಕಷ್ಟ ಅರ್ಥ ಮಾಡಿಕೊಂಡು ಮೃತಪಟ್ಟ ರೈತರ 6 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಇದು ಯಾಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಅಶಿಸ್ತಿಗೆ ಕಾರಣವಾಗುತ್ತದೆ ಎಂದು ನಬಾರ್ಡ್, ಎಸ್‌ಬಿಐ ಮತ್ತು ರಿಸರ್ವ್ ಬ್ಯಾಂಕ್ ಅಧ್ಯಕ್ಷರು ಹೇಳುತ್ತಿದ್ದಾರೆ. ಆದರೆ, ಬೃಹತ್ ಉದ್ಯಮಿಗಳ ಸಾವಿರಾರು ಕೋಟಿ ಸಾಲವನ್ನು ಮರುಪಾವತಿಯಾಗದ ಸಾಲ ಎಂದು ಪರಿಗಣಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಕೇಂದ್ರ ಸರ್ಕಾರ ಚಕಾರ ಎತ್ತಿಲ್ಲ’ ಎಂದು ಟೀಕಿಸಿದರು.

ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ತುಮುಲ್‌) ಅಧ್ಯಕ್ಷ ಚಂದ್ರಶೇಖರ್ ಕೊಂಡವಾಡಿ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಜನಮನ ಗೆದ್ದಿರುವ ರಾಜಣ್ಣ ಅವರಿಗೆ ಸಹಕಾರ ಸಚಿವ ಸ್ಥಾನ ನೀಡಬೇಕು’ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ನಿಂಗಪ್ಪ ಮಾತನಾಡಿ, ‘ರಾಜಣ್ಣ ಅವರಿಗೆ ಈಗ 66 ವರ್ಷದ ಸಂಭ್ರಮ. ಹೀಗೆಯೇ ಜನಾನುರಾಗಿಯಾಗಿ ರೈತ ಪರ ಕಾಳಜಿ ಮೆರೆಯಲಿ’ ಎಂದು ನುಡಿದರು.

ಅಭಿಮಾನಿಗಳಿಂದ ಜನ್ಮದಿನೋತ್ಸವ:  ರಾಜಣ್ಣ ಅವರ 66ನೇ ಜನ್ಮದಿನೋತ್ಸವದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಸಹಕಾರಿಗಳು ಬೃಹತ್ ಹೂವಿನ ಹಾರ ಹಾಕಿದರು. ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.
ಶಾಂತಲಾ ರಾಜಣ್ಣ, ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಇದ್ದರು.

ದೇವೇಗೌಡರ ಹೋರಾಟಕ್ಕೆ ತಲೆಬಾಗಬೇಕು
‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಬಗ್ಗೆ ಅವರಿಗೆ ಕಾಳಜಿ ಇರಬಹುದು. ಆದರೆ, ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ’ ಎಂದು ರಾಜಣ್ಣ ಹೇಳಿದರು.

‘ಕಾವೇರಿ ನದಿ ನೀರಿಗೆ ಸಂಬಂಧಪಟ್ಟಂತೆ ರಾಜ್ಯದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ದೇವೇಗೌಡರ ಹೋರಾಟಕ್ಕೆ ತಲೆಬಾಗಲೇಬೇಕು’ ಎಂದು ಹೇಳಿದರು.

ಶಾಸಕನಾಗಿದ್ದು ಸಹಕಾರಿಗಳ ಆಶೀರ್ವಾದದಿಂದ
‘ವಿಧಾನ ಸಭೆ ಪ್ರವೇಶಿಸುವುದು ಹಣ ಮತ್ತು ಜಾತಿ ಬಲ ಇದ್ದವರಿಗೆ ಮಾತ್ರ ಸಾಧ್ಯ. ಆದರೆ, ನಾನು ಸಹಕಾರಿಗಳ ಆಶೀರ್ವಾದ ಬಲದಿಂದ ಪ್ರವೇಶ ಮಾಡಿದೆ. ಸಹಕಾರ ಆಂದೋಲನದಲ್ಲಿ ಕೆಲಸ ಮಾಡುವುದೇ ನನಗೆ ಹೆಚ್ಚಿನ ಸಂತೋಷ ಕೊಡುತ್ತದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ  ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.