ADVERTISEMENT

ಸಾಹಿತ್ಯ ಜಾತ್ರೆಗೆ ಸಿಂಗಾರಗೊಂಡಿರುವ ನಗರ

ಇಂದು ಶಿರಾ ತಾಲ್ಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 4:48 IST
Last Updated 15 ಏಪ್ರಿಲ್ 2017, 4:48 IST

ಶಿರಾ: ನಗರದ ವಿವೇಕಾನಂದ ಕ್ರೀಡಾಂಗಣ ಶನಿವಾರ (ಏ.15) ನಡೆಯಲಿರುವ ತಾಲ್ಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಸುಮಾರು 3 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ವಿಶಾಲವಾದ ಪೆಂಡಾಲ್, ಟಿ.ತಾರೇಗೌಡ ವೇದಿಕೆ ಹಾಗೂ ಎಸ್.ಕೆ.ದಾಸಪ್ಪ ಮಹಾದ್ವಾರ ನಿರ್ಮಿಸಲಾಗಿದೆ.

ಸಮ್ಮೇಳನಾಧ್ಯಕ್ಷ ಪ್ರೊ.ಮಾಲಿ ಮದ್ದಣ್ಣ ಅವರನ್ನು ಗವಿ ಅಂಜನೇಯಸ್ವಾಮಿ ದೇವಸ್ಥಾನದಿಂದ ಕಲಾ ತಂಡಗಳೊಂದಿಗೆ ಪ್ರಧಾನ ವೇದಿಕೆಗೆ ಕರೆ ತರಲಾಗುತ್ತದೆ. ಬೆಳಿಗ್ಗೆ 7.30ಕ್ಕೆ ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ನಂದೀಶ್ವರ, ತಹಶೀಲ್ದಾರ್ ಹೊನ್ನಶ್ಯಾಮೇಗೌಡ ಧ್ವಜಾರೋಹಣ ನೆರವೇರಿಸುವರು.

ಸಚಿವ ಟಿ.ಬಿ.ಜಯಚಂದ್ರ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ  ಎಲ್.ಹನುಮಂತಯ್ಯ ಉದ್ಘಾಟಿಸುವರು. ಪ್ರೊ.ಮಾಲಿ ಮದ್ದಣ್ಣ ಅಭಿನಂದನಾ ಗ್ರಂಥವನ್ನು ಸಂಸದ ಬಿ.ಎನ್.ಚಂದ್ರಪ್ಪ ಬಿಡುಗಡೆ ಮಾಡುವರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಪುಸ್ತಕ ಮಳಿಗೆ ಉದ್ಘಾಟಿಸುವರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಎಸ್.ಕೆ.ದಾಸಪ್ಪ ಮಹಾದ್ವಾರವನ್ನು, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್ ಟಿ.ತಾರೇಗೌಡ ಪ್ರಧಾನ ವೇದಿಕೆ ಉದ್ಘಾಟಿಸುವವರು. ರಾಮನಗರ ಜಿಲ್ಲಾಧಿಕಾರಿ ಡಾ.ಮಮತಾ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ಗೋಷ್ಠಿಗಳು: ಸಮ್ಮೇಳನದಲ್ಲಿ ಮೂರು ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 1ಕ್ಕೆ ‘ಶಿರಾ ಸೀಮೆ ಸಾಂಸ್ಕೃತಿಕ ಪರಂಪರೆ’ ಕುರಿತು ನಡೆಯುವ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ ವಹಿಸುವರು. ತಾಲ್ಲೂಕಿನ ಭಾಷಾ ವೈವಿಧ್ಯಗಳ ಬಗ್ಗೆ ಸಾಹಿತಿ ಬಿ.ವಿ.ಭಾಸ್ಕರ್, ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ ಕುಮಾರ್, ಗ್ರಾಮ ದೇವತೆಗಳ ಬಗ್ಗೆ ತಮ್ಮ ಪ್ರಾಧ್ಯಾಪಕ ಡಾ.ಕೆ.ತಿಮ್ಮಯ್ಯ ಮಾತನಾಡುವರು.

ಮಧ್ಯಾಹ್ನ 2ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಮರ್ಶಕ ಕೆ.ಪಿ.ನಟರಾಜು ವಹಿಸುವರು. 24 ಕವಿಗಳು ಕವನ ವಾಚಿಸುವರು.
3.30ಕ್ಕೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆಯಲಿದೆ. ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ ಅಧ್ಯಕ್ಷತೆ ವಹಿಸುವರು.ಪ್ರೊ. ಕಟಾವೀರನಹಳ್ಳಿ ನಾಗರಾಜು, ಪ್ರೊ.ಹೊನ್ನೇಶ್, ಬಿ.ಗೋವಿಂದಪ್ಪ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಭಾಗವಹಿಸುವರು.

ಸಂಜೆ 5ಕ್ಕೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಹಿಸುವರು. ಜನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಸಮಾರೋಪ ಭಾಷಣ ಮಾಡುವರು. ಮುಖಂಡರಾದ ಬಿ.ಸತ್ಯನಾರಾಯಣ, ಸಿ.ಪಿ.ಮೂಡಲಗಿರಿಯಪ್ಪ, ವಕೀಲ ಎಸ್.ಎಸ್.ಶೇಷಾದ್ರಿ, ಎಸ್.ನಾಗಣ್ಣ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.