ADVERTISEMENT

ಸಿ.ಎಂ.ಗೆ ಮುತ್ತಿಗೆ ಹಾಕಲು ಯತ್ನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 9:21 IST
Last Updated 20 ಆಗಸ್ಟ್ 2017, 9:21 IST
ಮುಖ್ಯಮಂತ್ರಿಯವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು
ಮುಖ್ಯಮಂತ್ರಿಯವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು   

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಜಮಾವಣೆಗೊಂಡ ರೈತ ಮೋರ್ಚಾದ ಕಾರ್ಯಕರ್ತರು ಸಮಾಲೋಚನೆ ಮಾಡುತ್ತಿದ್ದಾಗ ನೂರಾರು ಪೋಲಿಸರು ಕಾರ್ಯಾಲಯಕ್ಕೆ ಬಂದು ದಿಗ್ಬಂಧನ ಮಾಡಿದರು.

ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬಿಡದಿದ್ದಾಗ ಬಿಜೆಪಿ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನಂತರ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸುತ್ತಿದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಮುಖಂಡ ಶಿವಪ್ರಸಾದ್‌ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಜನಪರ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.
‘ಅಕ್ರಮ ಆಸ್ತಿ ಹೊಂದಿರುವ ಸಂಪುಟ ಸಚಿವ ಡಿ.ಕೆ.ಶಿವಕುಮಾರ್‌, ರಮೇಶ್‌ ಜಾರಕಿಹೊಳಿ ಹಾಗೂ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು. ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡುತ್ತಿದ್ದ ನಮ್ಮನ್ನು ಬಂಧಿಸಿ, ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಹೇಮಾವತಿ ನೀರನ್ನು ತ್ವರಿತವಾಗಿ ಎಲ್ಲ ಕೆರೆಗಳಿಗೆ ತುಂಬಿಸಬೇಕು. ಪಾವಗಡ ತಾಲ್ಲೂಕಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತಾಯಿಸಿ ಸಂಘ ಸಂಸ್ಥೆಗಳು ಕಳೆದ 12 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡದೇ ಅತ್ಯಂತ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ತಕ್ಷಣ ಪಾವಗಡಕ್ಕೆ ಭೇಟಿ ನೀಡಬೇಕು ಎಂದರು.

ಬಿಜೆಪಿ ರೈತ ಮೋರ್ಚಾದ ಮುಖಂಡರಾದ ಬ್ಯಾಟರಂಗೇಗೌಡ, ರಾಜಶೇಖರ್, ಡಿ.ಆರ್.ಬಸವರಾಜು, ಸಂದೀಪ್‌ ಕೆ.ಗೌಡ, ಎಂ.ಎಸ್.ಗುರುಪ್ರಸಾದ್, ಸರೋಜಗೌಡ, ಅನಸೂಯಮ್ಮ, ವೀಣಾ, ಜ್ಯೋತಿ ತಿಪ್ಪೇಸ್ವಾಮಿ, ಆದ್ಯ, ಶೈಲಶ್ರೀ, ಜಯಮ್ಮ, ವೇದಮೂತರ್ಿ, ತರಕಾರಿ ಮಹೇಶ್, ಆರ್.ಕೆ.ಶ್ರೀನಿವಾಸ್, ವರದರಾಜು, ಬಂಬೂಮೋಹನ್, ಚಂದ್ರಶೇಖರ್, ಶಬ್ಬೀರ್, ವಿಶ್ವನಾಥ್, ಸತೀಶ್, ಕೃಷ್ಣಪ್ಪ ಅವರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.