ADVERTISEMENT

ಸುಳ್ಳು ಸತ್ಯವಾಗಲು ಬಿಡಲಾರೆ: ಮಾಧುಸ್ವಾಮಿ

ಮುಂದುವರೆದ ಹಾಲಿ-ಮಾಜಿ ಶಾಸಕರ ಕೆಸರೆರೆಚಾಟ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:51 IST
Last Updated 18 ಏಪ್ರಿಲ್ 2017, 5:51 IST
ಚಿಕ್ಕನಾಯಕನಹಳ್ಳಿ: ‘ಕೆಸರೆರೆಚಾಟ ನನಗೆ ಇಷ್ಟ ಇಲ್ಲ. ಸುಮ್ಮನಿದ್ದರೆ ಜನ ಸುಳ್ಳನ್ನೇ ಸತ್ಯ ಎಂದುಕೊಂಡು ಬಿಡುತ್ತಾರೆ. ಆದ್ದರಿಂದ ಬಾಯಿ ಬಿಡುತ್ತಿದ್ದೇನೆ’  ಎಂದು ಸೋಮವಾರ ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸುರೇಶ್‌ಬಾಬು ವಿರುದ್ಧ ವಾಗ್ದಾಳಿ ನಡೆಸಿದರು. 
 
‘ಕೋಟ್ಯಂತರ ಮೊತ್ತದ ಕಾಮಗಾರಿಗಳ ಗುತ್ತಿಗೆಯನ್ನು ನಿರ್ಮಿತ ಕೇಂದ್ರ ಹಾಗೂ ಭೂ ಸೇನಾ ನಿಗಮದ ಮೂಲಕ ಟೆಂಡರ್ ಇಲ್ಲದೆ ತಮ್ಮ ಪಟಾಲಂಗೆ ಶಾಸಕರು ಕೊಡಿಸಿದ್ದಾರೆ.  ಇದು ಭ್ರಷ್ಟಾಚಾರ ಅಲ್ಲದೆ ಮತ್ತೇನು’ ಎಂದು  ಪ್ರಶ್ನಿಸಿದರು.
 
‘ಶಾಸಕರ ಸಂಬಂಧಿಗಳು, ಹಿಂಬಾಲಕರು ಪಟ್ಟಣವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಪೈಪ್‌ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ತಮಗೆ ಇಷ್ಟ ಬಂದವರಿಗೆ ಸರ್ಕಾರದ ಅನುದಾನ ಕೊಟ್ಟಿದ್ದಾರೆ’ ಎಂದು  ಆರೋಪಿಸಿದರು. 
 
‘ಪಟ್ಟಣದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಪ್ರತಿ ಗ್ರಾಮ ಪಂಚಾಯಿತಿಯಿಂದ ₹5 ಸಾವಿರ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರಿಂದ ₹ 10 ಲಕ್ಷ,  ಜಿಲ್ಲಾ ಪಂಚಾಯಿತಿ ಎಂಜಿನಿಯರುಗಳಿಗೆ ₹ 1 ಲಕ್ಷ ಬೇಡಿಕೆ ಇಟ್ಟಿದ್ದ ಮಾಹಿತಿ ದೊರೆತಿದೆ’ ಎಂದರು.
 
‘ ಸರ್ಕಾರಿ ಕಚೇರಿಗಳನ್ನು ತಾಲ್ಲೂಕು ಕಚೇರಿ ಕಟ್ಟಡದಿಂದ ತೆರವುಗೊಳಿಸಿ ಖಾಸಗಿ ಕಟ್ಟಡಗಳಿಗೆ ವರ್ಗಾಯಿಸಿದ್ದಾರೆ’ ಎಂದು ದೂರಿದರು.
 
 ‘ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಅಬಕಾರಿ ಇಲಾಖೆಗಳ ಕಚೇರಿ ಶಾಸಕರ ಹಿಂಬಾಲಕರಿಗೆ ಸೇರಿದ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದು ಭ್ರಷ್ಟಾಚಾರ ಅಲ್ಲವೇ’ ಎಂದು ಕುಟುಕಿದರು.
 
‘ಹೇಮಾವತಿ ನೀರು ತಾಲ್ಲೂಕಿಗೆ ತರುವ ಸಂಬಂಧ ಚೊಂಬಿನಲ್ಲಿ ನೀರು ತರಬೇಕು ಎಂದು ನಾನು ಹೇಳಿಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
 
ತಾಲ್ಲೂಕು ಕೃಷ್ಣ ಹಾಗೂ ಕಾವೇರಿ ಕೊಳ್ಳದಲ್ಲಿ ಹಂಚಿ ಹೋಗಿರುವುದರಿಂದ ಕಾವೇರಿ ನ್ಯಾಯಾಧಿಕರಣದ ಪ್ರಕಾರ ತಾಲ್ಲೂಕಿನ ಎಲ್ಲಾ ಭಾಗಗಳಿಗೂ ಹೇಮಾವತಿ ಹರಿಸುವುದು ಅಸಾಧ್ಯ ಎಂದಿದ್ದೆ.
 
ಈಶ್ವರಪ್ಪ ಅವರು ಉಪ ಮುಖ್ಯ ಮಂತ್ರಿಯಾಗಿದ್ದಾಗ ಪತ್ರ ಬರೆದು ಸರ್ವೆ ನಡೆಸಲು ₹3 ಕೋಟಿ ಅನುದಾನ ಹಾಕಿಸಿಕೊಂಡು ಬಂದಿದ್ದೆ. ಇದರ  ಹೊರತಾಗಿ ಹೇಮಾವತಿ ವಿಚಾರದಲ್ಲಿ ನನ್ನ ಶ್ರಮ ಇಲ್ಲ ಎಂಬುದನ್ನು ಒಪ್ಪಿ ಕೊಳ್ಳುತ್ತೇನೆ’ ಎಂದರು. 
 
‘ಹೇಮಾವತಿ ನಾಲೆ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟಿರುವ ಗ್ಯಾರೇಹಳ್ಳಿ ರೈತರಿಗೆ 8 ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ. ಕಾಮಗಾರಿಗೆ ನಾನು ಅಡ್ಡಿ ಪಡಿಸುತ್ತಿದ್ದೇನೆ ಎಂದು ಹೇಳುತ್ತಿರುವ ಶಾಸಕರು ಜಮೀನು ಬಿಟ್ಟು ಕೊಟ್ಟಿರುವ ರೈತರಿಗೆ ಪರಿಹಾರ ಕೊಡಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.