ADVERTISEMENT

ಸ್ಪರ್ಧೆ ಇದ್ದರೂ ಅವಕಾಶಗಳ ಕೊರತೆ ಇಲ್ಲ

ಎಚ್ಎಂಎಸ್ ಕಾಲೇಜಿನಲ್ಲಿ ಉದ್ಯೋಗ ಮೇಳ ಉದ್ಘಾಟಿಸಿದ ಸಚಿವ ಟಿ.ಬಿ.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:06 IST
Last Updated 22 ಮೇ 2017, 5:06 IST
ಉದ್ಯೋಗ ಮೇಳ ಉದ್ಘಾಟಿಸಿ  ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿದರು. ಶಾಸಕ ರಫೀಕ್ ಅಹಮ್ಮದ್, ಎಚ್ಎಂಎಸ್ ತಾಂತ್ರಿಕ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಷಫಿ ಅಹಮ್ಮದ್ ಇದ್ದರು.
ಉದ್ಯೋಗ ಮೇಳ ಉದ್ಘಾಟಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿದರು. ಶಾಸಕ ರಫೀಕ್ ಅಹಮ್ಮದ್, ಎಚ್ಎಂಎಸ್ ತಾಂತ್ರಿಕ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಷಫಿ ಅಹಮ್ಮದ್ ಇದ್ದರು.   

ತುಮಕೂರು: ‘ಜಾಗತಿಕ ಮಟ್ಟದಲ್ಲಿ ಎಷ್ಟೇ ಸ್ಪರ್ಧೆ ಇದ್ದರೂ ಕುಶಲತೆ ಮತ್ತು ಪ್ರತಿಭಾನ್ವಿತರಿಗೆ ಅವಕಾಶಗಳು ಇದ್ದೇ ಇವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಭಾನುವಾರ ಎಚ್ಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

‘ಜಗತ್ತಿನಲ್ಲಿಯೇ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಹೆಚ್ಚು ಹೊಂದಿರುವ ದೇಶ ಭಾರತವಾಗಿದೆ. ಹೀಗಾಗಿ, ಅಮೆರಿಕ, ಚೀನಾ ಸೇರಿದಂತೆ ಎಲ್ಲ ರಾಷ್ಟ್ರಗಳು ಈಗ ಭಾರತದತ್ತ ಮುಖ ಮಾಡಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೊರಗುತ್ತಿಗೆ (ಔಟ್ ಸೋರ್ಸಿಂಗ್) ರದ್ದುಪಡಿಸಿದ್ದರೂ ಸಹ ಭಾರತದ ಪ್ರತಿಭೆಗಳನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಅಭಿಪ್ರಾಯಪಟ್ಟರು.

‘ತಾಂತ್ರಿಕ ಶಿಕ್ಷಣ ಪಡೆದವರು ಬರೀ ಉದ್ಯೋಗಿಗಳಾಗಬೇಕೆಂದಿಲ್ಲ. ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗವಕಾಶಗಳು ಕ್ರಮೇಣ ಕಡಿಮೆಯಾಗಿವೆ. ಖಾಸಗಿ ಸಂಸ್ಥೆಗಳಲ್ಲಿಯೇ ಉದ್ಯೋವಕಾಶಗಳಿವೆ’ ಎಂದರು.

‘ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಬಳಿಕ ಉದ್ಯಮಶೀಲತೆ ಬೆಳೆಸಿಕೊಂಡು ಉದ್ಯಮಿಗಳಾಗಬಹುದು.  ಕೇಂದ್ರ ಸರ್ಕಾರದ ಸ್ಟಾರ್ಟ್‌ ಅಪ್‌ ಯೋಜನೆ ಪ್ರೋತ್ಸದಾಹದಾಯಕವಾಗಿದೆ’ ಎಂದು ತಿಳಿಸಿದರು.

ಅತಿಥಿ ಕೇಶವ್ ಮಾತನಾಡಿ, ‘ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗ ಸಿಗುತ್ತದೊ ಇಲ್ಲವೊ ಎಂಬ ಆಂತಕ ಬೇಡ. ಕಡಿಮೆ ಅಂಕ ಬಂದರೂ ಭಯಪಡಬಾರದು. ಆತ್ಮಸ್ಥೈರ್ಯದಿಂದ ಇರಬೇಕು. ನಿಮ್ಮಲ್ಲಿರುವ ತಾಂತ್ರಿಕ ಕುಶಲತೆ ಒರೆಗೆ ಹಚ್ಚಿದರೆ ಅವಕಾಶಗಳು ಲಭ್ಯವಾಗುತ್ತವೆ’ ಎಂದರು.

‘ಮಾಹಿತಿ ಮತ್ತು ತಂತ್ರಜ್ಞಾನ  ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಆತಂಕ ಬೇಡ. ಸೇವಾಧಾರಿತ ಕಂಪೆನಿಗಳಲ್ಲಿ ಅವಕಾಶ ಅಲ್ಪ ಮಟ್ಟಿಗೆ ಕಡಿಮೆ ಆಗಿರಬಹುದು. ಆದರೆ, ಉತ್ಪಾದನೆ ಆಧಾರಿತ ಕಂಪೆನಿಗಳಲ್ಲಿ ಅವಕಾಶಗಳು ವ್ಯಾಪಕವಾಗಿವೆ’ ಎಂದು ತಿಳಿಸಿದರು.

ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ‘ತಾಂತ್ರಿಕ ಯುಗದಲ್ಲಿ ಭಾರತೀಯ ಪ್ರತಿಭೆಗಳಿಗೆ ಅಮೆರಿಕ ದೇಶವೇ ಹೆದರಿದೆ. ನಲವತ್ತು ವರ್ಷಗಳ ಹಿಂದೆ ಕೆಲವೇ ಎಂಜಿನಿಯರಿಂಗ್ ಕಾಲೇಜುಗಳಿದ್ದವು. ಶಿಕ್ಷಣ ಪಡೆದವರಿಗೆ ಬೇಗ ಉದ್ಯೋಗ ಸಿಗುತ್ತಿತ್ತು. ಈಗ ಅನೇಕ ಕಾಲೇಜುಗಳಿವೆ. ಆದರೂ ಉದ್ಯೋಗವಕಾಶ ಕಡಿಮೆ ಏನಿಲ್ಲ. ಆದರೆ, ಅವುಗಳನ್ನು ಚಾಕಚಕ್ಯತೆಯಿಂದ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಕಂಪೆನಿಗಳು ಬಂದಿವೆ.  ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ’ ಎಂದರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ  ಷಫಿ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಜೊಯಲ್ ಹೇಮಂತ್, ಉದ್ಯೋಗ ಮೇಳ ಸಂಯೋಜಕ ಪ್ರೊ. ಶಿವಮೂರ್ತಿ, ಡಾ.ಶಿವಶರಣಪ್ಪ ಪಾಟೀಲ್ ಇದ್ದರು.

*
ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರವು ಕೌಶಲ ಅಭಿವೃದ್ಧಿ ನಿಗಮದಿಂದ ಬೃಹತ್ ಉದ್ಯೋಗ ಮೇಳ ತುಮಕೂರಿನಲ್ಲಿ ನಡೆಸಲಿದೆ.
-ರಫೀಕ್ ಅಹಮ್ಮದ್, ಶಾಸಕ, ತುಮಕೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT