ADVERTISEMENT

ಸ್ವಚ್ಛ ಗ್ರಾಮದ ಬಳಿಕ ಶಾಲೆ ಸುಧಾರಣೆ

ಸಾಮಾಜಿಕ ಸೇವಾ ಕಳಕಳಿಯ ಮಹಿಳೆಯ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:18 IST
Last Updated 8 ಮಾರ್ಚ್ 2017, 10:18 IST

ತುಮಕೂರು: ‘ಕಟ್ಟಿಗೇನಹಳ್ಳಿ ಗ್ರಾಮ ದತ್ತು ಪಡೆದು ಸರ್ವೆ ನಡೆಸಿದೆವು. ಗ್ರಾಮಸ್ಥರನ್ನು ಒಳಗೊಂಡ ಸಮಿತಿ ರಚಿಸಿದೆವು. ಮನೆ ಮನೆಗೆ ತೆರಳಿ ಕಸಮುಕ್ತ ಗ್ರಾಮಕ್ಕೆ ಶ್ರಮಿಸುವಂತೆ ಜಾಗೃತಿ ಮೂಡಿಸಿದೆವು. ಗ್ರಾಮದ ಶಾಲೆಗೆ ಅಗತ್ಯ ಸೌಲಭ್ಯಗಳು ಮತ್ತು ಪ್ರತಿ ಮನೆಗಳಿಗೆ ಶೌಚಾಲಯ ಕಲ್ಪಿಸಿದೆವು. ರಸ್ತೆ ದುರಸ್ತಿ, ನೀರು, ಚರಂಡಿ, ಉದ್ಯಾನ  ಸೇರಿದಂತೆ ಆದರ್ಶ ಗ್ರಾಮದ ಪರಿಕಲ್ಪನೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಶ್ರಮವಹಿಸಿದೆವು...’

ಹೀಗೆ ದೀರ್ಘವಾಗಿ ಹೇಳುತ್ತ ತಣ್ಣನೆಯ ಉಸಿರುಬಿಟ್ಟರು ಜ್ಯೋತಿ ಸುಧೀಂದ್ರ. ಜ್ಯೋತಿ ಅವರ ಮಾತುಗಳ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಸಾಮಾಜಿಕ ಸದಾಶಯಗಳು ಎದ್ದು ಕಾಣುತ್ತವೆ. ‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಎನ್ನುವ ಸಂಘಟನೆಯ ಯಶೋಗಾಥೆ ಹೆಜ್ಜೆಗಳು ಬಿಚ್ಚಿಕೊಳ್ಳುತ್ತವೆ.

ಜ್ಯೋತಿ ಸುಧೀಂದ್ರ ಅವರು ಹುಟ್ಟು ಹಾಕಿರುವ ‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಸದ್ದಿಲ್ಲದೆ ತನ್ನ ಸೇವಾ ಕಾರ್ಯಗಳ ಹಾದಿಯಲ್ಲಿ ಮುನ್ನುಗುತ್ತಿದೆ. ಗ್ರಾಮ ಮತ್ತು ನಗರ ಸ್ವಚ್ಛತೆ ಮುಖ್ಯವಾಗಿಟ್ಟುಕೊಂಡು ಜನ್ಮತಾಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಚ್ಚ ಭಾರತ್’ ಪರಿಕಲ್ಪನೆಗೆ 2015ರಲ್ಲಿ ಕರೆಕೊಟ್ಟರು.

ಇದಕ್ಕೂ ಮೊದಲೇ 2014ರಲ್ಲಿ ಗ್ರಾಮೀಣ ಪರಿಸರ ಮತ್ತು ರಸ್ತೆ ಸ್ವಚ್ಛಗೊಳಿಸಬೇಕು ಎನ್ನುವ ಉದ್ದೇಶದೊಂದಿಗೆ ‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಜನ್ಮತಾಳಿತು. ಕೇವಲ ಕಲ್ಪತರು ನಗರಿಯನ್ನು ಸ್ವಚ್ಛಗೊಳಿಸಬೇಕು ಎನ್ನುವ ಉದ್ದೇಶ ಆರಂಭದಲ್ಲಿ ಇತ್ತು.

ನಂತರದಲ್ಲಿ ತುಮಕೂರು ಗ್ರಾಮಾಂತರದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುತ್ತಿದೆ. ಶಾಲೆ ದುರಸ್ತಿ, ಮಕ್ಕಳಿಗೆ ಅಗತ್ಯವಿರುವ ಆಟಿಕೆಗಳು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ತನ್ನ ಕಾರ್ಯಗಳನ್ನು ಹಿಗ್ಗಿಸಿಕೊಂಡಿದೆ. ಅಲ್ಲದೆ ಹೆಚ್ಚು ಜನರನ್ನೂ ಈ ಸೇವಾ ಕಾರ್ಯದೊಳಗೆ ಸೇರಿಸಿಕೊಂಡಿದೆ. ಇಂದು ಅಸೋಸಿಯೇಷಿಯನ್‌ನಲ್ಲಿ 14 ನಿರ್ದೇಶಕರು ಮತ್ತು 3 ಸಾವಿರ ಸದಸ್ಯರು ಇದ್ದಾರೆ.

‘ನನ್ನ ರಸ್ತೆ ನನ್ನ ಜವಾಬ್ದಾರಿ’, ‘ನನ್ನ ಕಸ ನಾನೇ ಜವಾಬ್ದಾರಿ’ ಎನ್ನುವ ಜಾಗೃತಿ ಕಾರ್ಯಕ್ರಮದಡಿ ರಸ್ತೆ ಸ್ವಚ್ಛತೆ  ಮತ್ತು ಕಸಮುಕ್ತ ಗ್ರಾಮಕ್ಕಾಗಿ ಅಸೋಸಿಯೇಷನ್ ಶ್ರಮಿಸಿದೆ.

ಮೊದಲ ಹೆಜ್ಜೆ: ಅಸೋಸಿಯೇಷನ್ ಮೊದಲಿಗೆ ತನ್ನ ಕೆಲಸ ಆರಂಭಿಸಿದ್ದು ತುಮಕೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ. ಇಂದು ಆ ಗ್ರಾಮ ಕಸಮುಕ್ತವಾಗಿ ನಳ ನಳಿಸುತ್ತಿದೆ. ಸರ್ಕಾರ ಮತ್ತು ಜನ ಸಾಮಾನ್ಯರ ನಡುವಿನ ಸೇತುವೆಯಾಗಿಯೂ ಅಸೋಸಿಯೇಷನ್ ಕೆಲಸ ಮಾಡುತ್ತಿದೆ.

ADVERTISEMENT

ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಸಾಮಾಜಿಕ ಯೋಜನೆಗಳನ್ನು ಅರ್ಹರಿಗೆ ತಲುಪಿಸುತ್ತಿದೆ. ರೈತರಿಗೆ ಹನಿ ನೀರಾವರಿ ವ್ಯವಸ್ಥೆ, ಗ್ರಾಮದ ಸ್ಮಶಾನಕ್ಕೆ ತಂತಿ ಬೇಲಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಯ ಹಿಂದೆ ಅಸೋಸಿಯೇಷನ್‌ನ ಶ್ರಮ ಎದ್ದು ಕಾಣುತ್ತದೆ.

ತುಮಕೂರು ಹೊರವಲಯದ ಅಜ್ಜಗೊಂಡನಹಳ್ಳಿಯನ್ನು ಕಸಮುಕ್ತ ಗ್ರಾಮವನ್ನಾಗಿಸಲು ಈಗಾಗಲೇ ಸಾರ್ವಜನಿಕರ ಸಭೆ ನಡೆಸಲಾಗಿದೆ. ಶಾಲೆ ಮತ್ತು ಅಂಗನವಾಡಿಯನ್ನು ದತ್ತು ತೆಗೆದುಕೊಳ್ಳಲಾಗಿದ್ದು ಶೀಘ್ರದಲ್ಲಿಯೇ ಗ್ರಾಮದಲ್ಲಿ ಕೆಲಸಗಳು ಆರಂಭವಾಗಲಿದೆ.

ಬ್ರಿಟಿಷರ ಕಾಲದ ಕಟ್ಟಡದಲ್ಲಿ ನಡೆಯುತ್ತಿರುವ ಎಂಪ್ರೆಸ್ ಶಾಲೆ ಕಟ್ಟಡ ದುರಸ್ತಿಯನ್ನು ಅಸೋಸಿಯೇಷನ್‌ನಿಂದ ಕೈಗೊಳ್ಳಲಾಗಿದೆ. ಕೊಠಡಿಗಳಿಗೆ ಸುಣ್ಣ, ಬಣ್ಣ ಬಳಿಯಲಾಗಿದೆ. ಶೌಚಾಲಯ ವ್ಯವಸ್ಥೆ  ಕಲ್ಪಿಸಲಾಗಿದ್ದು ನೈರ್ಮಲ್ಯ ಮತ್ತು ಪರಿಸರ ಸ್ವಚ್ಚತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ.

ಎರಡು ವರ್ಷಗಳಿಂದ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಎನ್ನುವ ಜಾಗೃತಿ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಬೆಳವಣಿಗೆ ಎಲ್ಲಿ ಕುಂಠಿತವಾಗುತ್ತಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಹೇಗಿದೆ ಇತ್ಯಾದಿ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ವೈದ್ಯರು ಸೇರಿದಂತೆ ಸಮಾಜದ ವಿವಿಧ ವಲಯಗಳ ಜನರ ಸಹಕಾರ ಪಡೆಯಲಾಗುತ್ತಿದೆ.

ಭವಿಷ್ಯದ ಯೋಜನೆಗಳು: ಪ್ರತಿ ಗ್ರಾಮದಲ್ಲಿ ಮಾಹಿತಿ ಕೇಂದ್ರ ನಿರ್ಮಾಣ, ಮಹಿಳೆಯರಿಗೆ ಕೌಶಲ ತರಬೇತಿ ನೀಡಲು ‘ಅಕ್ಷಯ ಮಹಿಳಾ ಫೋರಂ’ ಸ್ಥಾಪನೆ– ಅಸೋಸಿಯೇಷನ್‌ ಮುಂದಿರುವ ಯೋಜನೆಗಳು.

‘ತುಮಕೂರು ಜಿಲ್ಲೆಯ ಎಲ್ಲ ಮಹಿಳಾ ಸಂಘಗಳನ್ನು ಒಂದೇ ಸೂರಿನಡಿ ತರುವುದು ಅಕ್ಷಯ ಮಹಿಳಾ ಫೋರಂ ಉದ್ದೇಶ. ಆ ಮೂಲಕ ಮಹಿಳಾ ಸಬಲೀಕರಣದ ಗುರಿ ಹೊಂದಲಾಗಿದೆ. ಸಾಕಷ್ಟು ಸಂಘ– ಸಂಸ್ಥೆಗಳಲ್ಲಿರುವವರಿಗೆ ಏನೂ ಮಾಡಬೇಕು, ಏಕೆ ಮಾಡಬೇಕು ಎನ್ನುವ ಅರಿವು ಇಲ್ಲ.

ಇದರಿಂದ ಮಾನವ ಶಕ್ತಿ ಹಾಳಾಗುತ್ತಿದೆ. ಮಾನವ ಶಕ್ತಿ ಸದುಪಯೋಗಕ್ಕೆ ಮಾರ್ಗದರ್ಶನ ಅಗತ್ಯ. ಈ ಕೆಲಸವನ್ನು ನಮ್ಮ ಅಸೋಸಿಯೇಷನ್‌ನಿಂದ ಮಾಡುವ ಉದ್ದೇಶ ಇದೆ’ ಎನ್ನುವರು ಜ್ಯೋತಿ.
–ಸುಮಿತ್ರಾ

ಸಾರ್ವಜನಿಕ ಸಹಕಾರ
ಅಸೋಸಿಯೇಷನ್‌ ಬೆಳವಣಿಗೆಗೆ ಸಾರ್ವಜನಿಕರ ಸಹಕಾರವೇ ಕಾರಣ ಎಂದು ವಿಶ್ಲೇಷಿಸುವರು ಜ್ಯೋತಿ ಸುಧೀಂದ್ರ. ಅಸೋಸಿಯೇಷನ್‌ನ ನಿರ್ದೇಶಕರು ಪ್ರತಿ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಇಂತಿಷ್ಟು ಎಂದು ಹಣವನ್ನು ಉಚಿತವಾಗಿ ನೀಡುವರು. ಅಲ್ಲದೆ ಜನರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರವೂ ಇದೆ.

‘ಎಂಪ್ರೆಸ್ ಶಾಲೆಯ ದುರಸ್ತಿ ವೇಳೆ ನಾ ಮುಂದು ತಾ ಮುಂದು ಎಂದು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು. ಒಬ್ಬರು ಸುಣ್ಣ ಬಣ್ಣಕ್ಕೆ ನೆರವು ನೀಡಿದರೆ, ಮತ್ತೊಬ್ಬರು ಚಾವಣಿ ರಿಪೇರಿಗೆ ನೆರವಾದರು.

ಬಿಸಿಯೂಟದ ಅನ್ನದಲ್ಲಿ ಹುಳ ಕಾಣಿಸಿಕೊಂಡರೆ ಮತ್ತು ಅನ್ನ ಸರಿಯಾಗಿ ಬೆಂದಿಲ್ಲ ಎಂದರೆ ಸರ್ಕಾರವನ್ನು ಹೊಣೆ ಮಾಡುತ್ತೇವೆ. ಆ ಬದಲು ಅಕ್ಕಿಯನ್ನು ಸ್ವಚ್ಛಗೊಳಿಸಬೇಕು ಅಲ್ಲವೇ. ಎಲ್ಲದಕ್ಕೂ ಸರ್ಕಾರವನ್ನು ತೆಗಳುವ ಬದಲು ಆ ದಿಸೆಯಲ್ಲಿ ನಾವು ಯಾವ ರೀತಿ ಕೆಲಸ ಮಾಡಬಹುದು ಎನ್ನುವ ಬಗ್ಗೆ ಆಲೋಚಿಸಬೇಕು’ ಎಂದು ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.