ADVERTISEMENT

ಹಣದ ಆಸೆಗಾಗಿ ಭೂಮಿ ಕಳೆದುಕೊಳ್ಳಬೇಡಿ

ಹುಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:06 IST
Last Updated 18 ಜುಲೈ 2017, 6:06 IST

ಹುಳಿಯಾರು: ‘ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಇಕ್ಕೆಲಗಳಲ್ಲಿ ಅಧಿಕ ಹಣದ ಆಸೆಗಾಗಿ ರೈತರು ಭೂಮಿ ಕಳೆದುಕೊಳ್ಳಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಪಟ್ಟಣದಲ್ಲಿ ಹಾದು ಹೋಗಲಿರುವ ಹುಳಿಯಾರಿನಿಂದ ಶಿರಾವರೆಗಿನ ರಾಷ್ಟೀಯ ಹೆದ್ದಾರಿ 234ರ ಕಾಮಗಾರಿಗೆ ಭಾನುವಾರ ಪೋಲಿಸ್ ಠಾಣೆಯ ಸರ್ಕಲ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿ, ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

‘ಅಧಿಕ ಹಣದ ಆಸೆ ತೋರಿಸಿ ಕೆಲ ಕೈಗಾರಿಕೋದ್ಯಮಿಗಳು ನಿಮ್ಮ ಭೂಮಿ ಕೊಳ್ಳಲು ಮುಂದೆ ಬರುತ್ತಾರೆ. ಆದರೆ ನಿಮ್ಮ ಭೂಮಿಯಲ್ಲಿ ನಿಮ್ಮ ಉಸ್ತುವಾರಿಯಲ್ಲೇ ಕೈಗಾರಿಕೆಗಳು ಸ್ಥಾಪಿತವಾಗುವಂತೆ ಎಚ್ಚರಿಕೆ ವಹಿಸಿ’ ಎಂದರು.

ADVERTISEMENT

‘ಪ್ರಸ್ತುತ ಸ್ಥಿತಿಯಲ್ಲಿ ಕೃಷಿ ಕಷ್ಟದ ಕೆಲಸವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಭದ್ರೆ ನೀರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹರಿದರೆ ಕೃಷಿಯೂ ಲಾಭದಾಯಕವಾಗಲಿದೆ. ರಾಷ್ಟ್ರೀಯ ರಸ್ತೆಯಾದರೆ ನಿಮ್ಮ ಬೆಳೆಗೆ ಉತ್ತಮ ಬೆಲೆಯೂ ದೊರೆಯುತ್ತದೆ’ ಎಂದರು.

ಮುಂದಿನ ಮಾರ್ಚ್‌ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.

‘ಈಗಾಗಲೇ ಭದ್ರಾ ಹಾಗೂ ಎತ್ತಿನಹೊಳೆ ಯೋಜನೆಗಳ ತೊಡಕು ನಿವಾರಣೆಗೆ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ವಾಣಿವಿಲಾಸ ಸಾಗರಕ್ಕೆ 10 ಟಿಎಂಸಿ ನೀರು ಹರಿಯಲಿದೆ’ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಕಾಲದಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸಲು ಅನೇಕ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಯಿತು. ಇದರಿಂದಲೇ ಇಂದು ಸಣ್ಣ ಪುಟ್ಟ ನಗರಗಳು ಸಹ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಪಡೆದಿವೆ. 234 ಹೆದ್ದಾರಿಯ ಹುಳಿಯಾರು–ಶಿರಾ ರಸ್ತೆ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಈ ಹಿಂದೆಯೇ ಶಂಕುಸ್ಥಾಪನೆ ಕಾರ್ಯ ನಡೆಯಬೇಕಿತ್ತು. ಆದರೆ ಕೆಲ ಕಾರಣಗಳಿಂದ ಸಾಧ್ಯವಾಗಲಿಲ್ಲ. ರಸ್ತೆ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಕಾಮಗಾರಿ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಾರ್ವಜನಿಕರು ಸಹ ಕಾಮಗಾರಿ ವೀಕ್ಷಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸಲಹೆ ಸೂಚನೆ ನೀಡಬಹುದು’ ಎಂದರು.

ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ‘ಹಲವು ವರ್ಷಗಳಿಂದ ಹುಳಿಯಾರು–ಶಿರಾ ಹೆದ್ದಾರಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಭಾಗಕ್ಕೆ ಜನಪ್ರತಿನಿಧಿಗಳು ಹೋದರೆ ಜನರಿಂದ ಬರೀ ಬೈಗುಳ ಕೇಳುವ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ರಸ್ತೆ ವಿಚಾರವಾಗಿ ಅನೇಕ ದಿನಗಳ ಕಾಲ ಅಹೋರಾತ್ರಿ ಹೋರಾಟವನ್ನು ನಡೆಸಿದರು. ಆ ವೇಳೆ ಸಂಸದರು, ಸಚಿವರು ಹಾಗೂ ತಾವು ಹೋಗಿ ಶೀಘ್ರ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದ್ದೆವು. ಅಭಿವೃದ್ಧಿಯಲ್ಲಿ ನಾವು ಪಕ್ಷಭೇದ ಮಾಡದೆ ಮುಂದೆ ನಡೆಯುವ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ, ಜಯಪ್ರಕಾಶ್, ರಾಮಚಂದ್ರಯ್ಯ, ಮಹಾಲಿಂಗಯ್ಯ, ಕಲ್ಲೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮ, ಸದ್ಯರಾದ ಎಚ್.ಎನ್.ಕುಮಾರ್, ಯತೀಶ್, ಪ್ರಸನ್ನಕುಮಾರ್, ಕಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಮುಖಂಡರಾದ ಬಿ.ಲಕ್ಕಪ್ಪ, ಶೇಷಾನಾಯ್ಕ, ಜಿ.ಕೃಷ್ಣೇಗೌಡ, ರಾಮಣ್ಣ, ತೀರ್ಥಪುರ ವಾಸಣ್ಣ, ಸುಮಾ, ಗಣೇಶ್, ಮುಕುಂದಪ್ಪ ಇದ್ದರು. ಉಪನ್ಯಾಸಕ ನರೇಂದ್ರಬಾಬು ನಿರೂಪಿಸಿದರು.

**

15 ದಿನದಲ್ಲಿ ಪ.ಪಂ ಘೋಷಣೆ
ಮುಂದಿನ15 ದಿನದಲ್ಲಿ ನಡೆಯುಲಿರುವ ಸಚಿವ ಸಂಪುಟದ ಸಭೆಯಲ್ಲಿ ಹುಳಿಯಾರನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿರ್ಣಯ ಮಂಡಿಸಲಾಗುವುದು. ತಾಲ್ಲೂಕು ಕೇಂದ್ರವಾಗಲು ಜನಸಂಖ್ಯೆ ಕೊರತೆಯಿದೆ. ಮುಂದಿನ ದಿನಗಳಲ್ಲಿ ಬೇರೆ ತಾಲ್ಲೂಕುಗಳ ಹೋಬಳಿ ಕೇಂದ್ರ ಸೇರಿಸಿಕೊಂಡು ತಾಲ್ಲೂಕು ಕೇಂದ್ರ ಮಾಡಲು ಪ್ರಯತ್ನ ಮಾಡುತ್ತೇನೆ. ಅಲ್ಲದೆ ಬಹುದಿನಗಳಿಂದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇನೆ.
–ಟಿ.ಬಿ.ಜಯಚಂದ್ರ, ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.