ADVERTISEMENT

ಹಾಲಿನ ಪ್ರೋತ್ಸಾಹಧನಕ್ಕೆ ‘ಆಧಾರ್‌’ ಕಂಟಕ

ಸಿ.ಕೆ.ಮಹೇಂದ್ರ
Published 7 ಏಪ್ರಿಲ್ 2017, 10:12 IST
Last Updated 7 ಏಪ್ರಿಲ್ 2017, 10:12 IST

ತುಮಕೂರು: ತೀವ್ರ ಬರ, ಕಾಲು ಬಾಯಿ ಜ್ವರದ ಆತಂಕದ ನಡುವೆಯೂ ಹೈನುಗಾರಿಕೆ ಮುಂದುವರೆಸಿರುವ ಜಿಲ್ಲೆಯ ರೈತರಿಗೆ ‘ಆಧಾರ್‌’ ಕಂಟಕವಾಗಿ ಪರಿಣಮಿಸ ತೊಡಗಿದೆ.

ಮೇವು ಇಲ್ಲದೇ ಸಾಕಷ್ಟು ರೈತರು ರಾಸುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಅಲ್ಲಿಂದಲೇ ನೂರಾರು ರೈತರು ಹಾಲು ಕರೆದು ಡೇರಿಗಳಿಗೆ ಹಾಕುತ್ತಿದ್ದಾರೆ. ಆದರೆ ಹಾಲಿಗೆ ಸರ್ಕಾರ ನೀಡುತ್ತಿರುವ ₹ 5 ಪ್ರೋತ್ಸಾಹಧನ ಪಡೆಯಲಾಗದೇ ಕಂಗಾಲಾಗಿದ್ದಾರೆ.

ಹಣ ಪಡೆಯಬೇಕಾದರೆ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಸಾಕಷ್ಟು ರೈತರು ಆಧಾರ್ ಸಂಖ್ಯೆ ನೋಂದಣಿ ಮಾಡಿದ್ದರೂ ಹಣ ಸಂದಾಯವಾಗುತ್ತಿಲ್ಲ. ಇದು ತಲೆನೋವಾಗಿ ಪರಿಣಿಮಿಸಿದೆ.

ADVERTISEMENT

ಸೆಪ್ಟೆಂಬರ್‌ ತಿಂಗಳಿಂದ ಮಾರ್ಚ್‌ ತಿಂಗಳವರೆಗಿನ ಪ್ರೋತ್ಸಾಹ ಧನ ರೈತರಿಗೆ ಬರಬೇಕಾಗಿದೆ. ಸೆಪ್ಟೆಂಬರ್‌– ನವೆಂಬರ್‌ ತಿಂಗಳವರೆಗಿನ ಹಣವನ್ನು ಈಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ಇದನ್ನು ಸಹ ಪಡೆಯಲು ಸಾವಿರಾರು ರೈತರಿಗೆ ಸಾಧ್ಯವಾಗಿಲ್ಲ.

‘ಬಾಕಿ ಇರುವ ಏಳು ತಿಂಗಳ ಹಣದಲ್ಲಿ ಮೂರು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಆಧಾರ್‌ ಸಂಖ್ಯೆಯ ಕಾರಣ ಸಾಕಷ್ಟು ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ತುಮುಲ್‌ (ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ) ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌ ತಿಳಿಸಿದರು.

‘ಸಾಕಷ್ಟು ರೈತರು ಎರಡು– ಮೂರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುತ್ತಾರೆ. ಹಾಲಿನ ಡೇರಿಯಿಂದ ಹಣ ಹಾಕುವ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ನೀಡಿರುವುದಿಲ್ಲ. ಎಲ್ಲ ಖಾತೆಗಳಿಗೂ ಆಧಾರ್‌ ಜೋಡಿಸಬೇಕು. ಈ ಕಾರಣದಿಂದಲೂ ಸಮಸ್ಯೆಯಾಗುತ್ತಿದೆ’ ಎಂದರು.

‘ನನ್ನದು ಎರಡು ಬ್ಯಾಂಕ್ ಖಾತೆಗಳಿವೆ. ಎರಡೂ ಖಾತೆಗಳಿಗೂ ಆಧಾರ್ ಸಂಖ್ಯೆ ಜೋಡಿಸಿದ್ದೇನೆ. ಸರ್ಕಾರದ ಬೇರೆ ಬೇರೆ ಯೋಜನೆಗಳ ಪ್ರೋತ್ಸಾಹ ಧನ ಬರುತ್ತಿದೆ. ಆದರೆ ಹಾಲಿನ ಪ್ರೋತ್ಸಾಹ ಧನ ಮಾತ್ರ ಬರುತ್ತಿಲ್ಲ’ ಎಂದು ಸಿ.ಎಸ್‌.ಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಾಮಕೃಷ್ಣ ಹೇಳಿದರು.

‘ತುಮುಲ್‌ನಿಂದ ಡೇರಿಗೆ ನೀಡಿರುವ ಪಟ್ಟಿಯಲ್ಲಿ ನನ್ನ ಖಾತೆಗೆ ಹಣ ಹಾಕಲಾಗಿದೆ ಎಂದು ತೋರಿಸಲಾಗಿದೆ. ಆದರೆ ಖಾತೆಗೆ ಹಣ ಬಂದಿಲ್ಲ. ನನ್ನೊಬ್ಬನದು ಮಾತ್ರವಲ್ಲ, ಡೇರಿಯ ಶೇ 70 ರಷ್ಟು ಜನರಿಗೆ ಈ ರೀತಿ ಆಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಿದ್ದಾರೆ’ ಎಂದು ದೂರಿದರು.

‘ರೈತರು ಬ್ಯಾಂಕ್‌ಗಳಿಗೆ ಆಧಾರ್ ಸಂಖ್ಯೆ ನೀಡಿದರೂ ಬ್ಯಾಂಕ್‌ನವರು ಆಧಾರ್ ಸಂಖ್ಯೆ ಜೋಡಿಸುತ್ತಿಲ್ಲ. ಇದರಿಂದಾಗಿಯೂ ಸಮಸ್ಯೆಯಾಗುತ್ತಿದೆ. ಬ್ಯಾಂಕ್‌ಗಳಿಂದ ಸಹಕಾರ ಸಿಗುತ್ತಿಲ್ಲ’ ಎಂದು ತುಮುಲ್ ಅಧಿಕಾರಿಯೊಬ್ಬರು ಹೇಳಿದರು.

‘ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳವರೆಗಿನ ₹21 ಕೋಟಿ ಪ್ರೋತ್ಸಾಹದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಇದರಲ್ಲಿ ಶೇ 72ರಷ್ಟು ರೈತರಿಗೆ ಮಾತ್ರ ಹಣ ಸಂದಾಯವಾಗಿದೆ. ಇನ್ನೂ ಏಳೆಂಟು ಕೋಟಿ ಹಣ ರೈತರಿಗೆ ಸಂದಾಯವಾಗಬೇಕಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಸಮಸ್ಯೆ ಸರಿಪಡಿಸಲು ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ’ ಎಂದು ತುಮುಲ್‌ ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ ಪ್ರತಿಕ್ರಿಯಿಸಿದರು.

**

ಆಧಾರ್ ಸಂಖ್ಯೆ ಜೋಡಣೆಯಲ್ಲಿ ಬ್ಯಾಂಕ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರಿಂದ ಆಧಾರ್‌ ತೆಗೆದುಕೊಂಡರೂ ಜೋಡಣೆ ಮಾಡುವುದಿಲ್ಲ. ಇದರಿಂದಾಗಿ ಸಮಸ್ಯೆಯಾಗುತ್ತಿದೆ.
–ಕೊಂಡವಾಡಿ ಚಂದ್ರಶೇಖರ್‌, ತುಮುಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.