ADVERTISEMENT

₹ 20 ಕೋಟಿಯಲ್ಲಿ ಆಧುನೀಕರಣ ಕಾಮಗಾರಿ

ತುಮಕೂರು ಎಪಿಎಂಸಿಗೆ ನಾಲ್ಕು ದಶಕಗಳ ನಂತರ ಅಭಿವೃದ್ಧಿ ಸ್ಪರ್ಶ

ರಾಮರಡ್ಡಿ ಅಳವಂಡಿ
Published 14 ಫೆಬ್ರುವರಿ 2017, 5:37 IST
Last Updated 14 ಫೆಬ್ರುವರಿ 2017, 5:37 IST
ತುಮಕೂರಿನ ಬಟವಾಡಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರಸ್ತೆಗೆ ಡಾಂಬರು ಹಾಕುವುದು ಮತ್ತು ಚರಂಡಿ ನಿರ್ಮಾಣ ಕಾಮಗಾರಿ ನೋಟ
ತುಮಕೂರಿನ ಬಟವಾಡಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರಸ್ತೆಗೆ ಡಾಂಬರು ಹಾಕುವುದು ಮತ್ತು ಚರಂಡಿ ನಿರ್ಮಾಣ ಕಾಮಗಾರಿ ನೋಟ   
ತುಮಕೂರು: ನಗರದ ಬಟವಾಡಿಯಲ್ಲಿರುವ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಚಟುವಟಿಕೆಗಳು ಗರಿಗೆದರಿವೆ.
 
ಒಂದೆಡೆ ಮಳೆ, ಬೆಳೆ ಇಲ್ಲದೇ ಕೃಷಿ ಉತ್ಪನ್ನಗಳ ಆವಕ ಎಪಿಎಂಸಿಗೆ ತಗ್ಗಿದೆ. ರಾಗಿ, ತೆಂಗು, ಹುಣಸೆ, ಅಡಕೆ ಸೇರಿ ಯಾವ ಬೆಳೆಯೂ ಮಾರುಕಟ್ಟೆಯಲ್ಲಿ ಆವಕ ಇಲ್ಲ. ಆದರೆ, ಅಭಿವೃದ್ಧಿ ಕಾಮಗಾರಿಗಳು ಮಾತ್ರ ಬಿರುಸಿನಿಂದ ಸಾಗಿವೆ. ಎಪಿಎಂಸಿ ಆವರಣದ ಯಾವುದೇ ರಸ್ತೆ, ಮೂಲೆ, ಯಾವುದೇ ದಿಕ್ಕಿಗೂ ಸಾಗಿದರೂ ಅಲ್ಲೊಂದು ಕಾಮಗಾರಿ ನಡೆಯುತ್ತಿರುವುದು ಕಂಡು ಬರುತ್ತದೆ.
 
ಎಪಿಎಂಸಿ ಆವರಣ ಅಭಿವೃದ್ಧಿಪಡಿಸಬೇಕು, ಹೆಚ್ಚಿನ ಸೌಕರ್ಯಗಳನ್ನು ದೊರಕಿಸಬೇಕು ಎಂಬುದು ಅನೇಕ ವ್ಯಾಪಾರಸ್ಥರು ಮತ್ತು ರೈತರ ಕೆಲ ದಶಕಗಳ ಒತ್ತಾಯವಾಗಿತ್ತು. ಆದರೆ, ಎಪಿಎಂಸಿ ಆಡಳಿತ ಮಂಡಳಿ ಅಷ್ಟೊಂದು ಗಮನ ಕೊಟ್ಟಿರಲಿಲ್ಲ ಎನ್ನಲಾಗಿದೆ. ದಶಕಗಳಿಂದಲೂ ಎಪಿಎಂಸಿ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರಲಿಲ್ಲ. ಈಗ ಎಪಿಎಂಸಿ ಆವರಣದ ಅಭಿವೃದ್ಧಿಗೆ ಚಾಲನೆ ದೊರೆತಿದೆ.  
 
ತುಮಕೂರು ಎಪಿಎಂಸಿ ಆವರಣ 48 ಎಕರೆ ವಿಶಾಲ ಪ್ರದೇಶ ಹೊಂದಿದೆ. ಇದರಲ್ಲಿ ಖರೀದಿದಾರರ ಅಂಗಡಿ ಮುಂಗಟ್ಟು, ದಿನಸಿ ಅಂಗಡಿ, ಸಗಟು ವ್ಯಾಪಾರಸ್ಥರ ಅಂಗಡಿ, ಗೋದಾಮುಗಳು, ಎಪಿಎಂಸಿ ಆಡಳಿತ ಕಚೇರಿ, ರೈತ ಭವನ, ಅತಿಥಿ ಗೃಹಗಳಿವೆ.
 
35 ವರ್ಷಗಳ ನಂತರ ಅಭಿವೃದ್ಧಿ ಕಾರ್ಯ
 
48 ಎಕರೆ ಪ್ರದೇಶ ವ್ಯಾಪ್ತಿಯ ರಸ್ತೆಗೆ ಡಾಂಬರು ಹಾಕುವುದು, ಒಳಚರಂಡಿ ನಿರ್ಮಾಣ, ಪಾದಚಾರಿ (ಫುಟ್‌ಪಾತ್‌), ಶೌಚಾಲಯ ನಿರ್ಮಾಣ, ಭೂಮಿ ಒಳಮೈಯಲ್ಲಿ ದೂರವಾಣಿ ಕೇಬಲ್ ಅಳವಡಿಕೆ, ಎಲ್‌ಇಡಿ ವಿದ್ಯುತ್ ದೀಪ, ರೈತ ಭವನ ನವೀಕರಣ, ಎರಡು ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
 
‘ಎಪಿಎಂಸಿ ಆವರಣವನ್ನು ಆಧುನಿಕತೆಗೆ ತಕ್ಕಂತೆ ಅಭಿವೃದ್ಧಿಪಡಿಸಬೇಕು ಎಂಬುದು ಬಹಳ ದಿನದ ಬೇಡಿಕೆಯಾಗಿತ್ತು. 1980ರಿಂದ ಈವರೆಗೆ ಅಭಿವೃದ್ಧಿ ಕೆಲಸ ನಡೆದಿರಲಿಲ್ಲ. ಈಗ ₹ 20 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿದೆ. ಇ–ಟೆಂಡರ್‌ ಪ್ರಕ್ರಿಯೆಯ ಅನುಸಾರ ಎಚ್.ಡಿ.ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಗುತ್ತಿಗೆ ಪಡೆದು ಕಾಮಗಾರಿ ನಡೆಸಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮೀಕ್ಷೆಯ 70 ತಂಡಗಳು ನಮ್ಮ ಎಪಿಎಂಸಿಗೆ ಭೇಟಿ ನೀಡಿ ಸಲಹೆ ಸೂಚನೆ ನೀಡಿದ್ದವು. ಇದರಲ್ಲಿ ಅಭಿವೃದ್ಧಿ ಚಟುವಟಿಕೆಗೆ ಸಂಬಂಧಪಟ್ಟ ಕೆಲ ಸಲಹೆಗಳಿದ್ದವು. ಆ ಸಲಹೆಗಳನ್ನು ಈ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘48 ಎಕರೆ ವಿಶಾಲ ಮಾರುಕಟ್ಟೆಯಲ್ಲಿ ಒಟ್ಟು 400 ಗೋದಾಮು, 70 ನಿವೇಶನಗಳಿವೆ. ಆಧುನಿಕತೆಗೆ ತಕ್ಕಂತೆ ಮಾರುಕಟ್ಟೆ ಅಭಿವೃದ್ಧಿ ಅಗತ್ಯ. ತುಮಕೂರು ಸ್ಮಾರ್ಟ್‌ ಸಿಟಿ ಆಗುತ್ತಿದ್ದು, ನಮ್ಮ ಮಾರುಕಟ್ಟೆಯೂ ಅದಕ್ಕೆ ತಕ್ಕಂತೆ ಹೆಜ್ಜೆ ಇರಿಸಿದೆ’ ಎಂದು ವಿವರಿಸಿದರು.
 
ಅನುಕೂಲಕ್ಕಿಂತ ಅನಾನುಕೂಲ
 
ಈಗ ಕೈಗೊಂಡಿರುವ ಅಭಿವೃದ್ಧಿ ಕೆಲಸ ಸಮರ್ಪಕವಾಗಿಲ್ಲ. ಹಳೆಯ ರಸ್ತೆಯ ಮೇಲೆಯೇ ಡಾಂಬರು ಹಾಕಿಸಿದ್ದರೆ ಸಾಕಾಗಿತ್ತು. ಈಗ ಮಾಡುತ್ತಿರುವ ರಸ್ತೆ ಬಹಳ ವರ್ಷ ಬಾಳಿಕೆ ಬರುವುದಿಲ್ಲ. ಕಾಮಗಾರಿಯೂ ಗುಣಮಟ್ಟದ್ದಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ವ್ಯಾಪಾರಸ್ಥರೊಬ್ಬರು ಹೇಳಿದರು.

‘ಒಂದೆರಡು ವರ್ಷದಲ್ಲಿ ಕಿತ್ತು ಹೋಗಬಹುದು. ಈಗ ವಿಶಾಲವಾಗಿ ಪಾದಚಾರಿ ಮಾರ್ಗ ನಿರ್ಮಿಸಿದ್ದು, ರಸ್ತೆ ಇಕ್ಕಟ್ಟಾಗಿದೆ. ಸರಕು ವಾಹನಗಳು ಇತ್ತಿಂದತ್ತ ಸಂಚರಿಸದಂತಾಗಿದೆ. ವಾಹನಗಳನ್ನು ನಿಲುಗಡೆ ಮಾಡಲು ಸ್ಥಳವಕಾಶವಿಲ್ಲ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುಂಚೆ ಎಲ್ಲ ವ್ಯಾಪಾರಸ್ಥರ ಅಭಿಪ್ರಾಯ ಕೇಳಿಲ್ಲ’ ಎಂದು ದೂರಿದರು.
 
ಅಂಕಿ –ಅಂಶ

₹12ಕೋಟಿ - ಬ್ಯಾಂಕ್‌ನಿಂದ ಪಡೆದ ಸಾಲ
₹7ಕೋಟಿ   - ಎಪಿಎಂಸಿ ನಿಧಿಯಿಂದ ಭರಿಸಿದ್ದು
48 ಎಕರೆ   - ಮಾರುಕಟ್ಟೆ  ಇರುವ ಪ್ರದೇಶದ ವಿಸ್ತೀರ್ಣ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.