ADVERTISEMENT

32 ಗ್ರಾಮದಲ್ಲಿ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 4:52 IST
Last Updated 17 ಮೇ 2017, 4:52 IST

ಗುಬ್ಬಿ: ‘ತಾಲ್ಲೂಕಿನ 32 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಹೆಚ್ಚಿದೆ. ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಎಚ್.ಆರ್.ರಮೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು. ‘ಕೊಳವೆಬಾವಿ ಕೊರೆಯಲು ಒಂದು ಲಾರಿ ಮಾತ್ರ ನಮಗೆ ಲಭ್ಯವಿದೆ. ಏಕಕಾಲದಲ್ಲಿ ಎಲ್ಲ ಗ್ರಾಮಗಳಲ್ಲೂ ಕೊರೆಯಲು ಸಾಧ್ಯವಿಲ್ಲ.  ತಾಲ್ಲೂಕು ಪಂಚಾಯಿತಿ ಸದಸ್ಯರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸದಸ್ಯ ರಹಮತ್ ಉಲ್ಲಾ ಮಾತನಾಡಿ ‘ಚಾಕೇನಹಳ್ಳಿ, ಜೀಗನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೊಳವೆಬಾವಿಯಿಂದ ಪಂಪ್ ಹೊರ ತೆಗೆದಿದ್ದಾರೆ. ಪೈಪ್, ಮೋಟರ್, ಕೇಬಲ್ ಹೊರಭಾಗದಲ್ಲಿಯೇ ಬಿದ್ದಿವೆ. ಇದಕ್ಕೆ ಯಾರು ಜವಾಬ್ದಾರಿ. ಪ್ರತಿ ಸಭೆಯಲ್ಲಿ ಹಾಡಿದ್ದೇ ಹಾಡೋದು ಆಗಿದೆ. ಇಂತಹ ಸಭೆ ಏಕೆ ಕರೆಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಂಜಯ್ಯ, ‘ತಾಲ್ಲೂಕಿನಲ್ಲಿ 200 ಶಾಲೆಗಳು ದುರಸ್ತಿ ಆಗಬೇಕಿದ್ದು ₹ 14 ಕೋಟಿ ಹಣ ಅಗತ್ಯವಿದೆ. ಹಾಗಲವಾಡಿ, ಸಾತೇನಹಳ್ಳಿ, ಜೀಗನಹಳ್ಳಿ, ಹೊರಕೆರೆ ಶಾಲೆಗಳ ಕಟ್ಟಡಗಳು ಪೂರ್ಣ ಶಿಥಿಲವಾಗಿವೆ. ತಕ್ಷಣ ಈ ಕಟ್ಟಡಗಳ ದುರಸ್ತಿಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಪ್ರತಿ ಶಾಲೆಗಳು ತಾವು ತೆಗೆದುಕೊಳ್ಳುವ ಶುಲ್ಕವನ್ನು ನಾಮಫಲಕದಲ್ಲಿ ಪ್ರಕಟಿಸಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ಬಗ್ಗೆ ಪೋಷಕರು ನಮ್ಮ ಗಮನಕ್ಕೆ ತಂದರೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನಸೂಯ, ಉಪಾಧ್ಯಕ್ಷೆ ಮಮತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ, ಇಒ ಶಿವಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.