ADVERTISEMENT

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 7:04 IST
Last Updated 8 ಫೆಬ್ರುವರಿ 2018, 7:04 IST

ಪಾವಗಡ: ಖರೀದಿ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗೆ ಶೇಂಗಾ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ತಾಲ್ಲೂಕಿನ ರೈತರು ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಬೆಂಬಲೆ ಬೆಲೆಯಲ್ಲಿ ರೈತರಿಂದ ಆಹಾರ ಧಾನ್ಯ ಖರೀದಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ತಾಲ್ಲೂಕಿನಲ್ಲಿ ಈವರೆಗೆ ಸಮರ್ಪವಾಗಿ ಖರೀದಿ ವ್ಯವಸ್ಥೆ ಇಲ್ಲ. ಇದರಿಂದ ಶೇಂಗಾ ಶೇಖರಿಸಿ ಇಟ್ಟುಕೊಂಡಿರುವ ತಾಲ್ಲೂಕಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್ ಆರೋಪಿಸಿದರು.

ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ರಾಗಿ, ಭತ್ತ, ತೊಗರಿ, ಶೇಂಗಾ ಖರೀದಿಸುತ್ತಿರುವುದಾಗಿ ಸರ್ಕಾರ ಜಾಹೀರಾತು ನೀಡುತ್ತಿದೆ. ಆದರೆ ಬೆಲೆ ಕುಸಿದಂತೆ ಬೆಂಬಲ ಬೆಲೆಗೆ ರೈತರಿಂದ ಕೃಷಿ ಉತ್ಪನ್ನ ಖರೀದಿಸದೆ, ದಲ್ಲಾಳಿಗಳಿಗೆ ಅನುಕೂಲ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ADVERTISEMENT

ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದ ರೈತರಿಗೆ ಪರಿಹಾರ ವಿತರಿಸಬೇಕು. ಅಕ್ರಮ ಸಕ್ರಮದಡಿ ಹಣ ಪಾವತಿಸಿದ ರೈತರಿಗೆ ವಿದ್ಯುತ್ ಸಂಪರ್ಕ ಕೊಡಬೇಕು. ಶೀಘ್ರ ರೇಷ್ಮೆ ಶೆಡ್ ಬಿಲ್ ಪಾವತಿ ಮಾಡಬೇಕು. ವಾಣಿಜ್ಯ ಬೆಳೆಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ, ಸಂಘಟನಾ ಕಾರ್ಯ ದರ್ಶಿ ದೊಡ್ಡಮಾಳಯ್ಯ, ಉಪಾಧ್ಯಕ್ಷ ರಂಗಹನುಮಂತಯ್ಯ, ತಾಲ್ಲೂಕು ಘಟಕದ ಉಪಾಧ್ಯಕ್ಷ ತಿಮ್ಮರಾಯಪ್ಪ, ರಾಮಾಂಜಿನಪ್ಪ, ಡಿ.ತಿಮ್ಮರಾಯ, ಬಿ.ಕರಿಯಣ್ಣ, ಬಿ.ಎಸ್.ಪಿ. ಮಂಜುನಾಥ್ ಇದ್ದರು.

* * 

ಕಡಿಮೆ ಬೆಲೆಗೆ ರೈತರಿಂದ ದವಸ, ಧಾನ್ಯ ಖರೀದಿಸಿ ಹೆಚ್ಚು ಬೆಲೆಗೆ ಮಾರಿಕೊಳ್ಳಲು ಮಧ್ಯವರ್ತಿಗಳಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಇದರಿಂದ ನಷ್ಟ ತ‍ಪ್ಪಿದ್ದಲ್ಲ
ಕೆ.ಟಿ. ಗಂಗಾಧರ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.