ADVERTISEMENT

ತೋಟಗಳಿಗೆ ಹಾನಿ: ಗ್ರಾಮಸ್ಥರು ಭಯಭೀತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 7:02 IST
Last Updated 21 ಫೆಬ್ರುವರಿ 2018, 7:02 IST
ಮಲ್ಲಸಂದ್ರ ಕೆರೆ ಸಮೀಪದ ತೋಟದಲ್ಲಿ ಆನೆಗಳು ಕಿತ್ತು ಹಾಕಿರುವ ತೆಂಗಿನ ಸಸಿಯ ಗರಿಗಳನ್ನು ತೋರಿಸುತ್ತಿರುವ ರೈತರು
ಮಲ್ಲಸಂದ್ರ ಕೆರೆ ಸಮೀಪದ ತೋಟದಲ್ಲಿ ಆನೆಗಳು ಕಿತ್ತು ಹಾಕಿರುವ ತೆಂಗಿನ ಸಸಿಯ ಗರಿಗಳನ್ನು ತೋರಿಸುತ್ತಿರುವ ರೈತರು   

ಮಲ್ಲಸಂದ್ರ: ಇಲ್ಲಿನ ಮಲ್ಲಸಂದ್ರ ಕೆರೆಯಲ್ಲಿ ಮೂರು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ರಾತ್ರಿಯಾದರೆ ಸಾಕು  ತೋಟಗಳಿಗೆ ನುಗ್ಗಿ ಹಾಳು ಮಾಡುತ್ತಿವೆ.

ಬೆಳಿಗ್ಗೆ ವೇಳೆಗೆ ಕೆರೆಯೊಳಗೆ ಸೇರುವ ಆನೆಗಳು ಸಂಜೆವರೆಗೂ ಜಲಕ್ರೀಡೆಯಲ್ಲಿ ತೊಡಗಿರುತ್ತವೆ. ಇವುಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಹಾಗೂ ತುಮಕೂರು ನಗರದ ಜನರು ಗುಂಪುಗೂಡುತ್ತಿದ್ದಾರೆ.

ಆನೆಗಳು ಗ್ರಾಮಗಳಿಗೆ ನುಗ್ಗಬಹುದೆಂಬ ಭಯದಲ್ಲಿ ಜನರು ಬದುಕುತ್ತಿದ್ದಾರೆ. ಮನೆ ಬಿಟ್ಟು ಈಚೆ ಬರಲು ಹಿಂದು–ಮುಂದು ನೋಡುತ್ತಿದ್ದಾರೆ. ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಬೆಂಕಿ ಹಾಕಿದರೆ ತೋಟಕ್ಕೆ ಬರುವುದಿಲ್ಲ ಎಂಬ ನಂಬಿಕೆಯಲ್ಲಿ ರಾತ್ರಿ ವೇಳೆ ತೋಟಗಳಲ್ಲಿ ಅಲ್ಲಲ್ಲಿ ಬೆಂಕಿ ಹಾಕುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ.

ADVERTISEMENT

‘ಪ್ರಾಣ ಕೈಯಲ್ಲಿಡಿದುಕೊಂಡು ತೋಟಕ್ಕೆ ಬರುತ್ತಿದ್ದೇವೆ. ನಾಲ್ಕೈದು ವರ್ಷದ ಐದಾರು ತೆಂಗಿನ ಗಿಡಗಳನ್ನು ಕಿತ್ತು ಹಾಕಿವೆ. ಹನಿ ನೀರಾವರಿ ಪೈಪ್‌ಗಳನ್ನು ತುಳಿದು ಹಾಕಿವೆ. ಹಲಸಿನ ಮರವೊಂದನ್ನು ಮುರಿದು ಹಾಕಿವೆ. ಇಲಾಖೆಯ ಅಧಿಕಾರಿಗಳು ಕೂಡಲೇ ಆನೆಗಳನ್ನು ಇಲ್ಲಿಂದ ಓಡಿಸಬೇಕು’ ಎಂದು ಗ್ರಾಮದ ರಂಗಸ್ವಾಮಿ ಅಳಲು ತೋಡಿಕೊಂಡರು.

‘ಮೂರು– ನಾಲ್ಕು ಜನರ ತೋಟಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡಿವೆ. ತೆಂಗಿನ ಗಿಡಗಳ ಸುಳಿಯನ್ನು ಎಳೆದು ತಿನ್ನುತ್ತಿವೆ. ಇಲ್ಲಿ ರೈತರ ಗೋಳನ್ನು ಯಾರೂ ಕೇಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಮೂರು–ನಾಲ್ಕು ಸಿಬ್ಬಂದಿ ಬಂದು ಕೆರೆಯಲ್ಲಿರುವ ಆನೆಗಳನ್ನು ನೋಡಿಕೊಂಡು ವಾಪಸ್‌ ಆಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಕರೆ ತಂದು ಆನೆಗಳನ್ನು ಓಡಿಸಬೇಕು’ ಎಂದು ಗ್ರಾಮದ ಮಹಾದೇವಸ್ವಾಮಿ ಒತ್ತಾಯಿಸಿದರು.

‘ರೈತರ ತೋಟಗಳಿಗೆ ಸಾಕಷ್ಟು ಹಾನಿ ಮಾಡಿವೆ. ಇಲ್ಲಿನ ರೈತರ ಸಂಕಷ್ಟವನ್ನು ನೋಡಿದರೆ ಕರುಳ್‌ ಚುರುಕ್‌ ಎನ್ನುತ್ತದೆ. ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಆನೆ ಕಾರಿಡಾರ್‌ ಆಗಿರುವುದರಿಂದ ಆನೆಗಳು ಪ್ರತಿ ವರ್ಷವೂ ಬರುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಆನೆಗಳ ಫೋಟೊ ತೆಗೆಯಲು ಬಂದಿದ್ದ ತುಮಕೂರು ವಿಶ್ವವಿದ್ಯಾನಿಲಯದ ಲಲಿತಾ ಕಲಾ ವಿಭಾಗದ ಡಾ. ಸಿದ್ದಲಿಂಗಸ್ವಾಮಿ ಹಿರೇಮಠ ಅವರು ಹೇಳಿದರು.

₹50 ಸಾವಿರ ನಷ್ಟಕ್ಕೆ ₹500 ಪರಿಹಾರ!

’ರೈತರಿಗೆ ಆಗುತ್ತಿರುವ ನಷ್ಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಲಘುವಾಗಿ ಪರಿಗಣಿಸುತ್ತಿದ್ದಾರೆ. ಅರ್ಜಿ ಕೊಡಿ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಾರೆ. ಅರ್ಜಿ ಕೊಟ್ಟರೆ ಅವರ ನೀಡುವ ಪರಿಹಾರ ಮೊತ್ತ ನೋಡುತ್ತಿದ್ದಂತೆ ಇಲಾಖೆ ವಿರುದ್ಧ ಆಕ್ರೋಶ ಹುಟ್ಟುತ್ತದೆ. ನಮ್ಮೊಳಗಿನ ನೋವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ’ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

’ಕಳೆದ ವರ್ಷವೂ ನನ್ನ ತೋಟಕ್ಕೆ ನುಗ್ಗಿದ ಆನೆಗಳು ಐದಾರು ತೆಂಗಿನ ಗಿಡಗಳನ್ನು ಕಿತ್ತು ಹಾಕಿದ್ದವು. ₹ 50 ಸಾವಿರ ಬೆಳೆಯ ಟೊಮೆಟೊ ಬೆಳೆ ನಾಶ ಮಾಡಿದ್ದವು. ಒಂದು ಗುಡಿಸಲು ಕಿತ್ತು ಹಾಕಿದ್ದವು. ಇದನ್ನೆಲ್ಲ ಸೇರಿಸಿ ಅರಣ್ಯ ಇಲಾಖೆಗೆ ಅರ್ಜಿ ನೀಡಿದ್ದೆ. ಅವರು ₹ 500 ಪರಿಹಾರ ನೀಡಿದರು’ ಎನ್ನುತ್ತಾರೆ ರಂಗಸ್ವಾಮಿ.

‘ ಈ ಸಲ ಮಾಡಿರುವ ನಷ್ಟಕ್ಕೆ ಅರ್ಜಿ ಸಲ್ಲಿಸಬೇಕೇ, ಬೇಡವೇ ಎಂದು ಯೋಚನೆ ಮಾಡುತ್ತಿದ್ದೇನೆ. ಬಡವರ ನೋವು ಅಧಿಕಾರಿಗಳಿಗೆ, ಸರ್ಕಾರಕ್ಕೆ ಅರ್ಥವಾಗುವುದಿಲ್ಲ ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.