ADVERTISEMENT

80 ಸಾವಿರ ಗಿಡ ವಿತರಣೆ

ರಾಮರಡ್ಡಿ ಅಳವಂಡಿ
Published 22 ಜೂನ್ 2017, 9:53 IST
Last Updated 22 ಜೂನ್ 2017, 9:53 IST
ವಿತರಣೆಗೆ ಸಿದ್ಧವಾಗಿರುವ ಸಸಿಗಳು ಮತ್ತು ಗಿಡಗಳು
ವಿತರಣೆಗೆ ಸಿದ್ಧವಾಗಿರುವ ಸಸಿಗಳು ಮತ್ತು ಗಿಡಗಳು   

ತುಮಕೂರು: ಪ್ರತಿ ವರ್ಷ ಮಳೆಗಾಲ ಶುರುವಾಗುತ್ತಿದ್ದಂತೆಯೇ ಸಸಿ, ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವ ವ್ಯಕ್ತಿಗಳು, ಸಂಘ ಸಂಸ್ಥೆಗಳೊಂದಿಗೆ ಅರಣ್ಯ ಇಲಾಖೆಯೂ ಕೈ ಜೋಡಿಸಿಕೊಂಡು ಬಂದಿದೆ.

ಸಂಘ ಸಂಸ್ಥೆ, ವ್ಯಕ್ತಿಗಳಿಗೆ ಇಲಾಖೆಯು ಗಿಡಗಳನ್ನು ವಿತರಿಸಿ ಪ್ರೋತ್ಸಾಹಿಸುತ್ತಿದೆ. ಈ ವರ್ಷ ಇಲಾಖೆಯ ತುಮಕೂರು ತಾಲ್ಲೂಕು ವಲಯವು 80 ಸಾವಿರ ಗಿಡಗಳನ್ನು ವಿತರಿಸಲು ಮುಂದಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ರೈತರಿಗೆ ಉಚಿತ ಸಸಿ ವಿತರಣೆ ಮಾಡಲಾಗುತ್ತದೆ. ಅದರಿಂದಾಗಿ ಈಗಾಗಲೇ ರೈತರು ಉತ್ಸಾಹದಿಂದ ಜಮೀನಿನ ಪಹಣಿ ಹಿಡಿದುಕೊಂಡು ಅರಣ್ಯ ಇಲಾಖೆಗೆ ಧಾವಿಸಿ ಬಂದು ಗಿಡಗಳನ್ನು ಪಡೆಯುತ್ತಿದ್ದಾರೆ.

ADVERTISEMENT

ಮುಂಗಾರು ಪೂರ್ವ ಮಳೆ ಆಗಿದ್ದರಿಂದ ಬಿತ್ತನೆ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ. ಇದರ ಜತೆಗೆಯೇ ಗಿಡಗಳನ್ನು ಜಮೀನಿನ ಬದುಗಳಲ್ಲಿ, ಜಮೀನಿನಲ್ಲಿ ನೆಡುವ ಕಾರ್ಯ ಕೈಗೊಂಡಿದ್ದಾರೆ.

ಯಾವ ಗಿಡಗಳ ವಿತರಣೆ: ಹೆಬ್ಬೇವು, ಸಿಲ್ವರ್ ಓಕ್, ರಕ್ತಚಂದನ, ಮಾವು, ನೆಲ್ಲಿ, ಶ್ರೀಗಂಧ, ಮಹಾಗನಿ  ಗಿಡಗಳನ್ನು ರೈತರಿಗೆ ಇಲಾಖೆ ವಿತರಣೆ ಮಾಡುತ್ತಿದೆ. ಹೆಬ್ಬೇವು ಮತ್ತು ಸಿಲ್ವರ್ ಗಿಡಕ್ಕೆ ಹೆಚ್ಚಿನ ಬೇಡಿಕೆ ಇದೆ. ಒಂದೇ ತರಹದ ಗಿಡಗಳನ್ನು ರೈತರಿಗೆ ಕೊಡುವುದಿಲ್ಲ. ಮಿಶ್ರ ಗಿಡಗಳನ್ನೇ ಕೊಡಲಾಗುತ್ತದೆ. ಅದರೂ ಹೆಬ್ಬೇವು, ಸಿಲ್ವರ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು ವಲಯ ಅರಣ್ಯಾಧಿಕಾರಿ ಬೈರಾರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಹೆಬ್ಬೇವು ಮತ್ತು ಸಿಲ್ವರ್ ಗಿಡಗಳ ನೆಟ್ಟರೆ ನೆರಳು, ಕೃಷಿಗೆ ಉಪಯುಕ್ತ ಆಗುವುದರ ಜೊತೆಗೆ ನಾಲ್ಕಾರು ಮೇಕೆ, ಕುರಿಗಳನ್ನು ಸಾಕಿಕೊಂಡು ಅದರ ಸೊಪ್ಪನ್ನೇ ಅವುಗಳಿಗೆ ಮೇವಿನ ರೂಪದಲ್ಲಿ ಕೊಡಬಹುದು. ಅನೇಕ ಸಣ್ಣ ರೈತರು ಇದನ್ನು ಅನುಸರಿಸಿದ್ದಾರೆ. ಹೀಗಾಗಿ, ಬೇಡಿಕೆ ಇದೆ’ ಎಂದು ವಿವರಿಸಿದರು.

‘ಈಗಾಗಲೇ ತುಮಕೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 400 ಗಿಡಗಳನ್ನು ಉಚಿತವಾಗಿ ಉದ್ಯೊಗ ಖಾತರಿ ಯೋಜನೆಯಡಿ ವಿತರಣೆ ಮಾಡಿದೆ’ ಎಂದು ವಿವರಿಸಿದರು.

ತಾಲ್ಲೂಕಿನ ಕಿತ್ತಗನಹಳ್ಳಿ ಸುತ್ತಮುತ್ತ ರಸ್ತೆ ಬದಿ, ಕೆರೆ ಅಂಗಳದಲ್ಲಿ ಬೇವು, ಹೊಂಗೆ ಸೇರಿ ವಿವಿಧ ಬಗೆಯ 4 ಸಾವಿರ ಜೈವಿಕ ಇಂಧನ ಸಸಿಗಳನ್ನು ನೆಡಲಾಗುತ್ತದೆ.
ಹೆಬ್ಬೂರು ಕೆರೆ ಅಂಗಳದ ಸುತ್ತಮುತ್ತ ಈ ವರ್ಷ 12 ಸಾವಿರ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಜಂಬು ನೇರಳೆ, ನಾಯಿ ನೇರಳೆ, ಅತ್ತಿ, ಮತ್ತಿ, ನಾಟಿ ಮಾವು ಸಸಿಗಳನ್ನು ವಿತರಿಸಲಾಗುತ್ತಿದೆ.

ತುಮಕೂರು ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜತೆಗೂಡಿ 5 ಸಾವಿರ ಗಿಡಗಳನ್ನು ಉದ್ಯಾನವನ, ರಸ್ತೆ ಬದಿ ನೆಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೇವು, ಹೊಂಗೆ, ಟಬೂಬಿಯಾ, ಜಂಬು ನೇರಳೆ ಗಿಡ ನೆಡಲು ತೀರ್ಮಾನಿಸಲಾಗಿದೆ. ಈ ಗಿಡಗಳನ್ನು ನಗರ ಪ್ರದೇಶದಲ್ಲಿ ನೆಡುವುದರಿಂದ ಹೆಚ್ಚು ನೆರಳು, ತಂಪು ವಾತಾವರಣ ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂಬುದು ಈ ಮರಗಳನ್ನು ನೆಡುವುದರ  ಹಿಂದಿರುವ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

80ಸಾವಿರ ಈ ವರ್ಷ ತುಮಕೂರು ವಲಯ ಅರಣ್ಯ ಇಲಾಖೆ ವಿತರಿಸುವ ಗಿಡ

12ಸಾವಿರ ಹೆಬ್ಬೂರು ಕೆರೆ ಸುತ್ತಮುತ್ತ ನೆಡಲು ಉದ್ದೇಶಿಸಿದ ಗಿಡಗಳು

₹60 ಒಂದು ಗಿಡ ನೆಡಲು ರೈತರಿಗೆ ನೀಡಲಾಗುವ ಮೊತ್ತ

* *

ರೈತರು ತಮ್ಮ ಜಮೀನಿನಲ್ಲಿ  ಒಂದು ಗಿಡ ನೆಡುವುದಕ್ಕೆ  ₹ 60 ಅನ್ನು ಅರಣ್ಯ ಇಲಾಖೆ ಕೊಡುತ್ತದೆ. ಗಿಡಗಳನ್ನು ಸಂರಕ್ಷಣೆ ಮಾಡಿ ಪೋಷಣೆ ಮಾಡುವುದು ರೈತರ ಜವಾಬ್ದಾರಿಯಾಗಿರುತ್ತದೆ
ಬೈರಾರೆಡ್ಡಿ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.