ADVERTISEMENT

ಅಧಿವೇಶನಕ್ಕೆ ಸಚಿವರ ಗೈರು– ದಿವಾಳಿತನಕ್ಕೆ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:26 IST
Last Updated 14 ನವೆಂಬರ್ 2017, 9:26 IST
ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಇದ್ದರು.
ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಇದ್ದರು.   

ಕುಂದಾಪುರ: ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ 2 ಸಚಿವರು ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಭ್ರಷ್ಟಾಚಾರ ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕಾದ ಅಧಿವೇಶನದಲ್ಲಿ ಕೇವಲ ಇಬ್ಬರು ಸಚಿವರು ಪಾಲ್ಗೊಂಡಿರುವುದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಪ್ರಧಾನಿ ಮೋದಿ ಗಂಭೀರ ಚಿಂತನೆ ನಡೆಸಿದ್ದಾರೆ. ರಾಜ್ಯದ ರೈಲ್ವೆ ಯೋಜನೆಗಾಗಿ ಕೇಂದ್ರದಿಂದ ಸಾವಿರಾರು ಕೋಟಿ ನೀಡಲಾಗಿದೆ. ರಸ್ತೆ ನಿರ್ಮಾಣ, ನಿರೋದ್ಯೋಗ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ.

ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ ಪೂರಕವಾಗಿ ಒಂದಷ್ಟು ಯೋಜನೆಗಳು ನನ್ನ ಮನಸ್ಸಿನಲ್ಲಿ ಇದೆ. ಆದರೆ, ಅದನ್ನು ಇಲ್ಲಿಯೇ ಹೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅದು ತನ್ನದೇ ಯೋಜನೆ ಎಂದು ಜಾರಿಗೆ ತರುವ ಸಾಧ್ಯತೆಗಳಿರುವುದರಿಂದ ಪರಿವರ್ತನಾ ಯಾತ್ರೆ ಮುಕ್ತಾಯದ ಸಮಯದಲ್ಲಿ ಬೆಂಗಳೂರಿನಲ್ಲಿ ಈ ಯೋಜನೆಗಳು ಏನು ಎನ್ನುವುದನ್ನು ತಿಳಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಸರ್ಕಾರಿ ಆಸ್ಪತ್ರೆಗಳನ್ನು ಸರಿಯಾಗಿ ನಡೆಸಲು ಆಗದ ಅಸಮರ್ಥ ಸರ್ಕಾರ ಇದೀಗ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುವ ಮೂಲಕ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸುವ ಹುನ್ನಾರ ನಡೆಸುತ್ತಿದೆ. ಸರ್ಕಾರದ ಈ ಪ್ರಯತ್ನವನ್ನು ಖಂಡಿಸುವ ಜತೆಯಲ್ಲಿ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೀಡಿರುವ ವರದಿಯ ಆಧಾರದಲ್ಲಿಯೇ ವಿಧೇಯಕ ಜಾರಿಗೆ ತರುವಂತೆ ಅವರು ಒತ್ತಾಯಿಸಿದರು.

ಕೇರಳದ ಗುರುವಾಯೂರು ಸಮೀಪದಲ್ಲಿ ಆನಂದ ಎನ್ನುವ ಇನ್ನೊಬ್ಬ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ನಡೆದಿದೆ. ಈ ರೀತಿಯ ಹತ್ಯೆ ನಡೆಸಿ ಬಿಜೆಪಿಯನ್ನು ತಡೆಯುತ್ತೇವೆ ಎನ್ನುವ ಪ್ರಯತ್ನಗಳು ಆಡಳಿತರೂಢ ಸಿಪಿಎಂನಿಂದ ಆಗುತ್ತಿದ್ದು, ಕಣ್ಣೂರು ಹಾಗೂ ಮಲ್ಲಾಪುರಂ ಜಿಲ್ಲೆಗಳಲ್ಲಿ ನಡೆಯುತ್ತಿರುವ ಈ ಮಾರಣ ಹೋಮವನ್ನು ಕರಾವಳಿಯ ಉಡುಪಿ ಹಾಗೂ ಮಂಗಳೂರಿನಲ್ಲಿ ನಡೆಯಲು ಬಿಡುವುದಿಲ್ಲ. ಸಿಬಿಐ ಎಫ್ಐಆರ್‌ನಲ್ಲಿ ಹೆಸರಿರುವ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ‘ಕೇಂದ್ರದಲ್ಲಿ ಇರುವಂತೆ ರಾಜ್ಯಕ್ಕೆ ಹೊಸ ಭರವಸೆಯ, ಜನಪರ ಕಾಳಜಿ ಇರುವ ಸರ್ಕಾರ ಬರಬೇಕು. ಮೇಲೆ ವಾಟರ್ ಟ್ಯಾಂಕ್ ಸುಸಜ್ಜಿತವಾಗಿ ಇದ್ದು, ಕೆಳಗೆ ನೀರಿನ ನಳ್ಳಿ ಸರಿಯಾಗಿ ಇರದಿದ್ದರೆ ಹೇಗೆ ದಾಹಗೊಂಡವರಿಗೆ ನೀರು ದೊರಕುವುದಿಲ್ಲವೋ ಅಂತಹ ಪರಿಸ್ಥಿತಿ ಇಲ್ಲಿದೆ. ನಮಗೆ ಸರಿಯಾದ ನೀರು ಬೇಕಾದರೆ ರಾಜ್ಯದ ಜನತೆ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು’ ಎಂದರು.

ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಸಂಸದ ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತೀ ಶೆಟ್ಟಿ, ಮಾಜಿ ಸಂಸದೆ ತೇಜಸ್ವೀನಿ ರಮೇಶ್ ಗೌಡ, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ್‌ ಹೆಗ್ಡೆ, ಪಕ್ಷದ ಪ್ರಭಾರಿ ಕೆ.ಉದಯ್‌ಕುಮಾರ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಿಲಾ ಶೆಟ್ಟಿ, ಮೀನುಗಾರರ ಫೇಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ, ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕಾಂಚನ್, ಪ್ರತಾಪ್ ಹೆಗ್ಡೆ ಮಂದರ್ತಿ, ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಸುಪ್ರೀತಾ ಉದಯ್ ಕುಲಾಲ್, ಗೀತಾಂಜಲಿ ಸುವರ್ಣ, ಪಕ್ಷದ ಪ್ರಮುಖರಾದ ಕಿರಣ್‌ಕುಮಾರ ಕೊಡ್ಗಿ, ಬಿ.ಕಿಶೋರಕುಮಾರ, ಶ್ಯಾಮಲಾ ಕುಂದರ್, ನವೀನ್‌ಕುಮಾರ ಶೆಟ್ಟಿ ಕುತ್ಯಾರು, ಸುರೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.