ADVERTISEMENT

ಅಮಾಸೆಬೈಲು ‘ಸೋಲಾರ್ ಗ್ರಾಮ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:03 IST
Last Updated 23 ಏಪ್ರಿಲ್ 2017, 10:03 IST

ಉಡುಪಿ: ‘ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಗೆ ಸೋಲಾರ್ ದೀಪ ಅಳವಡಿಸಲಾಗಿದ್ದು, ‘ಸೋಲಾರ್ ಗ್ರಾಮ’ ಘೋಷಣೆ ಕಾರ್ಯ ಕ್ರಮ ಇದೇ 27ರಂದು ನಡೆಯಲಿದೆ’ ಎಂದು ಅಮಾಸೆಬೈಲು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟ್ರಸ್ಟ್‌, ಅಮಾಸೆಬೈಲು ಗ್ರಾಮ ಪಂಚಾಯಿತಿ, ಕರ್ಣಾಟಕ ಬ್ಯಾಂಕ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬ ಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಒಟ್ಟು ₹2.13 ಕೋಟಿ ವೆಚ್ಚದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಅಮಾಸೆಬೈಲು, ಮಚ್ಚೆಟ್ಟು, ರಟ್ಟಾಡಿ ಗ್ರಾಮದ 1,497 ಮನೆಗಳಿಗೆ ಸೋಲಾರ್ ದೀಪ ಅಳವಡಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳು ಸೋಲಾರ್ ದೀಪ ಹೊಂದಿವೆ. 27 ಬೀದಿ ದೀಪಗಳನ್ನು ಸಹ ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.

‘ಮನೆಯವರ ಅಗತ್ಯಕ್ಕೆ ತಕ್ಕಂತೆ ಎರಡು ಮತ್ತು ನಾಲ್ಕು ಸೋಲಾರ್ ದೀಪ ನೀಡಲಾಗಿದೆ. ಪೇಜಾವರ ಮಠದ ನೆರವಿನಿಂದ 30 ದೇವಸ್ಥಾನ ಮತ್ತು ಒಂದು ಮಸೀದಿಗೆ ಸೋಲಾರ್ ದೀಪ ಅಳವಡಿಸಲಾಗಿದೆ. ಸೆಲ್ಕೊ ಇಂಡಿಯಾ ಸಂಸ್ಥೆಗೆ ಯೋಜನೆ ಜಾರಿಯ ಜವಾಬ್ದಾರಿ ವಹಿಸಲಾಗಿದ್ದು, ದೀಪ ಅಳವಡಿಸಿ ಐದು ವರ್ಷಗಳ ವರೆಗೆ ಅವರೇ ನಿರ್ವಹಣೆ ಮಾಡುವರು. ಏನಾದರೂ ಸಮಸ್ಯೆ ಕಂಡು ಬಂದರೆ 24 ಗಂಟೆಯೊಳಗೆ ರಿಪೇರಿ ಮಾಡಿಕೊಡಬೇಕು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ. ಸಂಪೂ ರ್ಣ ಸೋಲಾರ್ ಗ್ರಾಮ ಆಗಿರು ವುದರಿಂದ ಅಂತರರಾಷ್ಟ್ರೀಯ ಸೋಲಾರ್ ಪ್ರಶಸ್ತಿಗೆ ಸಹ ಅರ್ಜಿ ಸಲ್ಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಸೋಲಾರ್ ಗ್ರಾಮ ಘೋಷಣೆ ಕಾರ್ಯಕ್ರಮ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ 27ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಮೀನುಗಾರಿಕೆ, ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ಎಲ್. ಮಂಜುನಾಥ ಅಧ್ಯಕ್ಷತೆ ವಹಿಸುವರು. ಸೆಲ್ಕೊ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಹರೀಶ್ ಹಂದೆ ಅವರು ಸೋಲಾರ್ ಗ್ರಾಮ ಘೋಷಣೆ ಮಾಡಿ ದಿಕ್ಸೂಚಿ ಭಾಷಣ ಮಾಡುವರು. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಬೀದಿ ದೀಪ ಹಾಗೂ ಪ್ರತಾಪಚಂದ್ರ ಶೆಟ್ಟಿ ಅವರು ಮನೆಗಳ ಸೋಲಾರ್ ದೀಪ ಉದ್ಘಾಟಿಸುವರು’ ಎಂದರು.ಸೆಲ್ಕೊ ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಕಾಶ್ ಶೆಟ್ಟಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.