ADVERTISEMENT

ಅರಣ್ಯವಾಸಿ 13 ಕುಟುಂಬಗಳಿಗೆ ಸಂಕಷ್ಟ..!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:15 IST
Last Updated 18 ಏಪ್ರಿಲ್ 2017, 7:15 IST

ಸಿದ್ದಾಪುರ:  ಅರಣ್ಯ ಭೂಮಿಯಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಬಾಧ್ಯತೆ ಪ್ರಮಾಣಿಕರಿಸುವ ಗ್ರಾಮ ಅರಣ್ಯ ಸಮಿತಿ ಸಭೆ ನಡೆಯುತ್ತಿಲ್ಲ. ಅರ್ಜಿದಾರರ ದಾಖಲೆ ಪರಿಶೀಲನೆ ನಡೆಸಿ ಐಟಿಡಿಪಿಗೆ ಕಳುಹಿಸದ ಪರಿಣಾಮ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಕುಟುಂಬಗಳಿಗೆ ಶಿಫಾರಸು ದೊರೆಯದೆ ಸಂಕಷ್ಟದಲ್ಲಿವೆ.
ಹಲವು ವರ್ಷಗಳಿಂದ ಅರಣ್ಯಭೂಮಿಯಲ್ಲಿ ವಾಸ ವಿರುವ ಬುಡಕಟ್ಟು ಜನಾಂಗ ಅಥವಾ ಅರಣ್ಯವಾಸಿಗಳ ಹಕ್ಕುಬಾಧ್ಯತೆಯನ್ನು ಆಯಾ ಗ್ರಾಮ ಪಂಚಾಯಿತಿಯ ಗ್ರಾಮ ಅರಣ್ಯ ಸಮಿತಿಯು ತಾಲೂಕು ಅಥವಾ ಜಿಲ್ಲಾ ಅರಣ್ಯ ಸಮಿತಿಗೆ ಶಿಫಾರಸು ಮಾಡುತ್ತದೆ.

 ಗ್ರಾಮ ಮಟ್ಟದ ಸಮಿತಿಗೆ ಆಯಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಕುಂದಾಪುರ ತಾಲ್ಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಅರಣ್ಯ ಸಮಿತಿ ಅಸ್ತಿತ್ವದಲ್ಲಿದ್ದರೂ ಅರಣ್ಯ ಪಾಲಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡುವೆ ಗೊಂದಲದಿಂದಾಗಿ ಸುಮಾರು 13 ಕುಟುಂಬಗಳ ಅರ್ಜಿಗೆ ಶಿಫಾರಸು ದೊರೆಯದೆ ಸಂಕಟ ಅನುಭವಿಸುವಂತಾಗಿದೆ.

‘ಬೆಳ್ವೆ ಹಾಗೂ ಅಲ್ಬಾಡಿ ಗ್ರಾಮ ಅರಣ್ಯ ಸಮಿತಿಗೆ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಸೂಕ್ತ ನಿರ್ದೇಶನವಿಲ್ಲದ ಕಾರಣ ಅರ್ಜಿ ಶಿಫಾರಸು ಮಾಡಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಮೀನಮೇಷ ಎಣಿಸುತ್ತಿದ್ದಾರೆ. ಈ ಹಿಂದೆ ಸುಮಾರು 82 ಅರ್ಜಿಗೆ ಶಿಫಾರಸು ಮಾಡಲಾಗಿದೆ. ಆದರೆ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರ ಗೊಂದಲದಿಂದಾಗಿ ಬಾಕಿಯಿರುವ 13 ಅರ್ಜಿಗೆ ಶಿಫಾರಸು ದೊರೆತಿಲ್ಲ. ಅಧ್ಯಕ್ಷರನ್ನು ವಿಚಾರಿಸಿದಾಗ ಅರಣ್ಯ ಪಾಲಕರು ಶಿಫಾರಸು ಮಾಡುತ್ತಾರೆ ಎನ್ನುತ್ತಿದ್ದಾರೆ’ ಎಂದು ಸಂತ್ರಸ್ತರು ಹೇಳಿದ್ದಾರೆ.

ADVERTISEMENT

‘ಅಂಡಾರುಕೊಡ್ಲು, ಚಕ್ಕಾರಮಕ್ಕಿ ಪ್ರದೇಶದಲ್ಲಿ ಸುಮಾರು 80 ವರ್ಷಗಳ ಹಿಂದಿನ ಮೂಲ ನಾಗ ದೇವರ ಕಲ್ಲುಗಳಿವೆ. ಯಶೋದಾ ಎಂಬವರ ಮನೆಯಲ್ಲಿ 65 ವರ್ಷದ ಹಿಂದಿನ ಬೃಹತ್ ತೆಂಗಿನ ಮರ, ಚಕ್ಕಾರಮಕ್ಕಿಯಲ್ಲಿ ಜೈನವಂಶದ ಲಿಪಿ ಹೊಂದಿರುವ ಕಲ್ಲು, ಗಂಟುಬೀಳಿನಲ್ಲಿ ನಂದಿಬ್ರಹ್ಮನ ಕಲ್ಲು ಇತ್ಯಾದಿ ಮೂಲ ದಾಖಲೆಗಳು ಅರಣ್ಯವಾಸಿಗಳು ಬಹಳಷ್ಟು ಹಿಂದಿನಿಂದ ಜೀವನ ನಡೆಸುತ್ತಿದ್ದರು ಎನ್ನುವುದರ ಸಾಕ್ಷಿಯಾಗಿದೆ. ಈಚೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾದಾಗ ಅರಣ್ಯವಾಸಿಗಳು ಎನ್ನುವುದಕ್ಕೆ ಕೇವಲ ಎರಡು ದಾಖಲೆಗಳಿದ್ದರೆ ಸಾಕು ಎಂದಿದ್ದರು. ದಾಖಲೆಗಳಿದ್ದರೂ ಅರ್ಜಿ ಪರಿಶೀಲನೆ ನಡೆಸುತ್ತಿಲ್ಲ’ ಎಂಬುದು ಸ್ಥಳೀಯರ ದೂರು.

‘ಅಬ್ಬು ಪೂಜಾರ್ತಿ, ಶಾಂತ ಬಾಯಿ, ಕರ್ಕು ಪೂಜಾರ್ತಿ, ಬಾಬಿ ಪೂಜಾರ್ತಿ, ಕಾವೇರಿ, ಶಂಕರ ಪೂಜಾರಿ, ವನಜಾ, ಸುಶೀಲಾ, ವಿಠಲ ನಾಯ್ಕ, ಕಾವೇರಿ ಮರಕಾಲ್ತಿ, ಬಸವ ಕುಲಾಲ್, ದಯಾನಂದ ಪೂಜಾರಿ, ರವಿ ಪೂಜಾರಿ ಅವರು ದಾಖಲೆಗಳೊಂದಿಗೆ ಐಟಿಡಿಪಿಗೆ ಅರ್ಜಿ ಸಲ್ಲಿಸಿದರೆ, ಗ್ರಾಮ ಅರಣ್ಯ ಸಮಿತಿಯ ಶಿಫಾರಸು ಅಗತ್ಯ ಎಂದು ತಿಳಿಸಿದ್ದಾರೆ. ಗ್ರಾಮ ಅರಣ್ಯ ಸಮಿತಿ ಸಭೆ ಕರೆಯದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಪ್ರಭಾಕರ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.