ADVERTISEMENT

ಆದೇಶ ವಾಪಸ್ ಪಡೆಯುವಂತೆ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:55 IST
Last Updated 8 ನವೆಂಬರ್ 2017, 9:55 IST

ಉಡುಪಿ: ಹಳೆಯ ಟ್ಯಾಕ್ಸಿ– ಮ್ಯಾಕ್ಸಿಕ್ಯಾಬ್‌ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವಂತೆ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮನ್ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ನೇತೃತ್ವದಲ್ಲಿ ಮಣಿಪಾಲದ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಟ್ಯಾಕ್ಸಿ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ ಇಲ್ಲದಿರುವಾಗ ಟೂರಿಸ್ಟ್ ವಾಹನಗಳಿಗೆ ಮಾತ್ರ ಏಕೆ ಎಂದು ಅರ್ಥವಾಗುತ್ತಿಲ್ಲ. ಸರ್ಕಾರ ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಅಸೋಸಿಯೇಶನ್ ಅಧ್ಯಕ್ಷ ಕೆ. ರಘುಪತಿಭಟ್ ಮಾತನಾಡಿ, ಹೆದ್ದಾರಿಗಳಲ್ಲಿ ಇತರ ವಾಹನಗಳೊಂದಿಗೆ ಟೂರಿಸ್ಟ್‌ ವಾಹನಗಳೂ ವೇಗವಾಗಿ ಸಂಚರಿಸಬೇಕಾಗುತ್ತದೆ. ಕೇವಲ 80 ಕಿ.ಮೀ ಮಿತಿಗೊಳಿಸಿದರೆ ಗ್ರಾಹಕರಿಗೆ ತೊಂದರೆ ಆಗುತ್ತದೆ ಹಾಗೂ ಅದರಿಂದಾಗಿಯೇ ಅಪಘಾತವಾದರೂ ಆಶ್ಚರ್ಯಪಡಬೇಕಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆರ್. ಅಶೋಕ್ ಅವರು ಈ ಆದೇಶದಿಂದ ವಿನಾಯಿತಿ ನೀಡಿದ್ದರು ಎಂದು ಹೇಳಿದರು.

ADVERTISEMENT

ವೇಗ ನಿಯಂತ್ರಕ ಕಡ್ಡಾಯ ಮಾಡಿರುವುದದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿರುವ ಅನುಮಾನವೂ ಇದೆ. ಏಕೆಂದರೆ ಆ ಸಾಧನ ತಯಾರಿಸುವ ಹತ್ತಾರು ಕಂಪೆನಿಗಳಿದ್ದರೂ ಕೇವಲ 2 ಕಂಪೆನಿಗಳಿಂದ ಮಾತ್ರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ವೇಗ ನಿಯಂತ್ರಕದ ಬೆಲೆ ₹3,000 ಇದ್ದರೆ, ಆ ಕಂಪೆನಿಗಳು ₹16,000 ನಿಗದಿಪಡಿಸಿವೆ. ಸಾರಿಗೆ ಸಚಿವರ ಮೂಲಕ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಕಟಪಾಡಿ, ಮುಖಂಡರಾದ ಮಹೇಶ್ ಕೋಟ್ಯಾನ್, ಮಹೇಶ್ ಪೂಜಾರಿ, ಜಯ ಪೂಜಾರಿ, ಲಿಯೊ ಫರ್ನಾಂಡಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.