ADVERTISEMENT

ಆರೂರು ಗ್ರಾಮ ಪಂಚಾಯಿತಿಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 8:48 IST
Last Updated 20 ಸೆಪ್ಟೆಂಬರ್ 2017, 8:48 IST

ಬ್ರಹ್ಮಾವರ : ಕೇಂದ್ರ ಸರ್ಕಾರದ ಅನೇಕ ಜನಪರ ಯೋಜನೆಗಳು ಇಂದು ರಾಜ್ಯ ಸರ್ಕಾರದ್ದೆಂದು ಬಿಂಬಿತವಾಗಿದೆ. ಜನರಲ್ಲಿರುವ ಈ ತಪ್ಪು ಕಲ್ಪನೆಯನ್ನು ತೊಡೆದು ಹಾಕಲು ಕಾರ್ಯಕರ್ತರು ಶ್ರಮಿಸಬೆಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಆರೂರು ಗ್ರಾಮ ಪಂಚಾಯಿತಿಗೆ ಸೋಮವಾರ ಅವರು ಭೇಟಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಉಜ್ವಲ ಉಚಿತ ಗ್ಯಾಸ್ ವಿತರಣೆಯನ್ನು ಮಾಡಿ ಮಾತನಾಡಿದರು.
ಪಡಿತರ ವಿತರಣೆಯಲ್ಲಿ ಬಹುತೇಕ ಪಾಲು ಕೇಂದ್ರ ಸರ್ಕಾರದ್ದಾಗಿದ್ದರೂ, ರಾಜ್ಯ ಸರ್ಕಾರವೇ ನೀಡುತ್ತಿದೆ ಎಂದು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ.

ದೀನದಯಾಳ್‌ ಉಚಿತ ವಿದ್ಯುತ್ತೀಕರಣದಿಂದ ಗ್ರಾಮಗಳ ಕಡುಬಡವರಿಗೂ ವಿದ್ಯುತ್ ಸೌಲಭ್ಯ ದೊರಕಿದೆ. 14ನೇ ಹಣಕಾಸಿನ ಯೋಜನೆಯನ್ವಯ ಪಂಚಾಯಿತಿಗೆ ನೇರವಾಗಿ ಕೇಂದ್ರ ಸರ್ಕಾರದ ಮೂಲಕ ಅನುದಾನ ಸಿಗುವುದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ADVERTISEMENT

ಹಳ್ಳಿಗಳ ಪ್ರತಿ ಮನೆಯನ್ನು ಹೊಗೆ ಮುಕ್ತ ಮನೆಯನ್ನಾಗಿ ಪರಿವರ್ತಿಸಿ ಮಹಿಳೆಯರ ಆರೋಗ್ಯ ಸುಧಾರಿಸುವ ಯೋಜನೆಯಾದ ಪ್ರಧಾನ ಮಂತ್ರಿ ಮೋದಿಯವರ ಮಹತ್ವಾಕಾಂಕ್ಷಿ ಉಜ್ವಲ ಉಚಿತ ಗ್ಯಾಸ್ ವಿತರಣೆ ಕಾರ್ಯಕ್ರಮದಿಂದ ದೇಶದ ಕೋಟ್ಯಾಂತರ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದಯ್ ಕುಮಾರ್ ಫ್ಯಾಮಿಲಿ ಟ್ರಸ್ಟ್ ನ ಉದಯ್ ಕುಮಾರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಗ, ಶ್ಯಾಮಲ ಕುಂದರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.