ADVERTISEMENT

ಆಳವಾದ ಸಂಶೋಧನೆ ನಡೆಯಲಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:53 IST
Last Updated 8 ಜುಲೈ 2017, 9:53 IST
ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಜವಾಹರಲಾಲ್‌ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಸಂಶೋಧಕಿ ಧೀಮಹಿ ಅವರನ್ನು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಸನ್ಮಾನಿಸಿದರು.                                                                      ಪ್ರಜಾವಾಣಿ ಚಿತ್ರ
ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಜವಾಹರಲಾಲ್‌ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಸಂಶೋಧಕಿ ಧೀಮಹಿ ಅವರನ್ನು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಸನ್ಮಾನಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ದೇಶದ ಬೆಳವಣಿಗೆಗೆ ಪೂರಕವಾದ ಯುವ ಶಕ್ತಿಯನ್ನು ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಜವಾಹರಲಾಲ್‌ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಸಂಶೋಧಕಿ ಧೀಮಹಿ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ವಿದ್ಯಾರ್ಥಿಗಳನ್ನು ಶಕ್ತಿಯಾಗಿ ರೂಪುಗೊಳಿಸಲು ಬೇಕಾಗಿರುವ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗಳು ನೀಡಬೇಕು. ಋಷಿ ಮುನಿಗಳು ಜಪ– ತಪ ಮಾಡುವುದರ ಜೊತೆಗೆ ಖಗೋಳಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದ ಅವರು ವಿಷಯಗಳನ್ನು ನಿಖರವಾಗಿ ಹೇಳುತ್ತಿದ್ದರು.

ಈಗ ವಿಜ್ಞಾನಿಯೊಬ್ಬರು ಸಂಶೋಧನೆ ಮಾಡುತ್ತಾರೆ, ಆ ನಂತರ ಇನ್ನೊಬ್ಬರು ಮುಂದುವರೆಸುತ್ತಾರೆ. ಒಂದು ವಿಷಯದ ಸಂಶೋಧನೆಯನ್ನು ಪೂರ್ಣವಾಗಿ ಮಾಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಧೀಮಹಿ, ‘ಕಾಲೇಜಿನ ವಾತಾರಣವೇ ನನ್ನನ್ನು ಸಂಶೋಧನಾ ಕ್ಷೇತ್ರಕ್ಕೆ ಕಾಲಿಡುವಂತೆ  ಪ್ರೋತ್ಸಾಹಿಸಿತು. ಪ್ರೊ. ಯು.ಆರ್. ರಾವ್ ಸೇರಿದಂತೆ ಹಲವಾರು ವಿಜ್ಞಾನಿಗಳು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಅವರನ್ನು ನೋಡುವ ಅವಕಾಶ ಸಿಕ್ಕಿತು. ಅವರಿಂದ ನಾನು ಸಹ ಪ್ರೇರಣೆ ಪಡೆದೆ. ಕಾಲೇನಿನ ಶಿಕ್ಷಕರು ಸಹ ಸ್ಫೂರ್ತಿ ತುಂಬಿದರು’ ಎಂದರು.

‘ನಾಟಕ, ಹಾಡು ನೃತ್ಯ ಮುಂತಾದ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ಓದುವಾಗ ಮಾತ್ರ ಸಂಪೂರ್ಣ ಏಕಾಗ್ರತೆಯಿಂದ ಓದುತ್ತಿದ್ದೆ. ಯಾವುದೇ ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಅದಮಾರು ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಪದವಿ ಪಡೆಯಬೇಕು ಎಂಬುದು ಸ್ವಾಮೀಜಿ ಅವರ ಅಭಿಲಾಷೆಯಾಗಿದೆ. ಈ ವರ್ಷ 6 ಮಂದಿ ವಿದ್ಯಾರ್ಥಿಗಳು ಅಂತಹ ಸಾಧನೆ ಮಾಡಿದ್ದಾರೆ.

ಮುಂದಿನ ವರ್ಷ ಈ ಸಂಖ್ಯೆ ಹೆಚ್ಚಾಗಲಿ. ಭೌತಶಾಸ್ತ್ರ ವಿಭಾಗ ಮಾತ್ರವಲ್ಲ ಎಲ್ಲ ವಿಭಾಗದ ವಿದ್ಯಾರ್ಥಿಗಳು ಇಂತಹ ದೊಡ್ಡ ಸಾಧನೆ ಮಾಡುವಂತಾಗಲಿ. ಶಿಸ್ತು, ಸಂಸ್ಕಾರ ಮತ್ತು ಸಂಸ್ಕೃತಿ ಇದ್ದಾಗ ಮಾತ್ರ ವಿದ್ಯಾರ್ಥಿ ಯಶಸ್ಸು ಪಡೆಯಲು ಸಾಧ್ಯ ಎಂದರು.ಪ್ರಾಂಶುಪಾಲ ಡಾ. ಬಿ. ಜಗದೀಶ್ ಶೆಟ್ಟಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ಭಟ್ ಇದ್ದರು. ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಸುಪ್ರೀತ ಪ್ರಾರ್ಥಿಸಿದರು, ಉಪನ್ಯಾಸನಿ ದಿವ್ಯಾ ವಿ ನಿರೂಪಿಸಿದರು.

* * 
ಭಾರತೀಯ ತಂತ್ರಜ್ಞಾನ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆಗಳಿಗೆ ಪ್ರವೇಶ ನೀಡಲು ನಡೆಸುವ ಜೆಎಎಂ (ಜಾಮ್‌) ಪರೀಕ್ಷೆ ಸ್ವಲ್ಪ ಕಷ್ಟ ಇರುತ್ತದೆ, ಆದರೂ ಗೆಲ್ಲಬಹುದು.
ಧೀಮಹಿ,
ಸಂಶೋಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.