ADVERTISEMENT

ಈಜುಕೊಳಕ್ಕೆ ₹1.61 ಕೋಟಿಯ ಚಾವಣಿ  

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 9:04 IST
Last Updated 19 ಸೆಪ್ಟೆಂಬರ್ 2017, 9:04 IST
ಉಡುಪಿ ನಗರದ ಅಜ್ಜರಕಾಡಿನಲ್ಲಿರುವ ಈಜುಕೊಳ.   ಪ್ರಜಾವಾಣಿ ಚಿತ್ರ
ಉಡುಪಿ ನಗರದ ಅಜ್ಜರಕಾಡಿನಲ್ಲಿರುವ ಈಜುಕೊಳ. ಪ್ರಜಾವಾಣಿ ಚಿತ್ರ   

ಉಡುಪಿ: ನಗರದ ಒಳಾಂಗಣ ಕ್ರೀಡಾಂ ಗಣದ ಪಕ್ಕದಲ್ಲಿರುವ ಈಜುಕೊಳಕ್ಕೆ ₹1.61 ಕೋಟಿ ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲು ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ನಿರ್ಧರಿಸಿದೆ. 25x25 ಮೀಟರ್ ಉದ್ದದ ಈಜು ಕೊಳವನ್ನು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಜಿಲ್ಲೆಯಲ್ಲಿ ಸುಮಾರು ಆರು ತಿಂಗಳು ಮಳೆಗಾಲ ಇರುವುದರಿಂದ ವರ್ಷ ಪೂರ್ತಿ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದ ರಿಂದಾಗಿ ಕ್ರೀಡಾಪಟುಗಳಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಈಜುಕೊಳ ಬಳಕೆಗೆ ಶುಲ್ಕ ನಿಗದಿ ಮಾಡಲಾಗಿದ್ದು, ಆರು ತಿಂಗಳ ಕಾಲ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ ಎಲ್ಲ ಅಂಶವನ್ನು ಪರಿ ಗಣಿಸಿರುವ ಇಲಾಖೆ ಮೇಲ್ಚಾವಣಿ ನಿರ್ಮಾಣ ಮಾಡುವ ಮೂಲಕ ವರ್ಷ ಪೂರ್ತಿ ಈಜುಕೊಳ ಬಳಕೆಯಾಗುವಂತೆ ಮಾಡಲು ಮುಂದಾಗಿದೆ.

ಸಮಸ್ಯೆಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಗಮ ನಕ್ಕೆ ತರಲಾಗಿತ್ತು. ಅವರ ಸೂಚನೆ ಮೇರೆಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆಡಳಿ ತಾತ್ಮಕ ಅನುಮೋದನೆ ಸಿಕ್ಕಿದೆ. ಜಿಲ್ಲೆಗೆ ಈಜು ಅಕಾಡೆಮಿ ಮಂಜೂರಾಗಿದ್ದು, ಅದಕ್ಕೆ ನೀಡುವ ಅನುದಾನವನ್ನೇ ಬಳಸಲು ಸಹ ನಿರ್ಧರಿಸಲಾಗಿದೆ. ಮೇಲ್ಚಾವಣಿ ನಿರ್ಮಾಣವಾದರೆ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಇಲಾಖೆಗೆ ಹೆಚ್ಚಿನ ಆದಾಯವೂ ಬರಲಿದೆ.

ADVERTISEMENT

2 ತಿಂಗಳ ಆದಾಯ: ಈಜುಕೊಳ ನಿರ್ಮಾಣವಾದ ನಂತರ ಸತತ ಎರಡು ವರ್ಷಗಳ ಕಾಲ ಅದನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ತಿಂಗಳಿಗೆ ಕೇವಲ ₹16,500 ಮೊತ್ತವನ್ನು ಸಂಸ್ಥೆ ಕ್ರೀಡಾ ಇಲಾಖೆಗೆ ನೀಡುತ್ತಿತ್ತು. ₹2 ಕೋಟಿ ವೆಚ್ಚದ ಈಜುಕೊಳ ನಿರ್ಮಾಣ ಮಾಡಿದರೂ ತೀರ ಕಡಿಮೆ ಆದಾಯ ಬರುತ್ತಿದ್ದ ಕಾರಣ ಅದರಲ್ಲಿ ಬದಲಾವಣೆ ತರಲು ಪ್ರಮೋದ್ ಮಧ್ವರಾಜ್ ನಿರ್ಧರಿಸಿದ್ದರು. ಖಾಸಗಿ ವ್ಯಕ್ತಿಗಳಿಗೆ ನೀಡುವ ಬದಲು ಇಲಾಖೆಯೇ ನಿರ್ವ ಹಣೆ ಮಾಡಬೇಕು ಎಂದು ಆದೇಶ ನೀಡಿದ್ದರು. ಅದರಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲಾಖೆಯೇ ಈಜು ಕೊಳದ ಉಸ್ತುವಾರಿ ಹಾಗೂ ನಿರ್ವಹಣೆ ನೋಡಿಕೊಂಡಿದ್ದು ₹14 ಲಕ್ಷ ಆದಾಯ ಬಂದಿದೆ.

ಒಂದು ಗಂಟೆ ಕಾಲ ಈಜಾಡಲು ₹30 ಶುಲ್ಕ ಕಟ್ಟಬೇಕಾಗುತ್ತದೆ. 21 ದಿನಗಳ ಈಜು ತರಬೇತಿಗೆ ₹3 ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ವರ್ಷ ಪೂರ್ತಿ ಈಜುಕೊಳ ಬಳಕೆಯಾದರೆ ಭಾರಿ ಮೊತ್ತದ ಆದಾಯ ಇಲಾ ಖೆಗೆ ಬರುವ ನಿರೀಕ್ಷೆ ಇದೆ.

‘ಕರಾವಳಿಯಲ್ಲಿ ವರ್ಷದ ಆರು ತಿಂಗಳು ಮಳೆ ಇರುತ್ತದೆ. ಈ ಅವಧಿಯಲ್ಲಿ ಈಜುಕೊಳ ಬಳಸಲಾಗದು. ಇದೇ ಕಾರಣಕ್ಕೆ ಸಚಿವರು ಮೇಲ್ಛಾವಣಿ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಈಜು ಪಟುಗಳು ಹಾಗೂ ಕ್ರೀಡಾಪಟುಗಳಿಗೆ ತುಂಬ ಅನುಕೂಲವಾಗಲಿದೆ’ ಎನ್ನುತ್ತಾರೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.