ADVERTISEMENT

ಉಚ್ಚಿಲದಲ್ಲಿ ‘ಸ್ಮಶಾನ ರಾಜಕೀಯ’!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 10:55 IST
Last Updated 21 ಆಗಸ್ಟ್ 2014, 10:55 IST

ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸ್ಮಶಾನ ಇರುವಾಗಲೇ ಮತ್ತೊಂದು ಸ್ಮಶಾನ  ನೀಡಲು ಮುಂದಾ­ಗಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಬಡಾ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಅಧೀನ­ಕ್ಕೊಳಪಟ್ಟು ಈಗಾಗಲೇ ಒಂದು ಹಿಂದೂ ಸ್ಮಶಾನ  ಇದೆ. ಆದರೆ ಅದು ಒಂದೇ ಸಮಾಜದವರು ಉಪ­ಯೋಗಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಎಲ್ಲ ಸಮಾಜದವರ ಉಪಯೋಗಕ್ಕೆ ಅವಕಾಶ ನೀಡಬೇಕು ಎಂದು ಹಲವಾರು ಬಾರಿ ಜಿಲ್ಲಾಡಳಿತ ಸಹಿತ ಜನಪ್ರತಿ­ನಿಧಿಗಳಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರತಿಭಟನೆಯೂ ನಡೆದಿತ್ತು.
ಈ ವೇಳೆ ಗ್ರಾಮಸ್ಥರ ಮಧ್ಯೆ ಪರ ಹಾಗೂ ವಿರೋಧ ವ್ಯಕ್ತವಾಗಿತ್ತು. ಉಚ್ಚಿಲ ಸ್ಮಶಾನ  ಸಮಸ್ಯೆಯ ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದ್ದು ಮಾತ್ರವಲ್ಲದೆ ಜಿಲ್ಲಾದ್ಯಂತ ಸುದ್ದಿಗೆ ಕಾರಣವಾಗಿತ್ತು.

ಬಳಿಕ ಜಿಲ್ಲಾಡಳಿತವು ನಿರ್ಣಯವೊಂದನ್ನು ಜಾರಿಮಾಡಿ ಬಡಾಗ್ರಾಮ ಕಟ್ಟಿಂಗೇರಿ ನೀರಾವರಿ ಪ್ರದೇಶದಲ್ಲಿ ಮತ್ತೊಂದು ಸ್ಮಶಾನವನ್ನು ಮಾಡ­ಲೆಂದು ತೀರ್ಮಾನಿಸಿದ್ದ ಪರಿಣಾಮ ಪ್ರತಿಭಟನೆ ತಣ್ಣಗಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ­ವೊಂದನ್ನು ಅಂಗೀಕರಿಸಿ, ಕಟ್ಟಿಂಗೇರಿ ಬಳಿ ಇನ್ನೊಂದು ಸ್ಮಶಾನ­ವನ್ನು ನಿರ್ಮಿಸಲೆಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

ಇದೀಗ ಎರಡೂ ಸ್ಮಶಾನವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ನಿರ್ಮಿತಿ ಕೇಂದ್ರಕ್ಕೆ ಆದೇಶಿಸಿ, ಹಣ ಮಂಜೂರಾತಿ ಮಾಡಿದೆ. ಈ ಕಾರಣದಿಂದ ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ಪ್ರಾರಂಭಿಸಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯರು ದಿಢೀರ್ ಪ್ರತಿಭಟನೆ ಮಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಕಟ್ಟಿಂಗೇರಿ ಕೆರೆಯ ಬಳಿ ಸ್ಮಶಾನ  ಮಾಡಬಾರದೆಂದು ಆಗ್ರಹಿಸಿದಾರೆ. ಆದರೂ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ಎರಡನೇ ಸ್ಮಶಾನ  ಮಾಡಲು ಹೊರಟರೆ ತೀವ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.