ADVERTISEMENT

ಉಜ್ವಲ ಯೋಜನೆ: ಜಿಲ್ಲೆಯಲ್ಲಿ 3,200 ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 9:48 IST
Last Updated 5 ಜುಲೈ 2017, 9:48 IST

ಕುಂದಾಪುರ: ದೇಶದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಕುಟುಂಬ ಅನಿಲ ಬಳಕೆದಾರರು ಸಹಾಯಧನ ತಿರಸ್ಕರಿಸಿ ದ್ದಾರೆ. ಹೀಗಾಗಿ, ಅನಿಲ ಕಂಪೆನಿಗಳ ಸಹಕಾರದಿಂದ ಕೇಂದ್ರ ಸರ್ಕಾರ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ  ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಬೋರ್ಡ್‌ ಹೈಸ್ಕೂಲಿನ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಒಟ್ಟು 35 ಲಕ್ಷ ಜನರಿಗೆ ಈ ಯೋಜನೆಯಿಂದ ಉಪಯೋಗ ಆಗಲಿದೆ. ಕುಂದಾಪುರ ತಾಲ್ಲೂಕಿನ 1,000 ಸೇರಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 3,200ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ದೊರಕಲಿದೆ. ಇದರ ಜತೆಯಲ್ಲಿ ಸುರಕ್ಷತೆಗಾಗಿ ₹ 6 ಲಕ್ಷ ಮೌಲ್ಯದ ಜೀವವಿಮೆಯನ್ನು ನೀಡಲು ತೀರ್ಮಾನಿಸಲಾಗಿದೆ.

ADVERTISEMENT

ಸೌದೆ ಒಲೆಯಿಂದ ಉಂಟಾಗುವ ಹೊಗೆಯಿಂದಾಗಿ ಬಡ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವ ಉದ್ದೇಶದಿಂದಾಗಿ ಬಡವರಿಗಾಗಿ ಜಾರಿಗೆ ತಂದಿರುವ ಮಹತ್ವಾಂಕ್ಷೆ ಯೋಜನೆಯ ಪ್ರಯೋಜನದ ಬಡವರಿಗೆ ದೊರಕಬೇಕು ಎಂದರು.

ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ  ವಸಂತಿ ಮೋಹನ್ ಸಾರಂಗ್,  ಉಪಾಧ್ಯಕ್ಷ ರಾಜೇಶ ಕಾವೇರಿ, ಇಂಡೆನ್ ಆಯಿಲ್ ಕಾರ್ಪೊ ರೇಶನ್‌ ಕಂಪೆನಿಯ ಅಧಿಕಾರಿ ಮನೀಷ್ ತ್ಯಾಗಿ, ಉದ್ಯಮಿಗಳಾದ ದಿನೇಶ್‌ ಪುತ್ರನ್‌ ಉಡುಪಿ, ಕೃಷ್ಣಮೂರ್ತಿ ಕಾರ್ಕಳ, ಎಸ್‌.ನಿತ್ಯಾನಂದ ಪೈ ಕಾರ್ಕಳ, ವೆಂಕಟೇಶ ಕಿಣಿ ಬೈಂದೂರು, ಸತೀಶ್‌ ಕಾವೇರಿ, ಎಂ.ಜೆ ರಾಜೇಶ್‌ ಗಂಗೊಳ್ಳಿ, ತಿಂಗಳೆ ವಿಕ್ರಮಾರ್ಜುನ್‌ ಹೆಗ್ಡೆ, ಕಾಡೂರು ಸುರೇಶ ಶೆಟ್ಟಿ ಇದ್ದರು. ಉದ್ಯಮಿ ಪ್ರವೀಣ ಕುಮಾರ್ ಟಿ. ಸ್ವಾಗತಿಸಿದರು. ದಿನಕರ ಶೆಣೈ ಅಡುಗೆ ಅನಿಲ ಬಳಕೆಯ ಸುರಕ್ಷತೆಯ ಮಾಹಿತಿ ನೀಡಿದರು. ಅಕ್ಷತಾ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.