ADVERTISEMENT

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆಗೆ ಕೈಕೊಟ್ಟ ಬಿಜೆಪಿ

ಲಾಲಾಜಿ ಮೆಂಡನ್ ಕಾಪು ಬಿಜೆಪಿ ಅಭ್ಯರ್ಥಿ!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:54 IST
Last Updated 21 ಏಪ್ರಿಲ್ 2018, 11:54 IST

ಶಿರ್ವ:  ವಿಧಾನಸಭಾ ಚುನಾವಣೆಗೆ ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷವು ಕಾಪುಕ್ಷೇತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರ ಸಾಕಷ್ಟು ಗುಟ್ಟಾಗಿಟ್ಟು ಕೊನೆಗೂ,  ನಿರೀಕ್ಷೆಯಂತೆ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ನೀಡಿದೆ.

ಕಾಪು ಕ್ಷೇತ್ರದಲ್ಲಿ ಮೋಗವೀರ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ, ಟಿಕೆಟ್ ಪ್ರಬಲ ಆಕಾಂಕ್ಷಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಬಿಜೆಪಿ ನಿರಾಸೆ  ಉಂಟು ಮಾಡಿದೆ. ಯುವ ಮೀನುಗಾರ ಮುಖಂಡ ಯಶ್‍ಪಾಲ್ ಸುವರ್ಣ ಅವರ ಬದಲು ಲಾಲಾಜಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಹಲವು ದಿನಗಳಿಂದ ಟಿಕೆಟ್ ರೇಸ್‍ನಲ್ಲಿದ್ದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಬಿಜೆಪಿ ಮತ್ತೆ ಕೈಕೊಟ್ಟಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿ, ಕೊನೆ ಕ್ಷಣದಲ್ಲಿ ಕೈಕೊಟ್ಟಿತ್ತು. ಕಾಂಗ್ರೆಸ್‍ನಿಂದ ವಿನಯಕುಮಾರ್ ಸೊರಕೆ ಅವರಿಗೆ ಅವಕಾಶ ನೀಡಿದ್ದರಿಂದ ಸೊರಕೆ ಗೆಲುವು ಸಾಧಿಸಿದ್ದರು.

ADVERTISEMENT

ಸಮಾಜ ಸೇವಕ, ಉದ್ಯಮಿಯಾಗಿ ಗುರುತಿಸಿಕೊಂಡು ಏಕಾಏಕಿ ರಾಜಕೀಯಕ್ಕಳಿದು ಕೊನೆ ಕ್ಷಣದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಕೈತಪ್ಪಿದ ಕಾರಣ ಹತಾಶರಾಗಿದ್ದ ಸುರೇಶ್ ಶೆಟ್ಟಿ ಗುರ್ಮೆ ಬಿಜೆಪಿ ಕಡೆಗೆ ಮುಖ ಮಾಡಿದ್ದರು. ಐದು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಕಳೆದ ಬಾರಿ ಜಿಲ್ಲಾ ಪಂಚಾಯಿತಿ , ಗ್ರಾಮ ಪಂಚಾಯಿತಿ ಚುನಾವಣೆಗಳ ನಡೆದ ಸಂದರ್ಭ ಸುರೇಶ್ ಶೆಟ್ಟಿ ಗುರ್ಮೆ ಅವರ ಸಂಘಟನಾತ್ಮಕ ಗುಣ ಬಿಜೆಪಿಗೆ ಸಾಕಷ್ಟು ಲಾಭ ತಂದಿತ್ತು.

ಸುರೇಶ್ ಶೆಟ್ಟಿ ಗುರ್ಮೆ ಅವರ ವರ್ಚಸ್ಸು ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆ ಗಿಟ್ಟಿಸಿಕೊಟ್ಟಿತ್ತು. ಈ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಗಳ  ಸುರೇಶ್ ಶೆಟ್ಟಿ ಗುರ್ಮೆ ಇದ್ದರು. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದಲೂ ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಟಿಕೆಟ್‌ ಸಿಕ್ಕಿತ್ತು ಎನ್ನುವಷ್ಟರಲ್ಲಿ ಕೈ ತಪ್ಪಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

23ರಂದು ನಾಮಪತ್ರ ಸಲ್ಲಿಕೆ: ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ನನ್ನನ್ನು ಅಧಿಕೃತವಾಗಿ ಘೋಷಿಸಿದೆ. 23 ರಂದು ನಾಮಪತ್ರ ಸಲ್ಲಿಕೆ ಮಾಡುವೆ ಎಂದು ಲಾಲಾಜಿ ಆರ್. ಮೆಂಡನ್ ಹೇಳಿದರು.

ಯಾವುದೇ ಹುದ್ದೆ ನಿರೀಕ್ಷೆ ಇಲ್ಲ

ಕಾಪು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ನಿರಾಸೆ ಸಹಜವಾಗಿಯೇ ಆಗಿದೆ. ಉಡುಪಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಹಾಗೂ ಕಾಪುವಿನಲ್ಲಿ ಮೊಗವೀರ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡವಿದ್ದ ಕಾರಣ ಮೋಗವೀರ ಸಮುದಾಯದ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಯಾವುದೇ ಹುದ್ದೆ ದೊರಕುವ ನಿರೀಕ್ಷೆ ಅಥವಾ ಭರವಸೆ ನನಗಿಲ್ಲ. ಎರಡು ಬಾರಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು, ಅದೃಷ್ಟ ಒಲಿದು ಬರಲಿಲ್ಲ. ನನ್ನ ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಒಂದೆರಡು ದಿನಗಳಲ್ಲೇ ಬಹಿರಂಗಪಡಿಸುವೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ.

**

ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ನನ್ನನ್ನು ಅಧಿಕೃತವಾಗಿ ಘೋಷಿಸಿದೆ. 23 ರಂದು ನಾಮಪತ್ರ ಸಲ್ಲಿಕೆ ಮಾಡುವೆ – ಲಾಲಾಜಿ ಆರ್. ಮೆಂಡನ್ , ಬಿಜೆಪಿ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.