ADVERTISEMENT

ಕರಾವಳಿ ಕಾವಲು ಪಡೆಗೆ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 5:18 IST
Last Updated 1 ಸೆಪ್ಟೆಂಬರ್ 2014, 5:18 IST

ಉಡುಪಿ: ಸಮುದ್ರ ಮಾರ್ಗದಿಂದ ಆಂತರಿಕ ಭದ್ರತೆಗೆ ಎದುರಾಗಬಹುದಾದ ಸವಾಲು­ಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶ­ದಿಂದ ಆರಂಭಿಸಿರುವ ಕರಾವಳಿ ಕಾವಲು ಪಡೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. 

ಕರಾವಳಿ ಕಾವಲು ಪಡೆಗೆ ಒಟ್ಟು 570 ಸಿಬ್ಬಂದಿಗೆ ಮಂಜೂರಾತಿ ನೀಡಲಾಗಿದೆ. ಆದರೆ ಈಗಿರುವ  ಸಂಖ್ಯೆ 223 ಮಾತ್ರ. ಅಂದರೆ ಶೇ 50ಕ್ಕಿಂತಲೂ ಅಧಿಕ ಸಿಬ್ಬಂದಿ ಕೊರತೆ ಇದೆ.

ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 320 ಕಿ.ಮೀ ಕಡಲ ತೀರವನ್ನು ರಕ್ಷಣೆ ಮಾಡುವ ಉದ್ದೇಶದಿಂದ 1999ರಲ್ಲಿ ಕರಾವಳಿ ಕಾವಲು ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು.

ನಾಲ್ಕು ಠಾಣೆಗಳೊಂದಿಗೆ ಆರಂಭವಾದ ಪಡೆ ಈಗ 11 ಪೊಲೀಸ್ ಠಾಣೆಗಳನ್ನು ಹೊಂದಿದೆ. ಗಂಗೊಳ್ಳಿ, ಮಲ್ಪೆ, ಹೆಜಮಾಡಿ, ಭಟ್ಕಳ, ಹೊನ್ನಾವರ, ಕುಮಟಾ, ಮಂಗ­ಳೂರು, ಕಾರವಾರ ಮತ್ತು ಬೇಲೆಕೇರಿಯಲ್ಲಿ ತಲಾ ಒಂದು ಠಾಣೆಗಳಿವೆ. ಠಾಣೆಗಳಿಗೆ ಬೋಟ್‌ ಮತ್ತು ಅಗತ್ಯ ಸಾಧನ­­ಗಳನ್ನು ನೀಡಲಾಗಿದೆ. ಆದರೆ ಇವು­ಗಳನ್ನು ಬಳಕೆ ಮಾಡಿ ರಕ್ಷಣೆ ನೀಡಲು ಸಿಬ್ಬಂದಿಯೇ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

ಕಾವಲು ಪಡೆಯ ಸಿಬ್ಬಂದಿಯನ್ನು ಕಾರ್ಯ­ಕಾರಿ, ತಾಂತ್ರಿಕ ಮತ್ತು ಲಿಪಿಕ ಸಿಬ್ಬಂದಿ ಎಂದು ವಿಂಗಡಿಸಲಾಗಿದೆ. ಈ ಮೂರು ವಿಭಾಗ­ಗಳಲ್ಲಿಯೂ ಅಗತ್ಯದಷ್ಟು ಸಿಬ್ಬಂದಿ ಇಲ್ಲ.

438 ಮಂದಿ ಪೊಲೀಸ್‌ ಸಿಬ್ಬಂದಿ ಕೆಲಸ ಮಾಡಬೇಕಾದ ಜಾಗದಲ್ಲಿ ಕೇವಲ 195 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿ ಕಾವಲು ಪಡೆಯಲ್ಲಿ ಗಸ್ತಿಗೆ ಮಹತ್ವ ಹೆಚ್ಚು, ದಿನದ 24 ಗಂಟೆಯೂ ಸಮುದ್ರದಲ್ಲಿ ಗಸ್ತು ನಡೆಸಲು ತಾಂತ್ರಿಕ ಸಿಬ್ಬಂದಿ ಬೇಕು. 118 ಮಂದಿ ತಾಂತ್ರಿಕ ಸಿಬ್ಬಂದಿಗೆ ಮಂಜೂ­ರಾತಿ ಇದ್ದರೆ, ಕೇವಲ 18 ಮಂದಿ ಮಾತ್ರ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಜಿನ್‌ ಚಾಲ­ಕರು 27 ಮಂದಿ ಇರಬೇಕು. ಆದರೆ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ.


ಇವರಲ್ಲಿ ಕೆಲವು ಸಿಬ್ಬಂದಿ ವಾರದ ರಜೆ ಅಥವಾ ಇತರ ರಜೆ ತೆಗೆದುಕೊಂಡರೆ ಬೆರಳೆ­ಣಿಕೆ­ಯಷ್ಟು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವ­ಹಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿ ಎದುರಾ­ದರೆ ಗಂಡಾಂತರ ಖಚಿತ ಎಂಬಂತಹ ಪರಿಸ್ಥಿತಿ ಇದೆ.   9 ಠಾಣೆಗಳನ್ನು ನಿರ್ವಹಣೆ ಮಾಡಲು 14 ಮಂದಿ ಲಿಪಿಕ ಸಿಬ್ಬಂದಿಯ ಅಗತ್ಯ ಇದೆ. ಆದರೆ 10  ಮಂದಿ ಮಾತ್ರ ಇದ್ದಾರೆ.

ತೀವ್ರವಾಗಿರುವ ಸಿಬ್ಬಂದಿ ಕೊರತೆ ಭದ್ರತಾ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರು­ತ್ತಿದೆ. ಇರುವ ಸಿಬ್ಬಂದಿ ಮೇಲೆ ಒತ್ತಡವೂ ಹೆಚ್ಚಾಗುತ್ತಿದ್ದು, ಬಿಡುವಿಲ್ಲದೆ 24 ಗಂಟೆಯೂ ಕೆಲಸ ಮಾಡಬೇಕಾದ ಸನ್ನಿವೇಶಗಳು ಸಾಮಾನ್ಯ­­ವಾಗಿವೆ.

‘ತಾಂತ್ರಿಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ತಿಂಗಳ ಒಳಗೆ ಹೊಸ ಸಿಬ್ಬಂದಿ ಸೇರ್ಪಡೆಗೊಳ್ಳಲಿದ್ದಾರೆ. ಕಾರ್ಯಕಾರಿ ಸಿಬ್ಬಂದಿ­­­ಯನ್ನು ಕರಾವಳಿ ಕಾವಲು ಪಡೆಗೆ ನೇರವಾಗಿ ನೇಮಕ ಮಾಡಿಕೊಳ್ಳಲು ಸದ್ಯ ಅವಕಾಶ ಇಲ್ಲ. ಆದ್ದರಿಂದ ರಾಜ್ಯ ಪೊಲೀಸ್‌ ವಿಭಾಗದಿಂದಲೇ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಸದ್ಯ ಇರುವ ಸಿಬ್ಬಂದಿ­ಯನ್ನೇ ಸೂಕ್ತ ರೀತಿಯಲ್ಲಿ ಬಳಸಿ­ಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ’ ಎಂದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಪ್ರತಾಪ್‌ ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರ ಅಗತ್ಯ ಇರುವಷ್ಟು ಸಿಬ್ಬಂದಿ ನೀಡಿ­ದರೆ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡ­ಬಹುದು.

ಈಗಿರುವ ಪರಿಸ್ಥಿತಿ ನೋಡಿದರೆ ಇನ್ನು ಐದು ವರ್ಷ ಕಳೆದರೂ ಮಂಜೂರಾತಿ ಆಗಿರುವಷ್ಟು ಸಿಬ್ಬಂದಿಯನ್ನು ನಿಯೋಜನೆ ಮಾಡಲು ಸಾಧ್ಯ­ವಿಲ್ಲ ಎಂದು ಇಲಾಖೆಯ ಕೆಲ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT