ADVERTISEMENT

ಕಾಪು– ಉಡುಪಿ ಕ್ಷೇತ್ರದ ಅಭ್ಯರ್ಥಿಗಳಿಂದ ನಾಮಪತ್ರ

ರಘುಪತಿ ಭಟ್ ತಾಯಿ ಆಶೀರ್ವಾದ ಪಡೆದ ಪ್ರಮೋದ್ ಮಧ್ವರಾಜ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 12:35 IST
Last Updated 24 ಏಪ್ರಿಲ್ 2018, 12:35 IST
ಆಸ್ತಿ ವಿವರ
ಆಸ್ತಿ ವಿವರ   

ಉಡುಪಿ: ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿದರು.

ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವರಾದ ಅವರ ತಾಯಿ ಮನೋರಮಾ ಮಧ್ವರಾಜ್ ಸಹ ಜೊತೆಗೆ ಇದ್ದಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಸಿ ಹೊರಗೆ ಬರುವಾಗ ಮಾಜಿ ಶಾಸಕ ರಘುಪತಿ ಭಟ್‌ ಅವರ ತಾಯಿ ಸರಸ್ವತಿ ಅವರನ್ನು ನೋಡಿದ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಮಗನಿಗೆ ಆಶೀರ್ವಾದ ಮಾಡಲು ಅವರು ಮೊದಲೇ ಬಂದು ಕುಳಿತಿದ್ದರು. ‘ಇಂದು ಪುಷ್ಯ ನಕ್ಷತ್ರ. ನನ್ನ ತಾಯಿಯ ನಕ್ಷತ್ರ ಸಹ ಅದೇ ಆದ ಕಾರಣ ಅವರನ್ನು ಕರೆದುಕೊಂಡು ಬಂದೆ’ ಎಂದು ಪ್ರಮೋದ್ ಮಧ್ವರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ನಗರದ ಚಿತ್ತರಂಜನ್ ವೃತ್ತದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ರಘುಪತಿ ಭಟ್ ಅವರು ಮೆರವಣಿಗೆಯಲ್ಲಿ ಬಂದು ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ADVERTISEMENT

ಮೆರವಣಿಗೆ ಉದ್ದಕ್ಕೂ ಜಯಘೋಷಗಳು ಮೊಳಗಿದವು. ತಾಯಿ ಮತ್ತು ಪತ್ನಿ ಈ ಸಂದರ್ಭದಲ್ಲಿ ಇದ್ದರು. ಕಾಪು ಮಾಜಿ ಶಾಸಕ ಹಾಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರು ಸಹ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಉಮೇದುವಾರಿಕೆ ಸಲ್ಲಿಸಿದರು. ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು ನಗರದ ಕಾಂಗ್ರೆಸ್‌ ಕಚೇರಿಗೆ ಬಂದು ಕಾರ್ಯಕರ್ತರೊಂದಿಗೆ ಮಾತನಾಡಿದರು. ಆ ನಂತರ ಅಲ್ಲಿಂದ ಪಾದಯಾತ್ರೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸುವಾಗ ಬೆಂಬಲಿಗರು ಜಯ ಘೋಷ ಕೂಗುತ್ತಿದ್ದರು. ನಾಮಪತ್ರ ಸಲ್ಲಿಸಿ ಹಿಂದಿರುಗುವಾಗಲೂ ಅದೇ ಉತ್ಸಾಹದಿಂದ ಘೋಷಣೆ ಹಾಕಿದರು. ಅಭ್ಯರ್ಥಿಗಳಿಗೆ ವಿಭಿನ್ನ ಸಮಯ ನೀಡಿದ್ದರಿಂದ ಯಾವುದೇ ಗೊಂದಲ ಆಗಲಿಲ್ಲ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.