ADVERTISEMENT

ಕುಂದಾಪುರ: ಮುಷ್ಕರ ಯಶಸ್ವಿ, ಜನ ತತ್ತರ

ಉಡುಪಿ ಜಿಲ್ಲೆಯಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ– ಸ್ಥಗಿತಗೊಂಡ ಬಸ್‌ ಸೇವೆ, ಇತರ ವಾಹನಗಳೂ ವಿರಳ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 5:31 IST
Last Updated 3 ಸೆಪ್ಟೆಂಬರ್ 2015, 5:31 IST
ಭಾರತ್ ಬಂದ್ ಪರಿಣಾಮ ಹೆಬ್ರಿ ಪೇಟೆ ಬಿಕೋ ಎನ್ನುತ್ತಿದೆ- ಹೆಬ್ರಿ ಚಿತ್ರ
ಭಾರತ್ ಬಂದ್ ಪರಿಣಾಮ ಹೆಬ್ರಿ ಪೇಟೆ ಬಿಕೋ ಎನ್ನುತ್ತಿದೆ- ಹೆಬ್ರಿ ಚಿತ್ರ   

ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂದಿನ ಮುಷ್ಕರದ ಬಗ್ಗೆ ಸಿಐಟಿಯು ಹಾಗೂ ಇಂಟಕ್ ಬೆಂಬಲಿತ ಸಂಘಟ ನೆಯ ಕಾರ್ಯಕರ್ತರು ಸಾರ್ವಜನಿಕರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ ದ್ದರಿಂದ ಮುಷ್ಕರದ ಕರೆಗೆ ಸಾರ್ವಜನಿಕ ರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿತ್ತು. ಸರ್ಕಾರಿ  ಹಾಗೂ ಖಾಸಗಿ ಬಸ್ಸು ಗಳು ತಮ್ಮ ಸಂಚಾರ ಸ್ಥಗಿತ ಮಾಡಿದ್ದ ರಿಂದ ತಾಲ್ಲೂಕಿನಾದ್ಯಾಂತ ಜನ ಸಂಚಾರ ವಿರಳವಾಗಿತ್ತು.

ಖಾಸಗಿ ಬಾಡಿಗೆ ವಾಹನಗಳು ಹಾಗೂ ಟ್ರಕ್‌ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ವಾಹನಗಳನ್ನು ರಸ್ತೆಗೆ ಇಳಿಸದೆ ಇದ್ದುದರಿಂದಾಗಿ ಅಗತ್ಯ ಕಾರಣಗಳಿಗಾಗಿ ಸ್ವಂತ ವಾಹನಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಮೊದಲು ಮುಷ್ಕರಕ್ಕೆ ಬೆಂಬಲ ಸೂಚಿಸಿ ನಂತರ ಬೆಂಬಲ ಹಿಂತೆಗೆದುಕೊಂಡಿದ್ದ ಸಂಘಟ ನೆಗಳಿಗೆ ಸೇರಿದ್ದ ವಾಹನಗಳು ರಸ್ತೆಗೆ ಇಳಿಯದೆ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ವರ್ತಕರು ಬೆಳಿಗ್ಗೆ ಯಿಂದಲೆ ಅಂಗಡಿ-–ಮುಂಗಟ್ಟುಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಕೋಟೇಶ್ವರ, ಬಸ್ರೂರು, ಕುಂದಾ ಪುರ ಹಾಗೂ ತಲ್ಲೂರುಗಳಲ್ಲಿ ಸಂಘ ಟನೆಗೆ ಸೇರಿದ್ದ ಕಾರ್ಯಕರ್ತರು ಕೆಲ ಹೊತ್ತು ರಸ್ತೆ ತಡೆ ಮಾಡಿದ್ದರಿಂದ ಕೆಲ ಸಮಯ ಖಾಸಗಿ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ. ತಲ್ಲೂರು ಹೊರತು ಪಡಿಸಿ ಉಳಿದಂತೆ ಎಲ್ಲೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಮುರ್ಡೇ ಶ್ವರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಖಾಸಗಿ ಕಾರೊಂದರ ಪ್ರಯಾಣಿಕರಿಗೆ ತಲ್ಲೂರಿನಲ್ಲಿ ಮುಷ್ಕರದ ಬಿಸಿ ತಗುಲಿದೆ. ಮುಷ್ಕರ ನಡೆಸುತ್ತಿದ್ದ ಗುಂಪು ಕಾರನ್ನು ತಡೆದ ವೇಳೆಯಲ್ಲಿ ಗುಂಪಿನಲ್ಲಿ ಇದ್ದ ಕಿಡಿಗೇಡಿಯೊಬ್ಬ ಕಾರಿನ ಕನ್ನಡಿಗೆ ಕೈ ಯಿಂದ ಗುದ್ದಿದ ಪರಿಣಾಮ ಗಾಜು ಒಡೆದು ಹೋಗಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ನಡೆದ ಮಾತುಕತೆಯಲ್ಲಿ ಒಡೆದ ಗಾಜಿನ ಬಾಬ್ತು ದಂಡ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸ್ತ್ರಿ ಸರ್ಕಲ್ ಬಳಿಯ ರಾ.ಹೆ 66 ರಲ್ಲಿ ಕೆಲ ಹೊತ್ತು ಸಾಂಕೇತಿಕ ರಸ್ತೆ ನಡೆ ಸಿದ ಕಾರ್ಮಿಕ  ಸಂಘಟನೆಯ ಕಾರ್ಯ ಕರ್ತರು ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು. ವಿವಿಧ ಕಾರ್ಮಿಕ ಸಂಘಟನೆಯ ಪ್ರಮು ಖರಾದ ಎಸ್.ನರಸಿಂಹ, ಮಹಾಬಲ ವಡೇರಹೋಬಳಿ, ವಿ.ನರಸಿಂಹ, ರಾಜು ಪಡುಕೋಣೆ, ಲಕ್ಷಣ ಶೆಟ್ಟಿ, ಲಕ್ಷಣ ಬರೆಕಟ್ಟು, ನಾರಾಯಣ ಬೀಜಾಡಿ, ಸುರೇಶ್ ಕಲ್ಲಾಗಾರ್, ರಾಜೇಶ್ ವಡೇರ ಹೋಬಳಿ, ಶ್ರೀಕಾಂತ ಹೆಮ್ಮಾಡಿ, ಸುರೇಶ್ ಪುತ್ರನ್, ವಿ.ರಮೇಶ್ ಇದ್ದರು.

ಹೆಬ್ರಿ: ಬಂದ್ ಯಶಸ್ವಿ
ಹೆಬ್ರಿ ಭಾರತ್ ಬಂದ್ ಪರಿಣಾಮ ಹೆಬ್ರಿ ಪೇಟೆಯ ಬಹುತೇಕ ಅಂಗಡಿ ಮುಂಗಟ್ಟು ಗಳು ಬಂದ್ ಆಗಿತ್ತು. ಹೆಬ್ರಿಯಲ್ಲಿ ಬುಧವಾರ ವಾರದ ರಜೆಯಾಗಿದ್ದ ಪರಿಣಾಮ ಹೆಚ್ಚಿನ ಸಂಖ್ಯೆಯ ಅಂಗಡಿಗಳು ಬಂದ್ ಆಗಿ ದ್ದವು.  ಕೆಲವು ಹೋಟೆಲ್ ಅಂಗಡಿಗಳು ಸ್ವಲ್ಪ ಸಮಯ ವ್ಯಾಪಾರ ನಡೆಸಿದರು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದ ಕಾರಣ ಜನಸಂಚಾರ ಇಲ್ಲದೆ ಬಳಿಕ ಬಂದ್ ಮಾಡಿದ್ದಾರೆ. ಹೆಬ್ರಿಯ ರಿಕ್ಷಾ ಚಾಲಕರೂ ಬಂದ್ ಬೆಂಬಲಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬ್ಯಾಂಕ್ ಸಹಕಾರಿ ಸಂಘಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ವಹಿವಾಟು ನಡೆಸಿದ್ದವು.

ಬೈಂದೂರಲ್ಲಿ ಕಾರ್ಮಿಕರಿಂದ ರಸ್ತೆತಡೆ
ಬೈಂದೂರು
: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಇಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್‌ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾದ್ದ ರಿಂದ ಬಸ್‌ಗಳು ಸ್ಥಗಿತವಾಗಿದ್ದುವು. ಕೆಲ ವೆಡೆ ರಿಕ್ಷಾ, ಟ್ಯಾಕ್ಸಿ ಚಾಲಕರೂ ಮುಷ್ಕ ರದಲ್ಲಿ ಪಾಲ್ಗೊಂಡಿದ್ದರು. ಸರಕು ಸಾಗಣೆ ವಾಹನ ಮತ್ತು ಖಾಸಗಿ ವಾಹನಗಳು ಎಂದಿನಂತೆ ಓಡಾಡಿದುವು.

ಸಿಐಟಿಯು ಸಂಘಟನೆಗೆ ಸೇರಿದ ಅಕ್ಷರ ದಾಸೋಹ ನೌಕರರು, ಆಶಾ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು ಬೈಂದೂರು ಜಂಕ್ಷನ್‌ನಲ್ಲಿ ಕೆಲಕಾಲ ಹೆದ್ದಾರಿ ತಡೆ ನಡೆಸಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಸಂಘಟನೆಯ ಪ್ರಮುಖ ವೆಂಕಟೇಶ ಕೋಣಿ ಅವರನ್ನು ಉದ್ದೇಶಿಸಿ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಗಣೇಶ ತೊಂಡೆಮಕ್ಕಿ, ಗಣೇಶ ಮೊಗವೀರ, ಜಯಶ್ರೀ ಪಡುವರಿ, ಶಾರದಾ ಬೈಂದೂರು, ಸವಿತಾ, ರೋನಿ ನಝ ರತ್‌, ಮಂಜು ಪಡುವರಿ, ಮಂಜು ಪೂಜಾರಿ ಪಡುವರಿ ಮುಷ್ಕರದ ನೇತೃತ್ವ ವಹಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು.  ಸಂಚಾರ ಸೌಲಭ್ಯ ಕೊರತೆಯ ಕಾರಣದಿಂದ ಸರ್ಕಾರಿ ಕಚೇರಿಗಳಲ್ಲಿ ಹಲವು ನೌಕರರ ಗೈರು ಹಾಜರಿ ಕಂಡುಬಂತು. ಗ್ರಾಮ ಪಂಚಾ ಯಿತಿ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿ ಸಿದ್ದರು. ಬಸ್‌ ಮೂಲಕ ಬರಬೇಕಾಗಿದ್ದ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಬರದಿದ್ದೆಡೆ ಗ್ರಾಮ ಪಂಚಾಯಿತಿಗಳು ಬಾಗಿಲು ಮುಚ್ಚಿದ್ದುವು.

ಗಂಗೊಳ್ಳಿ, ಉಪ್ಪುಂದ, ಬೈಂದೂರಿ ನಲ್ಲಿ ಕಾರ್ಮಿಕ ಮುಖಂಡರ ಮನವಿಯ ಮೇರೆಗೆ ಕೆಲವು ಅಂಗಡಿ ಮಾಲೀಕರು ಬಾಗಿಲು ಮುಚ ದರು. ಪ್ರಮುಖ ಸ್ಥಳ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಬ್ರಹ್ಮಾವರ: ಉತ್ತಮ ಪ್ರತಿಕ್ರಿಯೆ
ಬ್ರಹ್ಮಾವರ
: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ ಬಂದ್‌ಗೆ ಬ್ರಹ್ಮಾವರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುಂಜಾನೆಯಿಂದಲೇ ಬಸ್ಸುಗಳು ಚಲಿಸದ ಕಾರಣ ಜನರ ಓಡಾಟ ಕಡಿಮೆ ಯಾಗಿತ್ತು. ರಿಕ್ಷಾ ಮತ್ತು ಕಾರು ಚಾಲಕ ಮಾಲಕರು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಬಾರ್ಕೂರು, ಸಾಸ್ತಾನ, ಸಾಲಿಗ್ರಾಮ, ಕೋಟ ಪರಿ ಸರದಲ್ಲಿಯೂ ಖಾಸಗಿ ಬಸ್ಸುಗಳ ಓಡಾಟ ಇಲ್ಲದೇ ಇದ್ದಿದ್ದರಿಂದ ಜನರು ಪರದಾ ಡಿದರು. ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರಿಂದ ವಿದ್ಯಾರ್ಥಿಗಳಿಗೆ ಯಾ ವುದೇ ತೊಂದರೆಯಾದ ವರದಿ ಯಾ ಗಿಲ್ಲ. ಅಂಗಡಿ ಹೋಟೆಲ್‌ಗಳು ಎಂದಿ ನಂತೆ ತೆರೆದಿದ್ದವು. ಬಿಎಸ್‌ ಎನ್ಎಲ್ ಕಚೇರಿ ಮುಚ್ಚಿತ್ತು. ಬಂದ್ ವೇಳೆ ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ  ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.